ಪೆರಾಡಿ: ಜಮೀನು ಹಾಗೂ ಹಣಕ್ಕಾಗಿ ನಿರಂತರವಾಗಿ ಪೀಡಿಸುತ್ತಿದ್ದ ಆರೋಪಿಗಳು ಚಿಕ್ಕಪ್ಪನನ್ನೇ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪೆರಾಡಿ ಗ್ರಾಮದ ಕುರೆದ್ದುವಿನಲ್ಲಿ ಎ.೨೨ರ ರಾತ್ರಿ ಸಂಭವಿಸಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೆರಾಡಿಯ ಕುರೆದ್ದು ನಿವಾಸಿ ದಿ. ಮೊಂಟ ಮೂಲ್ಯ ಅವರ ಪುತ್ರ ಸುಂದರ ಮೂಲ್ಯ (೫೫) ಮೃತಪಟ್ಟ ದುರ್ದೈವಿ. ಸುಂದರ ಮೂಲ್ಯರ ಮನೆ ಸಮೀಪವೇ ವಾಸವಾಗಿರುವ ಇವರ ಸಹೋದರ ಅಣ್ಣಿ ಮೂಲ್ಯರ ಪುತ್ರರಾದ ದಯಾನಂದ (೩೨) ಹಾಗೂ ಸತೀಶ (೩೭) ಜೈಲು ಪಾಲಾಗಿರುವ ಆರೋಪಿಗಳು.
ನಡೆದದ್ದೇನು?: ಎ.೨೨ರ ಸಂಜೆ ಪೆರಾಡಿ ಸಮೀಪದ ಅಂಗಡಿಗೆ
ಆಗಮಿಸಿದ್ದ ಸುಂದರ ಮೂಲ್ಯರನ್ನು ಭೇಟಿಯಾಗಿದ್ದ ಸತೀಶ ಸಾಲದ ರೂಪದಲ್ಲಿ ಹಣದ ಬೇಡಿಕೆ ಇರಿಸಿದ್ದ ಎನ್ನಲಾಗಿದೆ. ಇದಕ್ಕೆ ನಯವಾಗಿಯೇ ತಿರಸ್ಕರಿಸಿದ್ದ ಸುಂದರ ಮೂಲ್ಯರೊಂದಿಗೆ ಮಾತಿಗೆ ಮಾತು ಬೆಳೆಸಿ ಯದ್ವಾ ತದ್ವಾ ಹಲ್ಲೆ ನಡೆಸಿದ್ದಾರೆ. ಇಲ್ಲಿಂದ ಮನೆಗೆ ಬಂದಿದ್ದ ಸುಂದರ ಮೂಲ್ಯರ ಮನೆಗೂ ಆಗಮಿಸಿ ಸಹೋದರ ಸತೀಶನನ್ನು ಕರೆಸಿದ ದಯಾನಂದ ಜಮೀನು ವಿವಾದವನ್ನೂ ಮುಂದಿಟ್ಟು ಯದ್ವತದ್ವಾ ಹಲ್ಲೆ ನಡೆಸಿದ್ದು, ಕೆನ್ನೆಗೆ ಬಿದ್ದ ಬಲವಾದ ಏಟಿನಿಂದ ನೆಲಕ್ಕುರುಳಿದ ಸುಂದರ ಮೂಲ್ಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪತ್ನಿ, ಮಕ್ಕಳು ಮನೆಯಲ್ಲಿರಲಿಲ್ಲ: ಮೃತರ ಪತ್ನಿ ಸುಜಾತರವರು ಇಬ್ಬರು ಪುಟ್ಟ ಮಕ್ಕಳೊಂದಿಗೆ ಮುದ್ದಾಡಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ತವರು ಮನೆಯಾದ ವೇಣೂರಿನ ಕಾಂತಿಬೆಟ್ಟುವಿಗೆ ಆಗಮಿಸಿದ್ದರು. ರಾತ್ರಿ ಸುಮಾರು ೯.೧೫ರ ಸುಮಾರಿಗೆ ಸುಜಾತರವರ ಮೊಬೈಲ್ಗೆ ಕರೆ ಮಾಡಿದ ದಯಾನಂದ, ಚಿಕ್ಕಪ್ಪ ದಾರಿ ಬದಿಯಲ್ಲಿ ಬಿದ್ದಿದ್ದು, ಎಬ್ಬಿಸಿ ಮನೆಗೆ ತಲುಪಿಸಿದಾಗ ಮನೆಯಂಗಳದಲ್ಲೂ ಬಿದ್ದಿದ್ದಾರೆಂದು ತಿಳಿಸಿದ್ದಾನೆ. ಪತ್ನಿ ಸುಜಾತರವರು ಮನೆಗೆ ಬಂದು ನೋಡುವಷ್ಟರಲ್ಲಿ ಗಂಡ ಸುಂದರ ಮೂಲ್ಯರವರ ಮೃತದೇಹ ಮನೆಯಂಗಳ ದಲ್ಲಿ ಪತ್ತೆಯಾಗಿತ್ತು.
ಸ್ಥಳದಲ್ಲಿದ್ದ ಆರೋಪಿಗಳು: ರಾತ್ರಿ ಸಂಬಂಧಿಕರು ಬಂದು ಮೃತದೇಹವನ್ನು ಬಂದು ಗಮನಿಸುತ್ತಿದ್ದಂತೆ ಸ್ಥಳದಲ್ಲಿದ್ದ ದಯಾನಂದ ಮತ್ತು ಸತೀಶ ಅಂತ್ಯ ಸಂಸ್ಕಾರ ಏರ್ಪಾಡು ಮಾಡುವಂತೆ ತಿಳಿಸಿದ್ದಾರೆ. ಆದರೆ ಸಂಶಯ ಉಂಟಾಗಿ ಸಂಬಂಧಿಕರು ವೇಣೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಮರುದಿನ ಬೆಳಿಗ್ಗೆ ವೇಣೂರು ಪೊಲೀಸರು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ಸ್ಥಳದಲ್ಲಿದ್ದ ದಯಾನಂದ ಮತ್ತು ಸತೀಶ ಸ್ಥಳದಿಂದ ಪರಾರಿಯಾಗಿದ್ದರು.
ಬೆದರಿಕೆಯೊಡ್ಡಿದ್ದ ಆರೋಪಿಗಳು: ಜಮೀನು, ಹಣ ಹಾಗೂ ಬಾವಿಯಿಂದ ನೀರು ತೆಗೆಯುವ ವಿಷಯದಲ್ಲಿ ಸುಂದರ ಮೂಲ್ಯರೊಂದಿಗೆ ದಯಾನಂದ ನಿರಂತರವಾಗಿ ಗಲಾಟೆ ನಡೆಸುತ್ತಿದ್ದುದ್ದಲ್ಲದೆ ಹಲವಾರು ಬಾರಿ ಕೊಲ್ಲುವುದಾಗಿ ಜೀವಬೆದರಿಕೆ ಒಡ್ಡಿರುವುದಾಗಿ ಮೃತರ ಪತ್ನಿ ಸುಜಾತರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮೊಬೈಲ್ ಸ್ವಿಚ್ ಆಫ್: ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ತಲುಪುತ್ತಿದ್ದಂತೆ ಸ್ಥಳದಿಂದ ಪರಾರಿಯಾದ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಇದು ಮತ್ತಷ್ಟು ಸಂಶಯಕ್ಕೆ ಕಾರಣವಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿ ವೇಣೂರು ಠಾಣಾ ಪ್ರಭಾರ ಪೊಲೀಸ್ ಉಪ ನಿರೀಕ್ಷಕ ಶೀನಪ್ಪ ಗೌಡರವರ ನೇತೃತ್ವದ ತನಿಖಾ ತಂಡ ರಚಿಸಲಾಗಿದ್ದು, ಎ.೨೫ರಂದು ಬಂಟ್ವಾಳ ತಾಲೂಕಿನ ಸೂರಿಕುಮೇರುನಲ್ಲಿರುವ ಸಂಬಂಧಿಕರ ಮನೆಯ ಬಳಿಯಿಂದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಉನ್ನತ ಪೊಲೀಸ್ ಅಧಿಕಾರಿ ಗಳಿಂದ ಪರಿಶೀಲನೆ : ದ.ಕ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಎಸ್. ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ತೀವ್ರ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ಭಾಸ್ಕರ ರೈ, ಬೆಳ್ತಂಗಡಿ ವೃತ್ತ ನಿರೀಕ್ಷಕ ಲಿಂಗಪ್ಪ ಪೂಜಾರಿ, ಠಾಣಾ ಪ್ರಭಾರ ಇನ್ಸ್ಪೆಕ್ಟರ್ ಲಿಂಗದಾಲ್, ವೇಣೂರು ಠಾಣಾ ಎಎಸ್ಐ ಶೀನಪ್ಪ ಗೌಡ ಹಾಗೂ ಸಿಬ್ಬಂದಿ, ಬೆಳ್ತಂಗಡಿ ಪೊಲೀಸ್ ಉಪ ನಿರೀಕ್ಷಕ ಸಂದೇಶ್ ಪಿ.ಜಿ. ಹಾಗೂ ಸಿಬ್ಬಂದಿ ಆಗಮಿಸಿ ತೀವ್ರ ತನಿಖೆ ಹಾಗೂ ಮಹಜರು ನಡೆಸಿದರು. ಮಂಗಳೂರು ವೈದ್ಯರ ತಂಡ ಭೇಟಿ ನೀಡಿ ಮೃತದೇಹ ಪರೀಕ್ಷಿಸಿದ್ದು, ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಅವರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಳೂರಿಗೆ ಕೊಂಡೊಯ್ಯಲಾಗಿತ್ತು.