ಇಬ್ಬರು ಶಿಕ್ಷಕರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಾವ್ಯದ ಅಬೂಬಕ್ಕರ್; ನೆಲ್ಯಾಡಿಯ ಉಲಹನ್ನನ್

    teachersಬೆಳ್ತಂಗಡಿ : ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪೂರ್ವ ಸೇವೆಗಾಗಿ ತಾಲೂಕಿನ ಇಬ್ಬರು ಶಿಕ್ಷಕರಿಗೆ ೨೦೧೫ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಸರಕಾರಿ ಹಿ. ಪ್ರಾ. ಶಾಲೆ ಸಾವ್ಯದ ಪೂರ್ಣ ಕಾಲಿಕ ಮುಖ್ಯಶಿಕ್ಷಕ ಬಿ. ಅಬೂಬಕ್ಕರ್ ಮತ್ತು ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಉಲಹನ್ನನ್ ಅವರೇ ಸೆ.೫ ರಂದು ಪ್ರಶಸ್ತಿ ಸ್ವೀಕರಿಸಿದ ಶಿಕ್ಷಕರುಗಳು.
ಬಿ. ಅಬೂಬಕ್ಕರ್ ಅವರ ಸಂಕ್ಷಿಪ್ತ ಪರಿಚಯ:
ಸಾವ್ಯ ಸರ್ಕಾರಿ ಉನ್ನತೀಕರಿಸಿದ ಹಿ. ಪ್ರಾ. ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಮಂಗಳೂರಿನ ಕುಪ್ಪೆಪದವಿನ ನಿವಾಸಿಯಾಗಿದ್ದಾರೆ. ೧೯೯೦ರ ಫೆಬ್ರವರಿಯಲ್ಲಿ ಶಿಕ್ಷಕರಾಗಿ ವೃತ್ತಿಯಲ್ಲಿ ಸರ್ಕಾರಿಯಾಗಿ ಸೇರ್ಪಡೆಗೊಂಡ ಇವರು ಮೂಡಬಿದ್ರೆ ಬನ್ನಡ್ಕದ ಪಾಡ್ಯಾರು ಸ.ಹಿ.ಪ್ರಾ. ಶಾಲೆಯಲ್ಲಿ ಮೊದಲ ಬಾರಿಗೆ ಕರ್ತವ್ಯ ನಿರ್ವಹಿಸಿದ್ದರು. ನಂತರ ಮೂಡಬಿದ್ರೆ ವಲಯದ ಸುಭಾಶ್‌ನಗರದ ಪುಚ್ಚೇರಿಕಟ್ಟೆ ಸ.ಹಿ.ಪ್ರಾ ಶಾಲೆಯಲ್ಲಿ, ಮೂಡಬಿದ್ರೆ ವಲಯದ ಮುಳಬೆಟ್ಟು ಸ.ಹಿ.ಪ್ರಾ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಇದೀಗ ತಾಲೂಕಿನ ಸಾವ್ಯ ಸ.ಹಿ.ಪ್ರಾ. ಶಾಲೆಯಲ್ಲಿ ಪೂರ್ಣ ಕಾಲಿಕ ಮುಖ್ಯೋಪಾಧ್ಯಾಯರಾಗಿದ್ದಾರೆ. ಊರವರ, ಶಿಕ್ಷಣ ಪ್ರೇಮಿಗಳ, ಹಾಗೂ ವಿದ್ಯಾರ್ಥಿ ಹೆತ್ತವರ ಸಹಕಾರ ಪಡೆದು ಶಾಲೆಗಳಲ್ಲಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಿದ್ದಾರೆ. ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ಪ್ರೇರೇಪಿಸುತ್ತಿರುವ ಅವರು ಒಳ್ಳೆಯ ಶಿಕ್ಷಕರಾಗಿ ಗುರುತಿಸಿಕೊಂಡಿದ್ದು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಉಲಹನ್ನನ್ ಅವರ ಸಂಕ್ಷಿಪ್ತ ಪರಿಚಯ :
ರೆಖ್ಯ ಗ್ರಾಮದ ಪರಕ್ಕಳ ನಿವಾಸಿ ಪಿ.ಯು. ವಾಣಿ ಹಾಗೂ ಮರಿಯಮ್ಮ ದಂಪತಿ ಪುತ್ರರಾದ ಉಲಹನ್ನನ್ ಪಿ. ಎಂ. ಅವರು ಕಳೆದ ೩೫ ವರ್ಷಗಳಿಂದ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ನೇಲ್ಯಡ್ಕ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಅರಸಿನಮಕ್ಕಿ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ, ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನಲ್ಲಿ ಪ.ಪೂ. ಶಿಕ್ಷಣ ಮುಗಿಸಿ ದಾರವಾಡದಲ್ಲಿ ಸಿಪಿಎಡ್ ಪದವಿ ಪಡೆದು ೧೯೮೦ರಲ್ಲಿ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಗೆ ದೈಹಿಕ ಶಿಕ್ಷಕರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡ ಉಲಹನ್ನನ್‌ರವರಿಂದ ತರಬೇತಿ ಪಡೆದುಕೊಂಡು ಸುಮಾರು ೧೦ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು. ಇವರ ವಿದ್ಯಾರ್ಥಿಗಳಾದ ಜೇಸುದಾಸ್ ಪಿ.ಟಿ. ಯವರು ೧೧೦ ಮೀ. ಹರ್ಡಲ್ಸ್ ಹಾಗೂ ಅಭಿಷೇಕ್ ಶೆಟ್ಟಿಯವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದರು. ಅಲ್ಲದೆ ವಾಲಿಬಾಲ್, ಖೋ ಖೋ ಅತ್ಲೆಟಿಕ್‌ನಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಇವರಿಂದ ತರಬೇತಿ ಪಡೆದುಕೊಂಡ ಕಾಲೇಜಿನ ತಂಡ ಚಾಂಪಿಯನ್ ಆಗಿದೆ. ೨೦೦೫ರಲ್ಲಿ ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌ನವರಿಂದ ಉತ್ತಮ ದೈಹಿಕ ಶಿಕ್ಷಣ ಶಿಕ್ಷಕ ಪ್ರಶಸ್ತಿಯೂ ಇವರಿಗೆ ಲಭಿಸಿತ್ತು. ರಾಜ್ಯ ಮಟ್ಟದ ಅತ್ಲೆಟಿಕ್ ತೀರ್ಪುಗಾರರಾಗಿ, ತ್ರೋ ಬಾಲ್, ಖೋ ಖೋ ತೀರ್ಪುಗಾರರಾಗಿಯೂ ಇವರು ಆಯ್ಕೆಗೊಂಡಿದ್ದಾರೆ. ಇವರಿಗೆ ಬೇರೆ ಬೇರೆ ವಿಭಾಗದಲ್ಲಿ ಒಟ್ಟು ಸುಮಾರು ೪೨ ವೈಯುಕ್ತಿಕ ಪ್ರಶಸ್ತಿಗಳು ಬಂದಿವೆ. ಕರಾಟೆಯಲ್ಲಿ ಗ್ರೀನ್ ಬೆಲ್ಟ್ ಪಡೆದುಕೊಂಡಿರುವ ಇವರು ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ನೆಲ್ಯಾಡಿ ಜ್ಯೂನಿಯರ್ ಛೇಂಬರ್ ಅಧ್ಯಕ್ಷರಾಗಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ, ನೆಲ್ಯಾಡಿ ಯುವಕ ಮಂಡಲದ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಶ್ರೀಮತಿ ಮೇರಿ ಇವರು ಕೊಕ್ಕಡ ನಾಡ ಕಚೇರಿಯಲ್ಲಿ ಗುಮಾಸ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಹಿರಿಯ ಪುತ್ರಿ ಉದನೆ ಪಾಲಿಕಾರ್ಪಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದು, ಇನ್ನೋರ್ವ ಪುತ್ರಿ ಸೌಮ್ಯಾ ಮಹಾರಾಷ್ಟ್ರದ ಖಾಸಗಿ ವಿದ್ಯಾ ಸಂಸ್ಥೆಯೊಂದರಲ್ಲಿ ಉಪನ್ಯಾಸಕಿಯಾಗಿದ್ದಾರೆ. ಕಿರಿಯ ಪುತ್ರಿ ಧನ್ಯಾ ಎಂ.ಎಸ್‌ಸಿ ನರ್ಸಿಂಗ್ ಪದವೀಧರೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.