HomePage_Banner_
HomePage_Banner_
HomePage_Banner_

ಕರಂಬಾರು ರೂ. 48ಲಕ್ಷದ ಎರಡು ಕೆರೆಗಳ ಕಾಮಗಾರಿ ಅಪೂರ್ಣ

Advt_NewsUnder_1

 ಶಿರ್ಲಾಲು : ಶಿರ್ಲಾಲು ಗ್ರಾಮ ಪಂಚಾಯತದ ಗ್ರಾಮ ಸಭೆ ಪಂಚಾಯತದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ಮಾ.೨೯ ರಂದು ಪಂಚಾಯತು ಸಭಾಂಗಣದಲ್ಲಿ ಜರುಗಿತು.
ಉಪಾಧ್ಯಕ್ಷ ಸಂಜೀವ ದೇವಾಡಿಗ, ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಸದಸ್ಯೆ ಜಯಶೀಲ, ನೋಡೆಲ್ ಅಧಿಕಾರಿ ತಾಲೂಕು ತೋಟಗಾರಿಕಾ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಶಿವಪ್ರಸಾದ್, ಗ್ರಾ.ಪಂ. ಸದ್ಯಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಅಭಿವೃದ್ಧಿ ಅಧಿಕಾರಿ ಎನ್.ಬಿ. ಚಟ್ನಳ್ಳಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಧರ್ ಗತಸಭೆಯ ವರದಿ ಹಾಗೂ ಜಮಾ-ಖರ್ಚಿನ ವಿವರ ನೀಡಿದರು. ಪಂಚಾಯತದ ಸಿಬ್ಬಂದಿ ಸುಪ್ರೀತಾ ಉದ್ಯೋಗ ಖಾತರಿ ಖರ್ಚು ವಿವರ ಹಾಗೂ ವಾರ್ಡ್ ಸಭೆಯ ವರದಿಯನ್ನು ವಾಚಿಸಿದರು. ಉಪಯೋಗಕ್ಕಿಲ್ಲದ ಕೆರೆಗಳು : ಕರಂಬಾರು ಗ್ರಾಮದಲ್ಲಿ ೨೦೧೦-೧೧ರಲ್ಲಿ ಎರಡು ಕೆರೆಗಳನ್ನು ನಿರ್ಮಿಸಲು ರೂ.೪೮ ಲಕ್ಷ ಖರ್ಚು ಮಾಡಲಾಗಿದೆ. ಆದರೆ ಕಾಮಗಾರಿ ಸಮರ್ಪಕವಾಗಿಲ್ಲ, ಕಳಪೆ ಕಾಮಗಾರಿಯಿಂದಾಗಿ ಈ ಕೆರೆಗಳ ನೀರು ಜನರಿಗೆ ದೊರೆಯುತ್ತಿಲ್ಲ ಎಂದು ಬಾಬು ಕೆ. ಆರೋಪಿಸಿದರು. ಇಲ್ಲಿಯ ಜೀತ ಮುಕ್ತಿ ಕಾಲನಿಗೆ ಕುಡಿಯುವ ನೀರಿಲ್ಲ, ಸ್ಥಳೀಯ ಅಂಗನವಾಡಿಗೂ ನೀರಿಲ್ಲ, ಇದು ಪಂಚಾಯತಕ್ಕೆ ಹಸ್ತಾಂತರ ಆಗದಿದ್ದರೂ ಪಂಚಾಯತು ವತಿಯಿಂದ ಪಂಪು ಅಳವಡಿಸಲಾಗಿದೆ ಎಂದು ಅವರು ಹೇಳಿದರು. ಇದನ್ನು ಶೀಘ್ರವಾಗಿ ಸರಿಪಡಿಸಬೇಕು. ಇಲ್ಲವಾದಲ್ಲಿ ಲೋಕಯುಕ್ತ ತನಿಖೆಗೆ ದೂರು ನೀಡುವುದಾಗಿ ತಿಳಿಸಿದರು. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಅನಿವಾರ್ಯವಾಗಿ ಪಂಚಾಯತದಿಂದ ಪಂಪು ಅಳವಡಿಸಿ ಜನರಿಗೆ ನೀರು ನೀಡಲಾಗಿದೆ ಎಂದು ಪಿಡಿಒ ಎನ್.ಬಿ. ಚಟ್ನಳ್ಳಿ ಸ್ಪಷ್ಟಪಡಿಸಿದರು. ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿಯವರು ಇದರ ಬಗ್ಗೆ ಸ್ಥಳಪರಿಶೀಲನೆ ನಡೆಸಿ, ಜಿ.ಪಂ. ಇಂಜಿನಿಯರ್‌ಗಳ ಜೊತೆ ಮಾತನಾಡಿ ಸರಿಪಡಿಸುವುದಾಗಿ ಭರವಸೆ ನೀಡಿದರು.
ಕರಂಬಾರು ಗ್ರಾಮದಲ್ಲಿ ಅನೇಕ ಕೊಳವೆ ಬಾವಿಗಳಿವೆ. ಆದರೆ ಎಲ್ಲಿಯೂ ನೀರಿಲ್ಲ. ಆದರೂ ಉರುಂಬಿದೊಟ್ಟು ಎಂಬಲ್ಲಿ ಕೊಳವೆ ಬಾವಿ ಕೊರೆಯಲು ಸ್ಥಳ ಗುರುತಿಸಲಾಗಿದೆ. ನೀರು ಇಲ್ಲದಿರುವ ವಿಷಯ ತಿಳಿದಿದ್ದರೂ ಮತ್ತೆ ಯಾಕೆ ಕೊಳವೆ ಬಾರಿ ಕೊರೆಯುತ್ತೀರಿ ಎಂದು ಸಗುಣ ಅವರು ಪ್ರಶ್ನಿಸಿದರು. ಇದರ ಬಗ್ಗೆ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ ನೀವೇ ಮಾಡಿ ಎಂದು ಹೇಳುತ್ತಾರೆ ಎಂದು ಆಕ್ಷೇಪ ಸಲ್ಲಿಸಿದರು. ಬೈಲಡ್ಕದಲ್ಲಿ ಕೊಳವೆ ಬಾವಿ ಬೇಕೆಂಬುದು ಇಲ್ಲಿಯ ಜನರ ಬೇಡಿಕೆ. ಆದರೆ ಇಲ್ಲಿ ನೀರು ಸಿಗುವುದಿಲ್ಲ ಎಂದು ಹೇಳಿ ಭೂ ವಿಜ್ಞಾನಿಗಳು ಹೇಳಿದ್ದಾರೆ ಎಂದು ಇಂಜಿನಿಯರ್ ಮಹಮ್ಮದ್ ತಿಳಿಸಿದಾಗ, ನೀರು ನೋಡಲು ಬಂದವರು ಜೀಪಿನಿಂದ ಕೆಳಗೆ ಇಳಿದಿಲ್ಲ ಮತ್ತೆ ಹೇಗೆ ನೀರು ಸಿಗುವುದಿಲ್ಲ ಎಂದು ಹೇಳುತ್ತಾರೆ. ಅಲ್ಲಿ ಬೇಕಾದಷ್ಟು ನೀರಿದೆ. ನಾವು ಜಾಗ ತೋರಿಸುತ್ತೇವೆ, ಬೈಲಡ್ಕದಲ್ಲೆ ಕೊಳವೆ ಬಾವಿ ಆಗಬೇಕು ಇಲ್ಲಿಂದ ಸ್ಥಳಾಂತರ ಬೇಡ ಎಂದು ಜಗನ್ನಾಥ ಅತ್ಯಂಗೆ ಸಹಿತ ಅಲ್ಲಿಯ ನಾಗರಿಕರು ಒತ್ತಾಯಿಸಿದರು. ಸ್ಥಳ ಪರಿಶೀಲನೆಗೆ ನಿರ್ಧರಿಸಲಾಯಿತು.
ಮಕ್ಕಳ ಶೂ ಭಾಗ್ಯ: ಸರಕಾರದ ಶೂ ಭಾಗ್ಯ ಯೋಜನೆಯಲ್ಲಿ ಮಕ್ಕಳಿಗೆ ವಿತರಿಸಲಾಗುತ್ತಿರುವ ಶೂಗಳ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಸಂಶಯ ವ್ಯಕ್ತಪಡಿಸಿದರು. ಸರಕಾರದಿಂದ ಶೂಗೆ ರೂ.೨೨೫ ನೀಡುತ್ತಾರೆ. ಆದರೆ ಮಕ್ಕಳಿಗೆ ಕೊಟ್ಟ ಶೂಗಳ ಕ್ರಯ ಅಂಗಡಿಯಲ್ಲಿ ಕೇಳಿದರೆ ರೂ.೭೦ ಎನ್ನುತ್ತಾರೆ. ಇದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು. ಇದು ಆಯಾ ಶಾಲಾಭಿವೃದ್ಧಿ ಸಮಿತಿಯವರ ಜವಾಬ್ದಾರಿ ಎಂದು ಅಧಿಕಾರಿಗಳು ಸಭೆಗೆ ಮಾಹಿತಿಯಿತ್ತರು.
ವಸತಿಗೃಹಕ್ಕೆ ಮುಚ್ಚಿದ ಬಾಗಿಲು: ಕರಂಬಾರು ಗ್ರಾಮದಲ್ಲಿ ದಾದಿಯರ ವಸತಿ ಗೃಹ ಕಟ್ಟಿ ಅನೇಕ ವರ್ಷ ಆಗಿದೆ. ಈಗ ಇದು ಮುಚ್ಚಿದ ಬಾಗಿಲು. ಇಲ್ಲಿಯ ದಾದಿ ವರ್ಗಾವಣೆ ಆಗಿ ಆರು ವರ್ಷ ಆಯಿತು. ಈಗ ದಾದಿಯರೇ ಇಲ್ಲ. ಇದರಿಂದ ಜನರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಗ್ರಾಮಸ್ಥರು ತಿಳಿಸಿ, ಕರಂಬಾರು ಗ್ರಾಮಕ್ಕೆ ದಾದಿಯನ್ನು ನೇಮಕಗೊಳಿಸುವಂತೆ ಆಗ್ರಹಿಸಿದರು.
ಜಿ.ಪಂ. ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡಿ ಕೆದ್ದು-ಶಿರ್ಲಾಲು ರಸ್ತೆಯನ್ನು ಪಿಡಬ್ಲ್ಯುಡಿ ರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ತಾಂತ್ರಿಕ ತೊಂದರೆಯಿಂದ ಈ ರಸ್ತೆಯ ಅಭಿವೃದ್ದಿ ಸಾಧ್ಯವಾಗಿಲ್ಲ. ಇದನ್ನು ಶೀಘ್ರವಾಗಿ ಅಭಿವೃದ್ಧಿ ಪಡಿಸಲಾಗುವುದು. ಅಲ್ಲದೆ ಜೀತಮುಕ್ತ ಕಾಲನಿಯ ಒಂದು ರಸ್ತೆಯನ್ನು ಕಾಂಕ್ರೀಟೀಕರಣ ಗೊಳಿಸುವುದಾಗಿ ಭರವಸೆಯಿತ್ತರು. ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಅವರು ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದರು. ಕಾರ್ಯದರ್ಶಿ ಶೇಖರ್ ಧನ್ಯವಾದವಿತ್ತರು.

ಗ್ರಾಮಸ್ಥರ ಬೇಡಿಕೆಗಳು
ಮುಂಡೂರು-ಕರಂಬಾರು ಸಂಪರ್ಕ ರಸ್ತೆ
ಕೆದ್ದು-ಶಿರ್ಲಾಲು ರಸ್ತೆಯ ಅಭಿವೃದ್ಧಿ

ಜೀತಮುಕ್ತ ಕಾಲನಿ ಮೋರಿಗೆ ತಡೆಗೋಡೆ
ಕರಂಬಾರು ಶಾಲೆಗೆ ದೈಹಿಕ ಶಿಕ್ಷಕರ ನೇಮಕ
ಶಿರ್ಲಾಲು ಶಾಲೆಗೆ ಮುಖ್ಯೋಪಾಧ್ಯಾಯರ ನೇಮಕ
ಬೈರವಗುಂಡಿ ಆಣೆಕಟ್ಟು ದುರಸ್ಥಿ
ದರ್ಬೆದಪಲ್ಕೆಗೆ ಅಂಗನವಾಡಿ ಕಟ್ಟಡ
ಶಿಕ್ಷಣ ಹಕ್ಕು ಕಾಯ್ದೆ ಮೊದಲಿನಂತೆ ಜಾರಿ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.