ಗ್ರಾ.ಪಂ.ಗಳಿಗೆ ಶೀಘ್ರವಾಗಿ ಚುನಾವಣೆ ಘೋಷಣೆ ಸಾಧ್ಯತೆ

ಬೆಳ್ತಂಗಡಿ: ರಾಜ್ಯದ ಅಧಿಕಾರ ಅವಧಿ ಮುಗಿದ ಗ್ರಾಮ ಪಂಚಾಯತುಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದು, ಶೀಘ್ರವಾಗಿ ಚುನಾವಣೆ ಘೋಷಣೆ ಮಾಡುವ ಸಾಧ್ಯತೆಗಳು ದಟ್ಟವಾಗಿದೆ.
ಕಳೆದ ಜೂನ್-ಜುಲೈ ತಿಂಗಳಲ್ಲಿ ಚುನಾಯಿತ ಸದಸ್ಯರ ಆಡಳಿತ ಅವಧಿ ಮುಕ್ತಾಯಗೊಂಡಿದ್ದು, ಅದಕ್ಕೆ ಮೊದಲೇ ಚುನಾವಣೆ ನಡೆಯಬೇಕಿತ್ತು. ಆದರೆ ಕೊರೊನಾ ಮಹಮಾರಿಯ ಹಿನ್ನಲೆಯಲ್ಲಿ ಸರಕಾರ ಚುನಾವಣೆಯನ್ನು ಮುಂದೂಡಿ ಎಲ್ಲಾ ಗ್ರಾಮ ಪಂಚಾಯತುಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕಗೊಳಿಸಿ ಸರಕಾರ ಆದೇಶ ನೀಡಿತ್ತು.
ಆಡಳಿತಾಧಿಕಾರಿಗಳ ಆರು ತಿಂಗಳ ಆಡಳಿತ ಅವಧಿ ನವಂಬರ್‌ಗೆ ಆಗಲಿರುವುದರಿಂದ ಅದಕ್ಕಿಂತ ಮೊದಲು ಚುನಾವಣೆ ನಡೆಸಲು ಚುನಾವಣಾ ಆಯೋಗ ತಯಾರಿ ನಡೆಸುತ್ತಿದೆ. ಇದಕ್ಕೆ ಪೂರಕಾಗಿ ಸೆ.25 ನಂತರ ಯಾವುದೇ ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳನ್ನು ವರ್ಗಾವಣೆ ಮಾಡದಂತೆ ಸರಕಾರಕ್ಕೆ ಸೂಚನೆ ನೀಡಿದೆ.
ಗ್ರಾ.ಪಂ. ಚುನಾವಣೆಗೆ ತಾಲೂಕು ಹಾಗೂ ಜಿಲ್ಲೆಗಳಲ್ಲಿ ಪೂರ್ವಭಾವಿ ತಯಾರಿಗಳು ನಡೆಯುತ್ತಿದೆ. ಈ ಕಾರ್ಯಗಳಿಗೆ ತೊಡಕಾಗದಂತೆ ಸೆ.25ರ ನಂತರ ಕಂದಾಯ ಇಲಾಖೆಯ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಗಳ ವರ್ಗಾವಣೆ ಆದೇಶ ಹೊರಡಿಸದಂತೆ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಚುನಾವಣಾ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಗ್ರಾಮ ಪಂಚಾಯತು ಚುನಾವಣೆ ಘೋಷಿಸುವ ಸಂಬಂಧ ಅಕ್ಟೋಬರ್ ಮೊದಲ ವಾರದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಈಗಾಗಲೇ ರಾಜ್ಯ ಚುನಾವಣಾ ಆಯೋಗ ಹೈಕೋರ್ಟಿಗೆ ತಿಳಿಸಿರುವುದು ಇದಕ್ಕೆ ಹೆಚ್ಚಿನ ಪುಷ್ಟಿ ನೀಡಿದೆ.
ಈಗಾಗಲೇ ಸರಕಾರ ಗ್ರಾ.ಪಂ ವಾರ್ಡ್‌ವಾರು ಮೀಸಲಾತಿಯನ್ನು ಪ್ರಕಟಿಸಿದೆ. ಜೊತೆಗೆ ಮತದಾರರ ಕರಡು ಪಟ್ಟಿಯನ್ನು ಪ್ರಕಟಗೊಳಿಸಿದೆ. ಈ ನಡುವೆ ರಾಜಕೀಯ ಪಕ್ಷಗಳಲ್ಲೂ ಗ್ರಾ.ಪಂ ಚುನಾವಣಾ ಚುಟುವಟಿಕೆಗಳು ಬಿರುಸುಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.