ನಿಧಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಧಿಕಾರಿಗಳಿಂದ ಶೋಧ- ಪತ್ತೆಯಾಗದ ಕುರುಹು

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬರಾಯ ಕನ್ಯಾಡಿ ಗ್ರಾಮದಲ್ಲಿ ಕೃಷಿಕರೋರ್ವರ ಜಮೀನಿನಲ್ಲಿ ನಿಧಿ ಇದೆ ಎಂದು ಗದ್ದೆಯಲ್ಲಿ ಕಂಡು ಬಂದ ಗುಂಡಿಯ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು, ಇದು ವ್ಯಾಪಕವಾಗಿ ವೈರಲ್ ಆದ ಹಿನ್ನಲೆಯಲ್ಲಿ ಇದರ ಸತ್ಯಾಸತ್ಯತೆ ತಿಳಿಯಲು ಬೆಳ್ತಂಗಡಿ ತಹಶೀಲ್ದಾರ್ ಅವರ ಉಪಸ್ಥಿತಿಯಲ್ಲಿ ಅಧಿಕಾರಿಗಳ ತಂಡ ನಿಧಿ ಇತ್ತೆನ್ನಲಾದ ಜಾಗವನ್ನು ಅಗೆದಾಗ ಯಾವುದೇ ಕುರುಹು ಪತ್ತೆಯಾಗದೆ ಅಧಿಕಾರಿಗಳು ಹಿಂತಿರುಗಿದ ಘಟನೆ ಜು.22ರಂದು ವರದಿಯಾಗಿದೆ.


ಬರಾಯ ಕನ್ಯಾಡಿ ಗ್ರಾಮದ ಪಣೆತ್ತಡಿ ಎಂಬಲ್ಲಿಯ ನಿವಾಸಿ ಪಿಲ್ಲು ಶೆಟ್ಟಿಯವರ ಪುತ್ರ ಆನಂದ ಶೆಟ್ಟಿಯವರಿಗೆ ಸೇರಿದ ಜಮೀನಿನಲ್ಲಿ ಬೆಲೆ ಬಾಳುವ ನಿಧಿ ಇದೆ ಎನ್ನುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದನ್ನು ಯಾರೋ ಪೊಲೀಸರಿಗೆ ಹಾಗೂ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳಿಗೆ ಕಳುಹಿಸಿದ್ದರು.


ವಿಷಯ ತಹಶೀಲ್ದಾರ್ ಮಹೇಶ್ ಜೆ. ಅವರ ಗಮನಕ್ಕೆ ಬರುತ್ತಿದ್ದಂತಗೆ ಅವರು ಕಂದಾಯ ನಿರೀಕ್ಷಕ ಹಾಗೂ ಗ್ರಾಮಕರಣಿಕರನ್ನು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದರು. ಅದರಂತೆ ಅವರಿಬ್ಬರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿ ಇಲ್ಲಿ ನಿಧಿ ಇರುವ ಬಗ್ಗೆ ಯಾವುದೇ ಕುರುಹು ಇಲ್ಲ ಎಂದು ವರದಿ ನೀಡಿದ್ದರು.
ಆದರೆ ನಿಧಿ ಇದೆ ಎನ್ನುವ ವಿಡಿಯೋ ಮತ್ತಷ್ಟು ವೈರಲ್ ಆಗುತ್ತಿದ್ದಂತೆ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ತಹಶೀಲ್ದಾರ್ ಹಾಗೂ ಬೆಳ್ತಂಗಡಿ ಠಾಣೆಯ ಎಸ್.ಐ ನಂದಕುಮಾರ್ ಅವರು ಸ್ಥಳಕ್ಕೆ ಆಗಮಿಸಿ, ನಿಧಿ ಇದೆ ಎನ್ನಲಾದ ಗುಂಡಿಯ ಮಣ್ಣನ್ನು ತೆಗೆದು ನೋಡಿದಾಗ ಯಾವುದೇ ನಿಧಿ ಇದ್ದ ಕುರುಹು ಸ್ಥಳದಲ್ಲಿ ದೊರೆಯದ ಹಿನ್ನಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಅಧಿಕಾರಿಗಳು ಹಿಂತಿರುಗಿದ್ದಾರೆ.


ಆನಂದ ಶೆಟ್ಟಿಯವರು ತನ್ನ ಜಮೀನಿನಲ್ಲಿ ಕೊಳವೆ ಬಾವಿ ನಿರ್ಮಿಸಿದ್ದರು. ಅದಕ್ಕೆ ಮನೆಯ ಸಮೀಪದಿಂದ ನೀರು ಮತ್ತು ವಿದ್ಯುತ್ ಸಂಪರ್ಕಕ್ಕಾಗಿ ಪೈಪ್‍ಲೈನ್ ಮಾಡಿದ್ದರು. ಅದನ್ನು ಮುಚ್ಚಲಿಲ್ಲ. ಸುಮಾರು 5 ದಿನಗಳ ಬಳಿಕ ಒಂದು ಜಾಗದಲ್ಲಿ ಸುಮಾರು ಐದು ಅಡಿ ಅಳಕ್ಕೆ ವೃತ್ತಕಾರದಲ್ಲಿ ಮಣ್ಣು ಕುಸಿಯಿತು. ಇದನ್ನು ನೋಡಿದ ಯಾರೋ ವಿಡಿಯೋ ಮಾಡಿ ನಿಧಿ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು ಎಂದು ಮಾಲಕ ಆನಂದ ಶೆಟ್ಟಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.