ವೇಣೂರು: ಮತ್ತೆ ಶುರುವಾಗಿದೆ ನೀರಿಗಾಗಿ ಹಾಹಾಕಾರ ಈಡೇರದ ಸಮಗ್ರ ಕುಡಿಯುವ ನೀರಿನ ಯೋಜನೆ

venur ajila kereವೇಣೂರು: ಪ್ರತೀ ಬೇಸಿಗೆ ಕಾಲದ ಕೊನೆಯಲ್ಲಿ ಪ್ರಾರಂಭವಾಗುವ ಕುಡಿಯುವ ನೀರಿನ ಹಾಹಾಕಾರ ಮತ್ತೆ ಪ್ರಾರಂಭಗೊಂಡಿದೆ. ಈ ಬಾರಿ ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲೂ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಬಾವಿ, ಕೆರೆಗಳಲ್ಲಿನ ಊಳೆತ್ತುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಸಮಸ್ಯೆ ನಿವಾರಿಸಲು ಸ್ಪಂಧಿಸುತ್ತಿದ್ದರೂ ಶಾಶ್ವತ ಪರಿಹಾರ ಇಲ್ಲವಾದ್ದರಿಂದ ಸಮಸ್ಯೆ ಕಾಡಲು ಕಾರಣವಾಗಿದೆ.
ಸಮಗ್ರ ಕುಡಿಯುವ ನೀರಿನ ಯೋಜನೆ: ೨೦೧೨ರಲ್ಲಿ ಜರಗಿದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಸಮಿತಿ ಕಾರ್ಯಾಧ್ಯಕ್ಷರೂ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಯೂ ಆಗಿದ್ದ ಮೂಲತಃ ವೇಣೂರಿನವರೇ ಆದ ವಿ. ಧನಂಜಯ ಕುಮಾರ್ ಅವರು ವೇಣೂರಿನಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆಯ ಬಗ್ಗೆ ನೀಡಿದ್ದ ಭರವಸೆ ಹುಸಿಯಾಗಿದೆ. ಮಹಾಮಸ್ತಕಾ ಭಿಷೇಕದ ನೆನಪಿಗಾಗಿ ರಾಜ್ಯ ಸರ್ಕಾರದ ನೆರವಿನೊಂದಿಗೆ ವೇಣೂರು ಆಸುಪಾಸಿನ ಗ್ರಾಮಗಳಿಗೆ ಪಲ್ಗುಣಿ ನದಿಯಲ್ಲಿ ಅಂದಾಜು ೫ ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಮಾಡುವುದಾಗಿ ಭರವಸೆ ನೀಡಿದ್ದರು.
ಈಡೇರದ ಭರವಸೆ: ಯೋಜನೆ ಯ ನೀಲನಕ್ಷೆ ಸಿದ್ದಪಡಿಸಿ ಅದಕ್ಕನುಗುಣ ವಾಗಿ ಆಗಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರನ್ನು ಮಹಾಮಸ್ತಕಾಭಿಷೇಕದ ಪೂರ್ವಭಾವಿ ಸಭೆಗೆ ಆಹ್ವಾನಿಸಿ ಅಲ್ಲಿ ಪ್ರಸ್ತಾವನೆ ನೀಡಲಾಗಿತ್ತು. ಯಡಿಯೂರಪ್ಪನವರು ರಾಜ್ಯ ಸರ್ಕಾರದಿಂದ ೨ ಕೋಟಿ ರೂ. ನೆರವನ್ನು ನೀಡುವುದಾಗಿ ಭರವಸೆಯನ್ನೂ ನೀಡಿದ್ದರು.
ಈ ಬೃಹತ್ ಯೋಜನೆಯ ಕುರಿತಾಗಿ ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು ಹಾಗೂ ಸಂಘ ಸಂಸ್ಥೆಗಳು ಎಚ್ಚೆತ್ತು ಈ ಮಹತ್ವಕಾಂಕ್ಷಿ ಯೋಜನೆಗೆ ರೂಪುರೇಷೆ ನೀಡುವಂತೆ ನಾಗರಿಕರಿಂದ ಒತ್ತಾಯ ಕೇಳಿ ಬಂದಿದೆ.
ಮುದ್ದಾಡಿಯಲ್ಲೂ ಸಮಸ್ಯೆ: ಸುಮಾರು ೨೪ ಮನೆಗಳಿರುವ ಮುದ್ದಾಡಿ ಪ್ರದೇಶದಲ್ಲೂ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ. ತೀರಾ ಎತ್ತರವಾದ ಪ್ರದೇಶ ಇದಾಗಿದ್ದು, ಕೆಲವರು ಕೊಳವೆಬಾವಿಯ ನೀರನ್ನು ಆಶ್ರಯಿಸುತ್ತಿದ್ದರೆ ಕೆಲವರು ಪಂಚಾಯತ್‌ನ ನಳ್ಳಿ ನೀರನ್ನೇ ಅವಲಂಬಿಸುತ್ತಿದ್ದಾರೆ. ಬಾವಿ ತೆಗೆದರೆ ಇಲ್ಲಿ ನೀರು ಸಿಗುವುದು ಕಷ್ಟ. ಇದೀಗ ಕೊಳವೆ ಬಾವಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಈಗಾಗಿ ಇಲ್ಲಿ ಟ್ಯಾಂಕ್ ನಿರ್ಮಿಸಿ ನೀರು ಪೂರೈಕೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದೀಗ ಎಲ್ಲೆಡೆ ಕೆರೆ, ಬಾವಿಗಳು ಹೂಳೆತ್ತುವ ದೃಶ್ಯ ಕಂಡು ಬರುತ್ತಿದ್ದು, ಎಪ್ರಿಲ್ ಅಂತ್ಯದ ವೇಳೆಗೆ ಮಳೆಯ ಸಿಂಚನವಾಗದಿದ್ದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ.
ಎತ್ತರ ಪ್ರದೇಶಗಳಲ್ಲಿ ಸಮಸ್ಯೆ: ನಗರದ ತಗ್ಗು ಪ್ರದೇಶಗಳಿಗಿಂತ ಎತ್ತರದ ಪ್ರದೇಶಗಳಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗಿದೆ. ಪೈಪ್‌ನ ನೀರಿನ ಹರಿವು ಎತ್ತರದ ಪ್ರದೇಶಗಳಿಗೆ ಸರಾಗವಾಗಿ ಹೋಗದಿರುವುದು ಸಮಸ್ಯೆಗೆ ಕಾರಣವಾಗಿದೆ. ಪ್ರತೀ ವರ್ಷವೂ ಇಲ್ಲಿ ಇದೇ ಸಮಸ್ಯೆ ಕಾಡುತ್ತಿದೆ. ಎತ್ತರ ಪ್ರದೇಶಕ್ಕೆ ನಳ್ಳಿ ನೀರು ಪೂರೈಕೆ ಆಗದಿರುವುದರಿಂದ ಮೂಡುಕೋಡಿ ಗ್ರಾಮದ ಜನರು ರಸ್ತೆ ಬದಿಗಳಲ್ಲಿ ಬ್ಯಾರಲ್‌ಗಳನ್ನು ಇರಿಸಿ ಅದರಿಂದ ನೀರನ್ನು ಕೊಡಪಾನ, ಪಂಪ್‌ಗಳ ಮೂಲಕ ಪೂರೈಕೆ ಮಾಡುತ್ತಿದ್ದಾರೆ.
ಹೆಚ್ಚಿದ ಗೇಟ್‌ವಾಲ್?: ಪೈಪ್ ಸಂಪರ್ಕದ ಉದ್ದ ಗೇಟ್‌ಬಾಲ್ ಅಳವಡಿಸಲಾಗಿದ್ದು, ಇದರಿಂದ ಸರಾಗವಾಗಿ ನೀರು ಹರಿಯದೆ ಸಮಸ್ಯೆ ಉಂಟಾಗಿದೆ ಎಂಬುದು ಕೆಲವು ನಾಗರಿಕರ ಆರೋಪ. ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳು ಇದ್ದು, ಕೆಸರು ತೆಗೆದರೆ ಅದರಲ್ಲಿ ದಾರಾಳ ನೀರು ಸಿಗುತ್ತದೆ. ಸಾರ್ವಜನಿಕ ಕೆರೆಯ ನೀರನ್ನು ಗ್ರಾಮಸ್ಥರಿಗೆ ಉಪಯೋಗಿಸುವಂತೆ ಮಾಡಲು ಗ್ರಾ.ಪಂ. ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮನಸ್ಸು ಮಾಡಬೇಕಾಗಿದೆ.
ರಸ್ತೆ ಬದಿ ಸಿಂಟೆಕ್ಸ್‌ಗಳು: ಮೂಡುಕೋಡಿ ಜನತೆ ಮನೆಯಲ್ಲಿದ್ದ ನೀರಿನ ಸಿಂಟೆಕ್ಸ್‌ನ್ನು ರಸ್ತೆ ಬದಿಯಲ್ಲಿ ಅಳವಡಿಸಿ ಅಲ್ಲಿಂದ ಪಂಪ್ ಮೂಲಕ, ಕೊಡಪಾನಗಳ ಮೂಲಕ ಮನೆಗೆ ಕೊಂಡೊಯ್ಯುತ್ತಿದ್ದಾರೆ. ಮಳೆಗಾಲದಲ್ಲಿ ಸಾಕಷ್ಟು ನೀರನ್ನು ಒದಗಿಸಲಾಗು ತ್ತಿದ್ದರೂ ಬೇಸಿಗೆ ಕಾಲ ಬಂತೆಂದರೆ ಇಲ್ಲಿ ನೀರಿನ ಬವಣೆ ಪ್ರಾರಂಭವಾಗುತ್ತದೆ. ಹೆಚ್ಚೆಂದರೆ ದಿನಕ್ಕೆ ಎರಡು ಗಂಟೆ ಲಭಿಸುವ ನೀರು ಒತ್ತಡದ ಪ್ರಮಾಣ ದಲ್ಲಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಪ್ರತೀ ವರ್ಷ ಇಲ್ಲಿ ಇದೇ ಸಮಸ್ಯೆ ಮರುಕಳಿಸುತ್ತಿದ್ದು, ಸಮಸ್ಯೆಯ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯದ ಮಾತುಗಳನ್ನಾಡುತ್ತಾರೆ ಎಂಬುದು ಇಲ್ಲಿನ ನಿವಾಸಿಗಳ ಆರೋಪ.
ಪಂಚಾಯತ್‌ಗೆ ಚುನಾವಣೆ: ಇದೀಗ ವೇಣೂರು ಗ್ರಾ.ಪಂ.ನ ಆಡಳಿತ ಅಧಿಕಾರವಧಿ ಮುಗಿದಿದೆ. ಚುನಾವಣೆ ಮುಗಿದ ನೂತನವಾಗಿ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ನೀರಿನ ಸಮಸ್ಯೆ ಸವಾಲಾಗಿ ಪರಿಣಮಿಸಲಿದ್ದು, ಯಾವ ಕ್ರಮ ಕೈಗೊಳ್ಳುತ್ತಾರೆಂಬುದು ಕಾದು ನೋಡಬೇಕಾಗಿದೆ.

ವೇಣೂರಿನ ಐತಿಹಾಸಿಕ ಅಜಿಲ ಕೆರೆ
ಕ್ರಿ.ಶ. ೧೬೦೪ರ ೪ನೇ ವೀರ ತಿಮ್ಮಣ್ಣ ಅಜಿಲರ ಕಾಲದಲ್ಲಿ ವೇಣೂರು ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾದ ಸಮಯದಲ್ಲಿ ನೀರಿನ ಸೌಕರ್ಯಕ್ಕಾಗಿ ಕಲ್ಯಾಣಿ ಪ್ರದೇಶದಲ್ಲಿ ಎರಡು ಬೆಟ್ಟಗಳ ಮಧ್ಯೆ ಕೆರೆಯನ್ನು ನಿರ್ಮಿಸಲಾದ ಕೆರೆ ಇದುವೇ ಅಜಿಲ ಕೆರೆ. ೪.೭ಎಕ್ರೆ ವ್ಯಾಪ್ತಿಯನ್ನು ಒಳಗೊಂಡ ಅಜಿಲ ಕೆರೆಯಲ್ಲಿ ಬೇಸಿಗೆ ಕಾಲದ ಕೊನೆಗೂ ನೀರು ಇರುತ್ತದೆ.
ಅಜಿಲ ಕೆರೆಯ ಒತ್ತುವರಿ?: ಐತಿಹಾಸಿಕ ಹಿನ್ನೆಲೆಯಿರುವ ಅಜಿಲ ಕೆರೆಯು ಇದೀಗ ಪಾಲುಬಿದ್ದಿದ್ದು, ಕೆಲವರಿಂದ ಅತಿಕ್ರಮಣ ನಡೆದಿದೆ ಎಂಬ ಆರೋಪಗಳು ಸಹ ಕೇಳಿ ಬಂದಿದೆ. ಮಾತ್ರವಲ್ಲದೆ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಕೂಡಾ ಏರಿದೆ. ಒಟ್ಟಿನಲ್ಲಿ ಬೃಹದಾಕಾರವಾಗಿರುವ ಕೆರೆಯ ದುರಸ್ಥಿ ಕಾರ್ಯ ನಡೆಸಿ ನೀರು ಪೂರೈಕೆಗೆ ಅನುಕೂಲ ಮಾಡಿಕೊಟ್ಟರೆ ವೇಣೂರು ಪ್ರದೇಶಕ್ಕೆ ನೀರಿನ ಸಮಸ್ಯೆ ಕಾಡತೊಡಗದು ಎಂಬ ಅಭಿಪ್ರಾಯ ಸಾರ್ವಜನಿಕರದ್ದು.
– ಪದ್ಮನಾಭ ಕುಲಾಲ್, ವೇಣೂರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.