ಕೊರೊನಾ ಪಾಸಿಟಿವ್ ವರದಿಯಿಂದ ಆಸ್ಪತ್ರೆಯಲ್ಲಿ ದಾಖಲಾದ ಬಾಣಂತಿ ಮಹಿಳೆ ಪರಾರಿಯಾಗಿ ಮತ್ತೆ ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಜು.15ರ ರಾತ್ರಿ ಹೆರಿಗೆಯಾದ ಮಹಿಳೆಯೋರ್ವಳು ತನಗೆ ಕೊರೋನಾ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿದೆ ಎಂಬ ಭಯದಿಂದ ಪತಿಯೊಂದಿಗೆ ಜುಲೈ 16ರ ರಾತೋರಾತ್ರಿ ಆಸ್ಪತ್ರೆಯಿಂದ  ಪರಾರಿಯಾದ ಘಟನೆ ವರದಿಯಾಗಿದೆ. ಅಪರಾತ್ರಿಯಲ್ಲಿ ಪರಾರಿಯಾದ ಬಾಣಂತಿ-ಮಗುವನ್ನು ಪತ್ತೆ ಹಚ್ಚಿದ ಬೆಳ್ತಂಗಡಿ ಪೊಲೀಸರು ಮತ್ತೆ ಅವರನ್ನು ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ತಂದು ಬಿಟ್ಟಿದ್ದಾರೆ.

ಜುಲೈ 12ರಂದು ನಾವೂರಿನ ಮಹಿಳೆಯೋರ್ವಳು ಹೆರಿಗೆಗಾಗಿ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ನಿಯಮದಂತೆ ವೈದ್ಯರು ಗರ್ಭಿಣಿಯ ಗಂಟಲದ್ರವವನ್ನು ಕೊರೋನಾ ಪರೀಕ್ಷೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ಈ ನಡುವೆ ಕೊರೋನಾ ಪರೀಕ್ಷೆಯ ವರದಿ ಬರುವ ಮುನ್ನವೇ ಅಂದರೆ ಜು 15 ರಂದು ಆಕೆಗೆ ಹೆರಿಗೆಯೂ ಆಯಿತು. ಜು 16ರ ಸಂಜೆ ಆಕೆಯ ಕೊರೋನಾ ಪರೀಕ್ಷೆಯ ವರದಿ ಬಂದಿದ್ದು, ಪಾಸಿಟೀವ್ ಆಗಿತ್ತು. ಬಾಣಂತಿಗೆ ಹಾಗೂ ಆಕೆಯ ಮನೆಯವರಿಗೆ ಈ ಬಗ್ಗೆ ಮಾಹಿತಿ ನೀಡಿ ಧೈರ್ಯ ತುಂಬಿದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯರು, ಬಾಣಂತಿ ಹಾಗೂ ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಲೇಡಿಗೊಷನ್ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದರು.
ಈ ನಡುವೆ ಜುಲೈ 16ರ ರಾತ್ರಿ ತನ್ನ ಮಾರುತಿ ಓಮ್ನಿ ಕಾರಲ್ಲಿ ಆಸ್ಪತ್ರೆಗೆ ಬಂದ ಆಕೆಯ ಪತಿ,  ನಿರತ ವೈದ್ಯರ ಹಾಗೂ ಸಿಬ್ಬಂದಿಗಳ ಮಾತು-ಸೂಚನೆಗಳನ್ನೂ ಧಿಕ್ಕರಿಸಿ, ತಡೆಯಲು ಬಂದವರನ್ನು ತಳ್ಳಿ, ತನ್ನ ಬಾಣಂತಿ ಪತ್ನಿ ಹಾಗೂ ಹಸುಗೂಸಿನೊಂದಿಗೆ ಪರಾರಿಯಾಗಿದ್ದಾರೆ. ವೈದ್ಯರು ತಕ್ಷಣ ಘಟನೆಯ ವಿವರವನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ತಿಳಿಸುವ ಸಮಯಪ್ರಜ್ಞೆ ತೋರಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಪೊಲೀಸರ ತಂಡ ಸಬ್‌ಇನ್ಸ್‌ಪೆಕ್ಟರ್ ನಂದ ಕುಮಾರ್‌ರ ಮಾರ್ಗದರ್ಶನದಲ್ಲಿ ಪರಾರಿಯಾದ ಬಾಣಂತಿ-ಮಗುವನ್ನು ಪತ್ತೆಹಚ್ಚಿ ಮತ್ತೆ ಆಸ್ಪತ್ರೆಗೆ ಕರೆತಂದು ಬಿಟ್ಟಿದ್ದಾರೆ. ಇಂದು ಜುಲೈ 17ರಂದು ಬಾಣಂತಿ-ಮಗುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಲೇಡಿಗೊಷನ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.