ಕೊಯ್ಯೂರು ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾತಿಗೆ ಗ್ರಾಮಸ್ಥರ ಆಗ್ರಹ

Advt_NewsUnder_1
Advt_NewsUnder_1

Koyyuru grama sabhe copy ಕೊಯ್ಯೂರು : ಕೊಯ್ಯೂರು ಗ್ರಾಮ ಪಂಚಾಯತದ ಗ್ರಾಮ ಸಭೆ ಪಂಚಾಯತದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಇವರ ಅಧ್ಯಕ್ಷತೆಯಲ್ಲಿ ಎ. 18ರಂದು ಕೊಯ್ಯೂರು ಆದೂರ್ ಪೆರಾಲ್ ಹಿ.ಪ್ರಾ ಶಾಲಾ ಸಭಾಂಗಣದಲ್ಲಿ ನಡೆಯಿತು.
ಉಪಾಧ್ಯಕ್ಷ ವಿಶ್ವನಾಥ ಗೌಡ, ಜಿ.ಪಂ ಸದಸ್ಯೆ ಶ್ರೀಮತಿ ಮಮತಾ ಎಂ. ಶೆಟ್ಟಿ, ತಾ.ಪಂ ಸದಸ್ಯ ಪ್ರವೀಣ್ ಗೌಡ, ನೋಡೆಲ್ ಅಧಿಕಾರಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ, ಗ್ರಾಮ ಪಂಚಾಯತದ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತದ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಡಿ.ಪಿ ಅವರು ಕಳೆದ ಗ್ರಾಮ ಸಭೆಯ ಅನುಪಾಲನಾ ವರದಿ, ವಾರ್ಡ್ ಸಭೆಯ ವರದಿ, ಉದ್ಯೋಗ ಖಾತರಿ ಸೇರಿದಂತೆ ಪಂಚಾಯತಕ್ಕೆ ಸರಕಾರದಿಂದ ಬಂದ ವಿವಿಧ ಯೋಜನೆಗಳ ವರದಿಯನ್ನು ವಾಚಿಸಿದರು.
ಮಲೆಬೆಟ್ಟುವಿನಲ್ಲಿ ಹಿಂದಿನ ಜಿ.ಪಂ ಸದಸ್ಯರ ಅವಧಿಯಲ್ಲಿ ಕುಡಿಯುವ ನೀರಿಗಾಗಿ ರೂ.೨೫ಲಕ್ಷ ವೆಚ್ಚದಲ್ಲಿ ಮಾಡಿದ ಯೋಜನೆ ಸಂಪೂರ್ಣ ವಿಫಲವಾಗಿರುವ ಬಗ್ಗೆ ಸಭೆಯಲ್ಲಿ ದೀರ್ಘ ಚರ್ಚೆ ನಡೆಯಿತು. ಯೋಜನೆ ಸಮರ್ಪಕವಾಗಿಲ್ಲ, ನದಿಯಲ್ಲಿ ಬಾವಿ ಮಾಡಿ ರಿಂಗ್ ಹಾಕಲಾಗಿದೆ. ಇದನ್ನು ಅಳವಾಗಿ ಮಾಡಿಲ್ಲ. ಒಮ್ಮೆಯೂ ಮಲೆಬೆಟ್ಟುವಿಗೆ ನೀರು ಬಂದಿಲ್ಲ ಕಳೆದ ಗ್ರಾಮ ಸಭೆಯಲ್ಲಿ ಈ ವಿಷಯ ಬಂದಾಗ ಒಂದು ತಿಂಗಳಲ್ಲಿ ಸರಿಪಡಿಸುವುದಾಗಿ ಇಂಜಿನಿಯರ್ ಸ್ವಷ್ಟಪಡಿಸಿದ್ದರು. ಆದರೆ ಇದುವರೆಗೂ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಯೋಜನೆಯಲ್ಲಿ ಮಲೆಬೆಟ್ಟುಗೆ ಇದುವರೆಗೂ ನೀರು ಬಂದಿಲ್ಲ. ಆದರೂ ಪಂಚಾಯತಕ್ಕೆ ಹಸ್ತಾಂತರ ಮಾಡಿಕೊಳ್ಳಿ ಎಂದು ಇಂಜಿನಿಯರ್ ಹೇಳುತ್ತಾರೆ ನಾವು ಮಾಡಿಕೊಂಡಿಲ್ಲ ಎಂದು ಉಪಾಧ್ಯಾಕ್ಷ ವಿಶ್ವಾನಾಥ ಗೌಡ ಸಭೆಗೆ ವಿವರಿಸಿದರು. ಈ ಸಂದರ್ಭ ಇಂಜಿನಿಯರ್ ಸಭೆಯಲ್ಲಿ ಇರಲಿಲ್ಲ. ನಂತರ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಸಭೆಗೆ ಕರೆಸಲಾಯಿತು. ಸಭೆಗೆ ಆಗಮಿಸಿ ಮಾತನಾಡಿದ ಇಂಜಿನಿಯರ್ ತಿಪ್ಪೇಸ್ವಾಮಿ ಆರಂಭದಲ್ಲಿ ಟ್ಯಾಂಕ್ ಇರುವ ಮಲೆಬೆಟ್ಟು ತನಕ ನೀರು ಬಂದಿದೆ. ಈಗ ನದಿಯಲ್ಲಿ ನೀರಿಲ್ಲದೆ ಸಮಸ್ಯೆಯಾಗಿದೆ ಎಂದು ಉತ್ತರಿಸಿದರೂ ಜನರು ಇದನ್ನು ಒಪ್ಪಲಿಲ್ಲ. ಇದು ಜಿ.ಪಂ ಮಾಜಿ ಸದಸ್ಯರು ದುಡ್ಡು ಮಾಡಲು ಮಾಡಿದ ಕಾಮಗಾರಿ ಎಂದು ಮಾಜಿ ಅದ್ಯಕ್ಷ ದಾಮೋದರ ಗೌಡ ಆರೋಪಿಸಿದರು. ಕಾಮಗಾರಿ ಅವೈಜ್ಞಾನಿಕವಾಗಿದೆ. ಈ ಯೋಜನೆಯನ್ನು ಸರಿ ಪಡಿಸಿ, ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ನಾಗರಿಕರು ಒತ್ತಾಯಿಸಿದರು. ಇಲ್ಲಿಗೆ ಎರಡು ಬೋರ್‌ವೆಲ್‌ನ್ನು ಕೊರೆಯಲು ಶಾಸಕರು ಸೂಚನೆ ನೀಡಿದ್ದಾರೆ ಇದರ ಬಗ್ಗೆ ಶೀಘ್ರ ಕ್ರಮ ಜರುಗಿಸುತ್ತೇವೆ ಎಂದು ಇಂಜಿನಿಯರ್ ಭರವಸೆ ನೀಡಿದರು. ಸುಮಾರು ೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಈ ಯೋಜನೆಯಲ್ಲಿ ಅಗತ್ಯ ಬೇಕಾದಾಗ ನೀರು ಇಲ್ಲದಿರುವುದಕ್ಕೆ ಗ್ರಾಮಸ್ಥರು ಅಸಮಾಧನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಉಜ್ವಲ್‌ಕುಮಾರ್ ಅವರು ಕೊಯ್ಯೂರು ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಅಗತ್ಯವಿದೆ. ಇಲ್ಲಿಯ ಕಲ್ಲಡ್ಕದಲ್ಲಿ ಬೇಕಾದಷ್ಟು ನೀರಿನ ಸೌಲಭ್ಯವಿದ್ದು, ಅಲ್ಲಿ ಅಣೆಕಟ್ಟು ನಿರ್ಮಾಣ ಮಾಡಿ ಈ ಯೋಜನೆಯನ್ನು ಮಾಡಬಹುದು, ನಾಲ್ಕೈದು ಗ್ರಾಮಗಳಿಗೆ ನೀರು ಒದಗಿಸಬಹುದು ಎಂದು ಸಲಹೆಯಿತ್ತರು. ಅದರಂತೆ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು. ಪೆರಡಾಲ ಹೊಳೆಯಲ್ಲಿ ಮೀನುಗಳು ಸಾಯುತ್ತಿರುವ ವಿಷಯ ಪಿಡಿಒ ಗಮನಕ್ಕೆ ಬಂದಿದೆಯಾ ಎಂದು ಗ್ರಾಮಸ್ಥರು ಪ್ರಶ್ನಿಸಿದಾಗ ತಾನು ಸ್ಥಳಕ್ಕೆ ಭೇಟಿ ನೀಡಿ ತಹಶೀಲ್ದಾರರಿಗೆ ವರದಿ ನೀಡಿರುವುದಾಗಿ ಪಿಡಿಒ ಶ್ರೀನಿವಾಸ್ ತಿಳಿಸಿದರು. ಇಲ್ಲಿ ನದಿ ನೀರಿಗೆ ಮೈಲುತುತ್ತು ಹಾಕಲಾಗಿದ್ದು, ನದಿ ನೀರು ವಿಷವಾಗಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಆ ಭಾಗದ ನಾಗರಿಕರು ಒತ್ತಾಯಿಸಿದರು.
ಹೇಮಾಲ್ಕೆಯಲ್ಲಿ ಕುಡಿಯುವ ನೀರಿನ ಬಾವಿ ಮಾಡಿ ಮೂರು ವರ್ಷ ಆದರೂ ಇದರ ಉಪಯೋಗ ಜನರಿಗೆ ದೊರಕಿಲ್ಲ, ಕೊಯ್ಯೂರಿನ ನೋಣ್ಯಯ್ಯ ಎಂಬ ಖಾಸಗಿ ವ್ಯಕ್ತಿಯ ಜಾಗದಲ್ಲಿ ಸಾರ್ವಜನಿಕ ಬಾವಿ ಮಾಡಲಾಗಿದೆ, ಬಲ್ಯಾರಕೋಡಿ ಅಂಗನವಾಡಿ ಕಟ್ಟಡದ ಕಾಮಗಾರಿಯನ್ನು ಗ್ರಾ.ಪಂ ಸದಸ್ಯ ಮಾಡಬಾರದು ಎಂದು ನಾಗರಿಕರು ಒತ್ತಾಯಿಸಿದರು. ಎರುಕಡಪುವಿನಲ್ಲಿ ಕುಡಿಯುವ ನೀರಿನ ದುರುಪಯೋಗವಾಗುತ್ತಿದ್ದು, ಖಾದ್ರಿ ಎಂಬವರು ಸ್ಪಿಂಕ್ಲರ್‌ಗೆ ಬಳಸಿರುವುದನ್ನು ಪತ್ತೆ ಹಚ್ಚಿ ಸಂಪರ್ಕ ಕಡಿತ ಮಾಡಲಾಗಿದೆ ಎಂದು ಪಿಡಿಒ ಸಭೆಗೆ ತಿಳಿಸಿದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಜಿ.ಪಂ ಸದಸ್ಯೆ ಮಮತಾ ಎಂ. ಶೆಟ್ಟಿ ಮಾತನಾಡಿ ಕೊಯ್ಯೂರು ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು. ತಾ.ಪಂ ಸದಸ್ಯ ಪ್ರವೀಣ್ ಮಾತನಾಡಿ ಎಲ್ಲರೂ ಸೇರಿ ಕುಡಿಯುವ ನೀರಿನ ಸಮಸ್ಯೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆಯಿತ್ತರು. ಅಧ್ಯಕ್ಷೆ ಶಶಿಕಲಾ ಅವರು ಅಭಿವೃದ್ಧಿ ಕಾರ್ಯಗಳಲ್ಲಿ ಯಾರೂ ರಾಜಕೀಯ ಮಾಡದೇ ಮಾದರಿ ಗ್ರಾಮವಾಗಲು ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಸ್ವಾಗತಿಸಿ, ವಂದಿಸಿದರು.

ಗ್ರಾಮಸ್ಥರ ಬೇಡಿಕೆಗಳು
ವೈಧ್ಯಕೀಯ ಚಿಕಿತ್ಸೆ ವೆಚ್ಚ ಸಹಾಯಧನ ರೂ.೫ ಸಾವಿರಕ್ಕೆ ಏರಿಸುವುದು.
ಪಂಚಾಯತು ಬೇಡಿಕೆಗಳ ನಿರ್ಣಯ ಕಳುಹಿಸಿದಾಗ ಮೇಲಾಧಿಕಾರಿಗಳು ಹಿಂಬರಹ ನೀಡಬೇಕು ಅಥವಾ ಗ್ರಾಮ ಸಭೆಗೆ ಹಾಜರಾಗಿ ಉತ್ತರ ನೀಡಬೇಕು.
ಎರುಕಡಪು ಪ್ರದೇಶದ ರಸ್ತೆ ಅಭಿವೃದ್ಧಿ ಮತ್ತು ಕುಡಿಯುವ ನೀರು
ಸುಣ್ಣಾಲು ಬಾರೇದೊಟ್ಟು ಮತ್ತು ಗುಂಡಿ ದೇವಸ್ಥಾನ ರಸ್ತೆ ಅಭಿವೃದ್ಧಿ
ಬೊಳ್ಳಂಡ- ಸುರುಳಿ ರಸ್ತೆ ಅಭಿವೃದ್ಧಿ
ಭತ್ತದ ಕೃಷಿಯನ್ನು ಉದ್ಯೋಗ ಖಾತರಿಯಲ್ಲಿ ಸೇರಿಸುವುದು
ಭತ್ತದ ಕೃಷಿಗೆ ಎಕ್ರೆಗೆ ರೂ.೧೦ ಸಾವಿರ ಪ್ರೋತ್ಸಾಹಧನ ನೀಡುವುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.