ಪದವು-ಪುದುವೆಟ್ಟು ರಸ್ತೆ ಡಾಮರೀಕರಣಕ್ಕೆ ಗ್ರಾಮಸ್ಥರ ಆಗ್ರಹ

Advt_NewsUnder_1
Advt_NewsUnder_1

 ಪುದುವೆಟ್ಟು : ಪುದುವೆಟ್ಟು ಗ್ರಾಮ ಪಂಚಾಯತದ ಗ್ರಾಮ ಸಭೆ ಪಂಚಾಯತದ ಅಧ್ಯಕ್ಷೆ ಶ್ರೀಮತಿ ನೀಲಮ್ಮ ಅವರ ಅಧ್ಯಕ್ಷತೆಯಲ್ಲಿ ಎ.16ರಂದು ಪಂಚಾಯತು ಸಭಾಂಗಣದಲ್ಲಿ ನಡೆಯಿತು.
ಉಪಾಧ್ಯಕ್ಷ ಬೊಮ್ಮಣ್ಣ ಗೌಡ ಮಠ, ತಾ.ಪಂ. ಸದಸ್ಯ ಸೆಭಾಸ್ಟಿಯಾನ್, ನೋಡೆಲ್ ಅಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಳ ಕುಚಿನಾಡ್, ಗ್ರಾ.ಪಂ. ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತದ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ ಹಿಂದಿನ ಗ್ರಾಮ ಸಭೆಯ ನಡವಳಿ ಬಗ್ಗೆ ಅನುಪಾಲನಾ ವರದಿ, ಜಮಾ-ಖರ್ಚು, ವಾರ್ಡ್ ಸಭೆಗಳಲ್ಲಿ ಬಂದು ಪ್ರಸ್ತಾವನೆಗಳನ್ನೊಳಗೊಂಡ ವರದಿಯನ್ನು ವಾಚಿಸಿದರು.
ಪದವಿನಿಂದ ಬೊಳ್ಮಾನಾರು ತನಕ ಬರುವ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಈ ರಸ್ತೆಯನ್ನು ಸಂಪೂರ್ಣ ಡಾಮರೀಕರಣ ಮಾಡಬೇಕು, ಪುದುವೆಟ್ಟು ಗ್ರಾಮದಲ್ಲಿ ಪ್ರಾಥಮಿಕ ಶಾಲೆಗಳಿದ್ದು, ಪ್ರೌಢ ವಿದ್ಯಾಭ್ಯಾಸಕ್ಕಾಗಿ ದೂರದ ನಗರಕ್ಕೆ ಹೋಗಬೇಕಾಗಿದೆ ಆದುದರಿಂದ ಪುದುವೆಟ್ಟುನಲ್ಲಿರುವ ಅನುದಾನಿತ ಶಾಲೆಗೆ ಪ್ರೌಢ ಶಾಲೆಯನ್ನು ಮಂಜೂರು ಗೊಳಿಸಬೇಕು ಎಂದು ಮಾಜಿ ಅಧ್ಯಕ್ಷ ಅಬ್ದುಲ್‌ಗಫೂರ್ ಸಲಹೆಯಿತ್ತರು ಇದರಂತೆ ನಿರ್ಣಯ ಕೈಗೊಂಡು ಸಂಬಂಧಪಟ್ಟವರಿಗೆ ಕಳುಹಿಸಲು ನಿರ್ಧರಿಸಲಾಯತು.
ಪುದುವೆಟ್ಟುಗೆ ಬರುವ ರಸ್ತೆ ಬದಿ ಪುದುವೆಟ್ಟು ಎಂದು ಹಸಿರು ಬೋರ್ಡು ಯಾರೋ ಹಾಕಿದ್ದಾರೆ. ಹಾಕಿದವರು ಯಾರು ಎಂಬ ಬಗ್ಗೆ ಪಂಚಾಯತಕ್ಕೆ ಯಾವುದೇ ಮಾಹಿತಿ ಇಲ್ಲ, ಇದು ಕಸ್ತೂರಿ ರಂಗನ್ ಯೋಜನೆ ಜಾರಿಗೆ ಹಾಕಿದ ಬೋರ್ಡೆ ಅಥವಾ ಲೋಕೋಪಯೋಗಿ ಇಲಾಖೆಯವರು ಹಾಕಿದ ನಾಮಫಲಕವೇ ಎಂಬ ಗೊಂದಲವಿದೆ ಎಂದು ಸದಸ್ಯ ಜೋಸೆಫ್ ಯಾನೆ ರೋಹಿ ಹಾಗೂ ಅಬ್ದುಲ್ ಗಫೂರ್ ಸಭೆಯ ಗಮನಕ್ಕೆ ತಂದರು. ಇದರ ಬಗ್ಗೆ ಚರ್ಚೆ ನಡೆದಾಗ ಈ ಬಗ್ಗೆ ಲೋಕೋಪಯೋಗಿ ಇಲಾಖೆಯಲ್ಲಿ ಕೇಳಿ ಪಂಚಾಯತಕ್ಕೆ ತಿಳಿಸುವುದಾಗಿ ಇಂಜಿನಿಯರ್ ತಿಪ್ಪೇಸ್ವಾಮಿ ಭರವಸೆ ನೀಡಿದರು.
೯೪ಸಿಯಲ್ಲಿ ಸರಕಾರ ೩ಸೆಂಟ್ಸ್, ೪ ಸೆಂಟ್ಸ್ ಜಾಗ ನೀಡುತ್ತಿದೆ. ಇಷ್ಟು ಕಡಿಮೆ ಜಾಗ ಇದ್ದರೆ ಸರಕಾರದ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ಆದುದರಿಂದ ಸರಕಾರ ಅರ್ಜಿ ಹಾಕಿದವರಿಗೆ ಕಡಿಮೆ ಎಂದರೆ ೧ ಎಕ್ರೆಯಷ್ಟು ಜಾಗ ಮಂಜೂರು ಮಾಡಬೇಕು ಎಂದು ಸೆಲಿಮೋನು ಒತ್ತಾಯಿಸಿದರು. ಅದರಂತೆ ನಿರ್ಣಯ ಬರೆದು ಸರಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು. ಮೀಯಾರು ಮಸೀದಿ ಹತ್ತಿರ ಕೊಳವೆ ಬಾವಿ ಕೊರೆದು ಎರಡು ವರ್ಷ ಆಗುತ್ತಾ ಬಂದಿದೆ. ಆದರೆ ಇದರ ಉಪಯೋಗ ಜನರಿಗೆ ಆಗುತ್ತಿಲ್ಲ ಎಂದು ಆ ಭಾಗದ ಜನರು ಸಭೆಗೆ ತಿಳಿಸಿದಾಗ, ಇಲ್ಲಿ ನೀರಿನ ಟ್ಯಾಂಕ್ ಮತ್ತು ಪೈಪ್‌ಲೈನ್ ಹಾಕಲು ಸುಮಾರು ೭ಲಕ್ಷ ಅನುದಾನ ಬೇಕಾಗಬಹುದು ಇದರ ಬಗ್ಗೆ ಜನರು ಲಿಖಿತ ಅರ್ಜಿಯನ್ನು ಪಂಚಾಯತ್‌ಗೆ ನೀಡುವಂತೆ ಇಂಜಿನಿಯರ್ ತಿಪ್ಪೇಸ್ವಾಮಿ ತಿಳಿಸಿದರು.
ಕೃಷಿ, ತೋಟಗಾರಿಕೆ, ಆರೋಗ್ಯ, ಶಿಶುಅಭಿವೃದ್ಧಿ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಮಧುಕರ ಹೆಬ್ಬಾರ್ ಅರಣ್ಯ ಇಲಾಖಾ ಸೌಲಭ್ಯವನ್ನು ವಿವರಿಸಿದರು. ತಾ.ಪಂ. ಸದಸ್ಯ ಸೆಭಾಸ್ಟಿಯನ್ ಮಾತನಾಡಿ ಸರಕಾರದ ಯಾವುದೇ ಯೋಜನೆಗೆ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯಲ್ಲಿ ಆಗಬೇಕು. ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಬರಬೇಕು ಎಂದು ತಿಳಿಸಿ, ತನ್ನ ಅನುದಾನ ಬಂದಾಗ ಗ್ರಾಮದ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆಯಿತ್ತರು. ಸದಸ್ಯ ರೋಯಿ ಮಾತನಾಡಿ ಗ್ರಾಮದಲ್ಲಿ ಜನರಿಂದ ಬಹಳಷ್ಟು ಬೇಡಿಕೆಗಳು ಬಂದಿದ್ದು, ಸರಕಾರಕ್ಕೆ ಬರೆಯಲಾಗಿದೆ. ಅನುದಾನ ಬಂದಾಗ ಇದನ್ನು ಈಡೇರಿಸಲಾಗುವುದು. ಶಾಸಕರು, ಜಿ.ಪಂ. ಸದಸ್ಯರು, ತಾ.ಪಂ. ಸದಸ್ಯರು ಈ ಗ್ರಾಮಕ್ಕೆ ಅನುದಾನ ನೀಡಿದ್ದಾರೆ. ಹೊಸದಾಗಿ ಆಯ್ಕೆಯಾದ ಸದಸ್ಯರೂ ಹೆಚ್ಚು ಅನುದಾನ ನೀಡಿ ಗ್ರಾಮದ ಅಭಿವೃದ್ಧಿಗೆ ಸಹಕರಿಸುವಂತೆ ವಿನಂತಿಸಿದರು.
ನೋಡೆಲ್ ಅಧಿಕಾರಿಯವರು ಮಾತನಾಡಿ, ಶಿಕ್ಷಕರ ನೇಮಕಾತಿ ಸಮಯ ಮೀಯಾರು, ಪುದುವೆಟ್ಟು ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಪಂಚಾಯತದ ಉಪಾಧ್ಯಕ್ಷ ಬೊಮ್ಮಣ್ಣ ಗೌಡ ಮಠ ಸ್ವಾಗತಿಸಿದರು. ಸಿಬ್ಬಂದಿ ಜನಾರ್ದನ ಕಾರ್ಯಕ್ರಮ ನಿರೂಪಿಸಿ, ಮಾಜಿ ಅಧ್ಯಕ್ಷ ಲಿಂಗಪ್ಪ ಸಾಲ್ಯಾನ್ ವಂದಿಸಿದರು.

ಗ್ರಾಮಸ್ಥರ ಪ್ರಮುಖ ಬೇಡಿಕೆಗಳು
ಕೆಮ್ಮಟೆ ಕುಡಿಯುವ ನೀರಿನ ಪೈಪ್ ಅಲ್ಲಲ್ಲಿ ಒಡೆದು ಹೋಗಿದ್ದು ಸರಿಪಡಿಸಬೇಕು.
ಪದವು-ಬೊಳ್ಮನಾರು ರಸ್ತೆ ಸಡಕ್ ಯೋಜನೆಗೆ ಸೇರಿಸುವುದು.
ಮೀಯಾರು ಶಾಲೆಯಲ್ಲಿ ಶಿಕ್ಷಕರ ಕೊರತೆ.
ಪೆಲತ್ತಾಜೆಯ ರಸ್ತೆ ಅಭಿವೃದ್ಧಿ ಪಡಿಸುವುದು.
ಪುದುವೆಟ್ಟು ಗ್ರಾಮಕ್ಕೆ ಪ್ರೌಢ ಶಾಲೆ.
ಪುದುವೆಟ್ಟಿಗೆ ಪಶುವೈದ್ಯಕೀಯ ಆಸ್ಪತ್ರೆ.
ಪುದುವೆಟು ಗ್ರಾಮಕ್ಕೆ ಬಿಎಸ್‌ಎನ್‌ಎಲ್ ಟವರ್.
ಮೀಯಾರು ಅಂಬೇಡ್ಕ್ ಭವನ ದುರಸ್ಥಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.