ನೀರು ಮತ್ತು ನೈರ್ಮಲ್ಯ ಸಮಿತಿಯನ್ನು ಗ್ರಾಮ ಸಭೆಯಲ್ಲಿ ರಚಿಸಬೇಕೆಂಬ ನಿಯಮವಿದ್ದರೂ ಅದನ್ನು ಮೀರಿ ಕಳೆದ ಗ್ರಾಮ ಸಭೆಯಲ್ಲಿ ಅದರ ವಿಚಾರವನ್ನೇ ಪ್ರಸ್ತಾಪಿಸದೆ ಪಂಚಾಯತ್ ಆಡಳಿತ ಅವರಷ್ಟಕ್ಕೇ ಮಾಡಿರುವ ಸಮಿತಿಯನ್ನು ಅನುರ್ಜಿತಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಮತ್ತು ಚುನಾವಣಾ ಆಯೋಗಕ್ಕೂ ದೂರು ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ ವಿದ್ಯಮಾನಕ್ಕೆ ಸಭೆ ಸಾಕ್ಷಿಯಾದುದು ಏ. ೨೩ ರಂದು ನಡೆದ ಕುವೆಟ್ಟು ಗ್ರಾಮಸಭೆಯಲ್ಲಿ.
ಗ್ರಾಮ ಪಂಚಾಯತ್ನ ಎರಡನೇ ಸುತ್ತಿನ ಗ್ರಾಮ ಸಭೆಯು ಇಲ್ಲಿನ ಮದ್ದಡ್ಕ ಸಮುದಾಯ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿತು. ಉಪಾಧ್ಯಕ್ಷೆ ಅಕ್ಷತಾ ಕೆ. ಶೆಟ್ಟಿ ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ. ಸದಸ್ಯ ಗೋಪಿನಾಥ ನಾಯಕ್ ವಿಶೇಷ ಆಹ್ವಾನಿತರಾಗಿದ್ದರು. ಕಾರ್ಯದರ್ಶಿ ರವಿ ನಿ. ಬನಪ್ಪ ಗೌಡ್ರ, ಪಿಡಿಒ ರವೀಂದ್ರ ಆರ್. ನಾಯಕ್ ಸಿಬ್ಬಂದಿ ವಸಂತ ಶೆಟ್ಟಿ ಅವರು ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿದರು. ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತರ ಸಿ.ಆರ್. ನರೇಂದ್ರ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.
ನೈರ್ಮಲ್ಯ ಸಮಿತಿಯನ್ನು ಅನುರ್ಜಿತಗೊಳಿಸಿ ಗ್ರಾಮ ಸಭೆಯಲ್ಲೇ ಮತ್ತೆ ಮರು ಆಯ್ಕೆ ಮಾಡಬೇಕು. ಪಂಚಾಯತ್ ಆಡಳಿತ ಮಂಡಳಿಯವರಿಗೆ ಬೇಕಾದವರನ್ನು ಸೇರಿಸಿ ಮಾಡಿದ್ದು ಸರಿಯಲ್ಲ ಎಂದು ಚಂದ್ರಹಾಸ ಕೇದೆ, ಮುಹಮ್ಮದ್ ರಫೀಕ್ ಅಲಾದಿಕೊಟ್ಟಿಗೆ, ಹರಿಪ್ರಸಾದ್ ಭಟ್ ಅವರು ಆಕ್ಷೇಪಿಸಿದರು. ಅಧಿಕಾರಿಗಳು ತಪ್ಪು ಮಾಡಿದ್ದು ಇಲ್ಲಿ ಸಾಬೀತಾಗಿದೆ. ಅವರ ವಿರುದ್ಧವೂ ಕ್ರಮ ಆಗಬೇಕು ಎಂದು ಪಟ್ಟುಬಿಡದೆ ಒತ್ತಾಯಿಸಲಾಯಿತು. ನೋಡೆಲ್ ಅಧಿಕಾರಿ, ಪಿಡಿಒ ಹಾಗೂ ಅಧ್ಯಕ್ಷರು ಇದಕ್ಕೆ ಉತ್ತರ ನೀಡಲು ಪ್ರಯತ್ನ ಪಟ್ಟರೂ ಗ್ರಾಮಸ್ಥರು ಮಾತ್ರ ಬಿಡಲೇ ಇಲ್ಲ.
ಪಂಚಾಯತ್ನ ಅಭಿವೃದ್ದಿ ವಿಚಾರಗಳ ಕ್ರಿಯಾ ಯೋಜನೆ ಗ್ರಾಮ ಸಭೆಯಲ್ಲೇ ಆಗಬೇಕು ಎಂದು ಚಂದ್ರಹಾಸ ಕೇದೆ ಅವರು ಆಗ್ರಹಿಸಿದರು. ಅದಕ್ಕೆ ಆಡಳಿತದ ಕಡೆಯಿಂದ ನೀರಸ ಪ್ರತಿಕ್ರಿಯೆ ಬಂದಾಗ ತೀವ್ರವಾಗಿ ಒತ್ತಾಯಿಸಿದ ಅವರು ಈ ವಿಚಾರವನ್ನು ಮತ್ತಷ್ಟು ಒತ್ತಿ ಪ್ರಸ್ತಾಪಿಸಿದರು.
ಸಭೆಯಲ್ಲಿ ಆದರೂ ಸಾಮಾನ್ಯ ಸಭೆಯಲ್ಲಿ ಅದನ್ನು ತಿರಸ್ಕರಿಸುವ ಹಕ್ಕು ಪಂಚಾಯತಕ್ಕೆ ಇದೆ ಎಂದು ಅಧ್ಯಕ್ಷರು ಹೇಳಿದಾಗ, ಅದು ಸಾಮಾನ್ಯ ಸಭೆಯಲ್ಲಿ ಬೇಕಾದರೆ ನೀವು ಕೈಬಿಡಿ,. ಆದರೆ ನಿಯಮಾನುಸಾರ ಗ್ರಾಮಸಭೆಯಲ್ಲೇ ಕ್ರಿಯಾಯೋಜನೆ ನಡೆಯಲಿ. ನಮಗೆ ಇಲ್ಲಿ ವಿಶ್ವಾಸದ ಕೊರತೆ ಎದುರಾಗಿದೆ. ೧೦ ವರ್ಷಗಳಿಂದ ನಾವು ಗ್ರಾಮ ಸಭೆಯಲ್ಲಿ ಬೊಬ್ಬೆ ಹೊಡೆಯುತ್ತಾ ಬಂದಿರುವ ಅನೇಕ ಕಾಮಗಾರಿಗಳು, ಮನವಿಗಳ ಮೂಲಕ ನೀಡಿದ ಬೇಡಿಕೆಗಳು ಇಂದಿಗೂ ಈಡೇರಿಲ್ಲ. ಈಡೇರುತ್ತದೆ ಎಂಬ ಭರವಸೆಯೂ ನಮಗಿಲ್ಲ.
ಇಲ್ಲೇ ಪಕ್ಕದಲ್ಲಿರುವ ಬಸ್ಟ್ಯಾಂಡ್ ದುರಸ್ಥಿ, ಮೋರಿ ದುರಸ್ಥಿ, ಮೈದಾನದ ದುರಸ್ಥಿ ಇದೆಲ್ಲವೂ ಇಂದಿಗೂ ಬೇಡಿಕೆಯಾಗಿಯೇ ಮುಂದುವರಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಬಳಿಕ ಆ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಪಂಚಾಯತ್ಗೆ ಅಳವಡಿಸಿದ ಸಿ.ಸಿ. ಕ್ಯಾಮರಾ ವಿಚಾರದಲ್ಲಿ ಆನಂದ ಶೆಟ್ಟಿ ಐಸಿರಿ ಅವರು ಕೇಳಿದ ಪ್ರಶ್ನೆಗೆ ಭಾರೀ ಚರ್ಚೆಯೇ ನಡೆಯಿತು. ಅದರ ಮಾನಿಟರ್ ಮತ್ತು ಕಂಟ್ರೋಲ್ ಅಧ್ಯಕ್ಷರ ಕಚೇರಿಯಲ್ಲಿಟ್ಟಿರುವುದು ಸರಿಯಲ್ಲ. ಅದನ್ನು ಪಿಡಿಒ ಕೊಠಡಿಯಲ್ಲಿಡಬೇಕು ಎಂಬ ವಿಚಾರಕ್ಕೆ ಅಲ್ಲಿ ಹೆಚ್ಚು ಪ್ರಾಶಸ್ಥ್ಯವಿದ್ದ ಹಾಗೆ ಗೋಚರಿಸಿತು. ಪಿಡಿಒ ಅವರು, ತನ್ನ ಕೊಠಡಿಯಲ್ಲಿದ್ದ ಸಿ.ಸಿ. ಕ್ಯಾಮರಾವನ್ನು ಮೇಲಕ್ಕೆ ತಿರುಗಿಸಿಟ್ಟಿದ್ದಾರೆ ಎಂದು ಆಕ್ಷೇಪಣೆಗಳು ವ್ಯಕ್ತವಾದವು. ಈ ಸಂದರ್ಭ ಮಾತನಾಡಿದ ಅಧ್ಯಕ್ಷರು, ನಮ್ಮ ಸಿಬ್ಬಂದಿಗಳು ಜನತೆ ನೀಡುವ ಸೇವೆಯನ್ನು ಖಾತರಿಪಡಿಸಿಕೊಳ್ಳಲು ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ಇದರಲ್ಲಿ ನಮಗೆ ಯಾವುದೇ ಸ್ವಾರ್ಥವಿಲ್ಲ. ಮುಂದಕ್ಕೆ ನನ್ನ ಕೊಠಡಿಯಲ್ಲೂ ಅಳವಡಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪೊಯ್ಯುಟ್ಟು ದಾರಿದೀಪ ಉದ್ಘಾಟನೆಗೆ ಬಿಜೆಪಿ ಪಕ್ಷದ ಚುನಾವಣಾ ಚಿಹ್ನೆ ಇರುವ ಬ್ಯಾನರ್ ಹಾಕಿ ಅಧ್ಯಕ್ಷರಿಗೆ ಶುಭ ಕೋರಿ ಹಾಕಿರುವುದು ಸರಿಯಲ್ಲ ಎಂದು ಹರಿಪ್ರಸಾದ್ ಭಟ್ ಆಕ್ಷೇಪವೆತ್ತಿದರು. ಪಂಚಾಯತ್ನಲ್ಲಿ ಪಕ್ಷವಿಲ್ಲ. ನೀವು ಗೆದ್ದಿರುವ ಚುನಾವಣಾ ಚಿಹ್ನೆಯನ್ನೂ ಬೇಕಾದರೆ ಬಳಸಿ ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ಅಧ್ಯಕ್ಷರು, ಅದು ಪಂಚಾಯತ್ನಿಂದ ಅಳವಡಿಸಿದ ಬ್ಯಾನರ್ ಅಲ್ಲ. ಜನರೇ ಅಭಿಮಾನದಿಂದ ಹಾಕಿರಬಹುದು. ನಮಗೇನು ಮಾಡಲು ಆಗುವುದಿಲ್ಲ. ಬ್ಯಾನರ್ಗೆ ಅನುಮತಿ ಪಡೆದುಕೊಂಡು ಹಾಕಿದ್ದಾರೆ ಎಂದರು. ಈ ಸಂದರ್ಭ ಮಾತನಾಡಿದ ಚಂದ್ರಹಾಸ ಕೇದೆ ಮತ್ತು ಮಹಮ್ಮದ್ ರಫೀಕ್ ಅವರು, ಅದರ ಉದ್ಘಾಟನೆಗೆ ಮತ್ತು ಇತ್ತೀಚೆಗೆ ಅಂಬೇಡ್ಕರ್ ಜಯಂತಿಯಂದು ಸಿಂಟೆಕ್ಸ್ ನೀರಿನ ಟ್ಯಾಂಕಿ ವಿತರಣೆ ವೇಳೆ ಮಾಜಿ ಶಾಸಕರನ್ನು ಕರೆದು ಕಾರ್ಯಕ್ರಮ ಮಾಡಿದ್ದು ಶಿಷ್ಟಾಚಾರದ ಉಲ್ಲಂಘನೆ ಎಂದು ಆಕ್ಷೇಪಿಸಿದರು. ಅಲ್ಲದೆ ದಾರಿದೀಪ ಉದ್ಘಾಟನೆ ವೇಳೆ ಆ ವಾರ್ಡ್ನ ಸದಸ್ಯರಿಗೂ ತಿಳಿಸದೆ ಮಾಡಿದ್ದೂ ಆಕ್ಷೇಪಾರ್ಹ ಎಂದು ವಾದ ಮಂಡಿಸಿದರು.
ನೀರಿನ ಸಂಪರ್ಕ ಕಡಿತ ವಿಚಾರಕ್ಕೆ ಸಂಬಂಧಿಸಿ ೧ ಸಾವಿರಕ್ಕಿಂತ ಹೆಚ್ಚು ನೀರಿನ ತೆರಿಗೆ ಬಾಕಿ ಇರಿಸಿಕೊಂಡಿರುವ ಸಂಪರ್ಕ ಕಡಿತ ಮಾಡಿ ೨ ಸಾವಿರ ಉಳಿಸಿಕೊಂಡವರನ್ನು ಬಿಟ್ಟಿದ್ದೀರಿ. ಇದು ಪಕ್ಷಪಾತ ನೀತಿ ಎಂದು ದಿನೇಶ್ ಮೂಲ್ಯ ಕೊಂಡೆಮಾರು ಅವರು ತೀವ್ರವಾಗಿ ಆಕ್ಷೇಪಿಸಿದರು. ನೀರಿನ ಪುಸ್ತಕ ತರಿಸಿ ವೇದಿಕೆಯಲ್ಲಿ ಪರಿಶೀಲನೆಯನ್ನೂ ನಡೆಸಲಾಯಿತು. ಈ ವೇಳೆ ಕೆಲಕಾಲ ಗ್ರಾಮಸಭೆ ಜಮಾಬಂದಿ ಸಭೆಯಂತೆ ಕಂಡು ಬಂತು.
ಬೇಡಿಕೆ ಮತ್ತು ಚರ್ಚೆಗಳು :
ಮದ್ದಡ್ಕ ತೋಟಗಾರಿಕಾ ಫಾರ್ಮ್ನಲ್ಲಿ ಕಾಡು ಬೆಳೆದು ಕಾಡು ಪ್ರಾಣಿಗಳು ಜೀವಿಸುತ್ತಿದೆ. ಇದನ್ನು ಇಲಾಖೆ ಗಮನಿಸಬೇಕು.
ಓಡಿಲ್ನಾಳ ಗ್ರಾಮದಲ್ಲಿ ಕಾನೂನು ಬಾಹಿರ ದಾರಿದೀಪಗಳು ಉರಿಯುತ್ತಿದೆ. ಅದನ್ನು ತೆರವುಗೊಳಿಸಿ.
ಕಟ್ಟಡಬೈಲು ಶಾಲೆಗೆ ಶಿಕ್ಷಕರ ಕೊರತೆ ಇದೆ ಕೂಡಲೇ ನೀಗಿಸಿ.
ಸುಮುದಾಯ ಭವನದ ಪಕ್ಕದಲ್ಲೇ ಕೊಳಚೆ ನೀರು ಶೇಖರಣೆಯಾಗಿ ಸೊಳ್ಳೆ ಉತ್ಪಾದನಾ ಕೇಂದ್ರದಂತಾಗಿದೆ. ಆರೋಗ್ಯ ಇಲಾಖೆಯಿಂದ ಕ್ರಮ ಕೈಗೊಳ್ಳಿ.
ಕೊಂಕೋಡಿ ಬದ್ಯಾರು ಪರಿಸರದಲ್ಲಿ ತೀವ್ರ ಲೋ ವೋಲ್ಟೇಜ್ ಸಮಸ್ಯೆ ಇದೆ. ಮೆಸ್ಕಾಂ ಇಲಾಖೆ ತಕ್ಷಣ ಸ್ಪಂದಿಸಿ.
ಗುರುವಾಯನಕೆರೆ ಶಾಲಾ ರಸ್ತೆ ಡಾಂಬರೀಕರಣಗೊಳಿಸಿ.
ಗುರುವಾಯನಕೆರೆ ಶಾಲೆ ಬಳಿ ಹಂಪ್ಸ್ ಅಳವಡಿಸಿ ಮಕ್ಕಳನ್ನು ಅಪಘಾತದಿಂದ ಕಾಪಾಡಿ.
ಗುರುವಾಯನಕೆರೆ ಒತ್ತುವರಿ ತೆರವುಗೊಳಿಸಿ.
ಗ್ರಾಮ ಸಭೆಯ ಪ್ರಚಾರಕ್ಕೆ ಮಾಡಿದ ಬ್ಯಾನರ್ನ ಲೆಕ್ಕ ಕೊಡಿ.
ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ಸಭೆ ಪ್ರಾರಂಭಗೊಳ್ಳುವ ಹಂತದಲ್ಲಿ ಸಾಕಷ್ಟು ಗ್ರಾಮಸ್ಥರು ಇಲ್ಲದ್ದರಿಂದ ಕೊರಂ ವಿಚಾರವೆತ್ತಿ ಸಭೆ ಹೇಗೆ ಸಿಂಧುವಾಗುತ್ತದೆ ಎಂಬ ವಾದ ನಡೆಯಿತು. ಸ್ವಲ್ಪ ಹೊತ್ತಿನಲ್ಲಿ ಮತ್ತಷ್ಟು ಮಂದಿ ಬಂದ ಬಳಿಕ ಸಭೆ ನಡೆಯಿತು. ದೀರ್ಘವಾದ ಸಭೆಯು ಮಧ್ಯಾಹ್ನ ೩ ಗಂಟೆಯವರೆಗೆ ಮುನ್ನಡೆದಾಗ ಮಾರ್ಗದರ್ಶಿ ಅಧಿಕಾರಿಗಳು ಸಭೆಯನ್ನು ಊಟದ ನಂತರಕ್ಕೆ ಮುಂದೂಡಿದರು. ಮತ್ತೆ ೩.೩೦ಕ್ಕೆ ಪ್ರಾರಂಭವಾದ ಸಭೆಯಲ್ಲಿ ಗ್ರಾಮಸ್ಥರ ಸಂಖ್ಯೆ ತೀರಾ ಕ್ಷೀಣವಾಗಿತ್ತು. ಬೆಳಗ್ಗಿನ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣರಾಗಿದ್ದವರು ಮಧ್ಯಾಹ್ನದ ನಂತರವೂ ಇದ್ದು ಚರ್ಚೆ ನಡೆಸುತ್ತಿದ್ದಾಗ ಇನ್ನಷ್ಟು ಜನ ಸಭೆಗೆ ಆಗಮಿಸಿದರು. ವಿವಿಧ ಇಲಾಖಾವಾರು ಮಾಹಿತಿಗಳು ನಡೆದು ಸಂಬಂಧಿತ ಇಲಾಖಾವಾರು ಚರ್ಚೆಗಳು ನಡೆದವು. ಕಳೆದ ಬಾರಿ ಅಪರಾಹ್ನ ಪ್ರಾರಂಭವಾದ ಸಭೆ ರಾತ್ರಿ ೮ ಗಂಟೆವರೆಗೆ ನಡೆದಿದ್ದರೆ ಈ ಬಾರಿ ಬೆಳಗ್ಗಿನಿಂದ ಸಂಜೆ ೫.೩೦ರವರೆಗೂ ಸಭೆ ನಡೆಯಿತು.