ಬಳ್ಳಮಂಜದಲ್ಲಿ ವ್ಯಕ್ತಿಯೋರ್ವರಿಂದ ಸರಕಾರಿ ಜಾಗ ಅತಿಕ್ರಮಣ: ತಹಶೀಲ್ದಾರ್ ಭೇಟಿ

ಬಳ್ಳಮಂಜದಲ್ಲಿ ವ್ಯಕ್ತಿಯೋರ್ವರಿಂದ ಸರಕಾರಿ ಜಾಗ ಅತಿಕ್ರಮಣ ಆರೋಪ: ಊರವರಿಂದಲೂ ಶೆಡ್ ನಿರ್ಮಾಣ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ

 

ಮಚ್ಚಿನ: ಇಲ್ಲಿಯ ಮಚ್ಚಿನ ಗ್ರಾಮದ ಬಳ್ಳಮಂಜ ಸ.ನಂ.199ರಲ್ಲಿರುವ ಸರಕಾರಿ ಜಾಗವನ್ನು ಚಂದ್ರಶೇಖರ್ ಬಿ.ಎಸ್ ಅವರು ಅತಿಕ್ರಮಿಸಿ, ಮನೆಕಟ್ಟಲು ಲೆವಲ್ ಮಾಡಿದರೆಂದು ಆರೋಪಿಸಿ, ಊರವರು ಅದೇ ಜಾಗದಲ್ಲಿ ಶೆಡ್ ನಿರ್ಮಿಸಿದ ಘಟನೆ ಅ.10ರಂದು ವರದಿಯಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಂದ್ರಶೇಖರ್ ಅವರಿಗೆ ಬೇರೆ ಸರ್ವೆ ನಂಬ್ರದಲ್ಲಿ 94ಸಿಯಲ್ಲಿ ಜಾಗ ಮಂಜೂರಾಗಿದ್ದರೂ ಅವರು ಸ.ನಂ 199ರಲ್ಲಿ ಅವರು ಸರಕಾರಿ ಜಾಗವನ್ನು ಅತಿಕ್ರಮಿಸಿ ಅಡಿಕೆ ಗಿಡನೆಡಲು ಗುಂಡಿತೋಡಿದ್ದಾರೆ. ಅಲ್ಲದೆ ವಿದ್ಯುತ್ ಟವರ್ ತನಕ ಮಣ್ಣು ತೆಗೆದಿದ್ದಾರೆ. ಜೊತೆಗೆ ಮನೆ ನಿರ್ಮಿಸಲು ಕಲ್ಲು ತಂದು ಹಾಕಿದ್ದಾರೆ ಎಂದು ಊರುವರು ಆರೋಪಿಸಿದ್ದು, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ. ಗ್ರಾಮ ಕರಣಿಕ ಸತೀಶ್ ಪಿಂಟೋ ಅವರು ಸ್ಥಳ ಪರಿಶೀಲನೆ ನಡೆಸಿ ಯಾವುದೇ ಕಾಮಗಾರಿ ನಡೆಸದಂತೆ ಸೂಚನೆ ನೀಡಿದ್ದಾರೆ.


ಈ ನಡುವೆ ಇದೇ ಲೆವಲ್ ಮಾಡಿದ ಜಾಗದಲ್ಲಿ ಕೆಲವರು ಅಕ್ರಮವಾಗಿ ಟೆಂಟ್ ನಿರ್ಮಾಣ ಮಾಡಿದ್ದು, ವಿವಾದ ಈಗ ಹೊಸ ತಿರುವುಗಳನ್ನು ಪಡೆದುಕೊಂಡಿದೆ. ಘಟನೆ ಬಗ್ಗೆ ಗ್ರಾಮಕರಣಿಕರನ್ನು ಸಂಪರ್ಕಿಸಿದಾಗ ಇದು ಗ್ರಾಮ ಪಂಚಾಯತ್ ನಿವೇಶನಕ್ಕಾಗಿ ಹಿಂದೆ ಖಾದಿರಿಸಿದ ಸ್ಥಳವಾಗಿದೆ. ಪಂಚಾಯತು ಜಾಗದ ಸುತ್ತಾ ಗುರುತು ಮಾಡಿದ್ದರೂ, ಬೋರ್ಡು ಹಾಕಿರಲಿಲ್ಲ. ಇಲ್ಲಿ ನಾಲ್ಕೈದು ಮಂದಿಗೆ 94ಸಿಯಲ್ಲಿ ಹಕ್ಕುಪತ್ರ ಆಗಿದೆ. ಅವರು ಮನೆ ಕಟ್ಟಿಕೊಂಡಿದ್ದಾರೆ. ಜೊತೆಗೆ ಇಲ್ಲಿ ಹೈಟೆಕ್ಷನ್ ವಿದ್ಯುತ್ ಲೈನ್ ಹೋಗುತ್ತಿದ್ದು, ವಿವಾದಿತ ಜಾಗ ಟವರ್ ಬಫರ್‍ಗೆ ಬರುತ್ತದೆ. ತಹಶೀಲ್ದಾರ್ ಕೆಲಸ ಮಾಡದಂತೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.


ಜಾಗ ಲೆವಲ್ ಮಾಡಿರುವ ಚಂದ್ರಶೇಖರ್ ಅವರು ಪ್ರತಿಕ್ರಿಯಿಸಿ ಇದು ನಾನು ಬೇರೊಬ್ಬರಿಂದ ಖರೀದಿಸಿದ ಜಾಗ, ಇದರಲ್ಲಿ ನನ್ನ ತಾಯಿ ಶ್ರೀಮತಿ ದೇವಕಿ ಹೆಸರಿನಲ್ಲಿ 94ಸಿಯಲ್ಲಿ 10 ಸೆಂಟ್ಸ್ ಜಾಗದ ಹಕ್ಕುಪತ್ರ ಇದೆ. ಇದನ್ನು ತಹಶೀಲ್ದಾರ್ ಗಮನಕ್ಕೆ ತಂದಿದ್ದೇನೆ. ನಾನು ಬಾಡಿಗೆ ಮನೆಯಲ್ಲಿದ್ದು, ತಾಯಿಯ ಒಪ್ಪಿಗೆ ಪಡೆದು ಮನೆ ಕಟ್ಟಲು ಲೆವಲ್ ಮಾಡಿದ್ದೇನೆ. ಲೆವಲ್ ಮಾಡುವಾಗ ಟವರ್‍ನವರಗೆ ಸುಮಾರು 5 ಸೆಂಟ್ಸ್ ಹೆಚ್ಚಿಗೆ ಹೋಗಿರಬಹುದು. ಅದನ್ನು ಬಿಟ್ಟು ಬಿಡುತ್ತೇನೆ ಎಂದು ಸಹ ತಹಶೀಲ್ದಾರ್‍ಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.