ಸರಕಾರದ ಅನುದಾನಕ್ಕೆ ಕಾಯದೆ ತೊರೆಗೆ ತಾತ್ಕಾಲಿಕ ಸೇತುವೆ ನಿರ್ಮಿಸಿದ ನಾವೂರು ಗ್ರಾಮಸ್ಥರು

ನಾವೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ವನ್ಯಜೀವಿ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಿದೆ. ಆದರೂ ಮಳೆಗಾಲದಲ್ಲಿ ತುಂಬಿ ಹರಿಯುವ ತೊರೆಗೆ ಸರ್ಕಾರದ ಅನುದಾನವನ್ನು ಕಾಯದೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವ ಮೂಲಕ ನಾವೂರು ಗ್ರಾಮಸ್ಥರು ಮಾದರಿಯಾಗಿದ್ದಾರೆ.


ನಾವೂರು ಗ್ರಾಮದ ಹಲವಾರು ಪ್ರದೇಶಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿದ್ದು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರೆತೆ ಇದೆ. ಸರಕಾರ ಆದಿವಾಸಿಗಳ ಪ್ರದೇಶದ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಬಿಡುಗಡೆ ಮಾಡಿದರೂ ವನ್ಯಜೀವಿ ಅರಣ್ಯ ಇಲಾಖೆ ನಿರಂತರವಾಗಿ ಅಡ್ಡಿ ಪಡಿಸುತ್ತಿದೆ. ಆದಿವಾಸಿಗಳ ಅಭಿವೃದ್ಧಿಗಾಗಿಯೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅರಣ್ಯ ಹಕ್ಕು ಕಾಯ್ದೆ ೨೦೦೬ ಇದ್ದರೂ ಅದನ್ನು ಅನುಷ್ಠಾನ ಮಾಡದೆ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸುತ್ತಿದೆ.

ಈ ಕಾರಣಕ್ಕಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಇದನ್ನು ಮನಗಂಡು ನಾವೂರು ಗ್ರಾಮದ ಪುಲಿತ್ತಡಿ, ಅಲ್ಯ, ಮುತ್ತಾಜೆ, ಕುದ್ಕೋಳಿ, ಎರ್ಮೆಲೆ ಪ್ರದೇಶದಲ್ಲಿ ಸುಮಾರು ೧೫ ಮಲೆಕುಡಿಯ ಕುಟುಂಬಗಳು ವಾಸಿಸುತ್ತಿದ್ದು ಈ ಕುಟುಂಬಗಳು ದಿನನಿತ್ಯದ ಕೆಲಸಗಳಿಗೆ ಕುದ್ಕೋಳಿ ಎಂಬಲ್ಲಿರುವ ತೊರೆಯನ್ನು ದಾಟಿ ಬರಬೇಕಾಗಿದೆ. ಮಳೆಗಾಲದಲ್ಲಿ ತುಂಬಿ ಹರಿಯುವ ತೊರೆ ದಾಟುವುದು ಸಾಧ್ಯವಿಲ್ಲ. ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು, ನಿತ್ಯದ ಕೆಲಸ, ಹಾಲು ಉತ್ಪಾದಕರ ಸಂಘಕ್ಕೆ ಹೋಗಲು ಇದೇ ತೊರೆಯನ್ನು ಉಪಯೋಗಿಸುತ್ತಿದ್ದು ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಸ್ಥಳೀಯ ಯುವಕರು ಸೇರಿ ತಮ್ಮ ಸ್ವಂತ ಪರಿಶ್ರಮದಿಂದ ಈ ತೊರೆಗೆ ಅಡ್ಡವಾಗಿ ತಾತ್ಕಾಲಿಕ ಮರದ ಸೇತುವೆ ನಿರ್ಮಾಣ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.