ವೇಣೂರು: ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಳವಡಿಸಲಾದ ಅತ್ಯಾಧುನಿಕ ಗಣಕೀಕೃತ ಸೌಲಭ್ಯದ ಸ್ಮಾರ್ಟ್ ಬ್ಯಾಂಕಿಂಗ್ನ ಉದ್ಘಾಟನಾ ಸಮಾರಂಭವು ಎ. 20ರಂದು ಸಂಘದ ಕಚೇರಿಯಲ್ಲಿ ಜರಗಲಿದೆ ಎಂದು ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿಇ ತಿಳಿಸಿದ್ದಾರೆ.
ಬಳಿಕ ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಸಭಾ ಕಾರ್ಯಕ್ರಮ ಜರಗಲಿದ್ದು, ಸಂಘದ ಅಧ್ಯಕ್ಷ ಸುಂದರ ಹೆಗ್ಡೆಯವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಸಹಕಾರಿ ಸಂಘಗಳ ಉಪನಿಬಂಧಕರಾದ ಬಿ.ಕೆ. ಸಲೀಂ ಅತ್ಯಾಧುನಿಕ ಗಣಕೀಕೃತ ಸೌಲಭ್ಯವನ್ನು ಉದ್ಘಾಟಿಸಲಿದ್ದು, ಮಂಗಳೂರು ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ನ ನಿರ್ದೇಶಕ ಬಿ. ನಿರಂಜನ್, ವೇಣೂರು ಶ್ರೀ ದಿಗಂಬರ ತೀರ್ಥ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಘದ ಸದಸ್ಯರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ವಿನಂತಿಸಿದ್ದಾರೆ.