ಡೆಂಗ್ಯೂ ಜ್ವರಕ್ಕೆ ತಾಲೂಕಿನಲ್ಲಿ ಮೊದಲ ಬಲಿ ಪ್ರಗತಿಪರ ಕೃಷಿಕ ಆಲಂದಡ್ಕ ವಿನಾಯಕ ಪ್ರಭು ಕೊನೆಯುಸಿರು

Advt_NewsUnder_1
Advt_NewsUnder_1
Advt_NewsUnder_1

ಕಡಿರುದ್ಯಾವರ: ತಾಲೂಕಿನ ಪ್ರತಿಷ್ಠಿತ ಆಲಂದಡ್ಕ ಮನೆಯ ನಿವಾಸಿ, ಪ್ರಗತಿಪರ ಸಾವಯವ ಕೃಷಿಕ, ಹಿರಿಯ ಸಾಮಾಜಿಕ ಮುಂದಾಳುವಾಗಿದ್ದ ವಿನಾಯಕ ಪ್ರಭು ಆಲಂದಡ್ಕ (60ವ.) ಅವರು ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಪ್ಲೇಟ್‌ಲೆಟ್ ಕೊರತೆ ಮತ್ತು ಮೂತ್ರಪಿಂಡ ವೈಫಲ್ಯಕ್ಕೊಳಗಾಗಿ ಜೂ. 16 ರಂದು ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದು ಈ ವರ್ಷದಲ್ಲಿ ಡೆಂಗ್ಯೂ ಜ್ವರಕ್ಕೆ ಬೆಳ್ತಂಗಡಿ ತಾಲೂಕಿನಲ್ಲಿ ಮೃತಪಟ್ಟ ಪ್ರಥಮ ಪ್ರಕರಣವಾದರೆ ಜಿಲ್ಲೆಯ ಮಟ್ಟಿಗೆ ದ್ವಿತೀಯ ಸಾವಿನ ಪ್ರಕರಣವಾಗಿ ದಾಖಲಾಗಿದೆ.
ಜೂ. 8 ರಂದು ಸಾಮಾನ್ಯ ಜ್ವರದಿಂದ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಈ ಮಧ್ಯೆ ಅವರಿಗೆ ರಕ್ತದಲ್ಲಿ ಪ್ಲೇಟ್‌ಲೆಟ್ ಪ್ರಮಾಣ ಕುಸಿತಕಂಡದ್ದರಿಂದ ವೈದ್ಯರ ಶಿಫಾರಸ್ಸಿನಂತೆ ಜೂ. 13 ರಂದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಮುಂದುವರಿಯುತ್ತಿದ್ದಂತೇ ಸೋಮವಾರ ಅವರ ಆರೋಗ್ಯದಲ್ಲಿ ಇನ್ನಷ್ಟು ಏರುಪೇರು ಕಂಡುಬಂದಿದ್ದರಿಂದ ಅವರನ್ನು ತೀವ್ರನಿಗಾ ಘಟಕಕ್ಕೆ ಸ್ಥಳಾಂತರಿಸಿ ಪ್ಲೇಟ್‌ಲೆಟ್ ನೀಡುವ ಚಿಕಿತ್ಸೆ ಮುಂದುವರಿಸಲಾಯಿತು. ಈ ಮಧ್ಯೆ ಅವರಿಗೆ ತೀವ್ರ ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಾಗ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಯಿತು. ಅದಾಗ್ಯೂ ಅವರು ಚೇತರಿಸಿಕೊಳ್ಳದೆ ಜೂ. 16 ರಂದು ಅವರು ಮಧ್ಯಾಹ್ನ ಕೊನೆಯುಸಿರೆಳೆದರು.
ಪ್ರಗತಿಪರ ಸಾವಯವ ಕೃಷಿಕರಾಗಿದ್ದ ವಿನಾಯಕ ಪ್ರಭು ಅವರು ಮಾದರಿ ಕೃಷಿಕ ಮತ್ತು ಹೈನುಗಾರರಾಗಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಸಾವಯವ ಕೃಷಿ ವಿಭಾಗದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದು, ಅವರ ಕೃಷಿಯ ಮಾದರಿ ಪರಿಚಯಕ್ಕೆ ರಾಜ್ಯಾಧ್ಯಂತದಿಂದ ಕೃಷಿಕರ ತಂಡ ಅಧ್ಯಯನ ಪ್ರವಾಸಕ್ಕೆ ಆಗಮಿಸುತ್ತಿದ್ದರು. ಅವರಿಗೆ ವಿನಾಯಕ ಪ್ರಭು ಅವರು ಸಂಪನ್ಮೂಲ ತರಬೇತಿ ನೀಡುತ್ತಿದ್ದರು.
ಉತ್ತಮ ಹೈನುಗಾರರೂ ಆಗಿದ್ದ ಅವರು ಕಡಿರುದ್ಯಾವರ ಮಿಲ್ಕ್ ಸೊಸೈಟಿಗೆ ಹಾಲು ಒದಗಿಸುತ್ತಿದ್ದರು.
ಕಲಾಪೋಷಕರಾಗಿದ್ದ ಅವರು ತನ್ನ ತಂದೆ ವಾಸುದೇವ ಪ್ರಭು ಅವರ ತಂದೆ ಕೆ ರಾಮಕೃಷ್ಣ ಪ್ರಭು ಅವರ ಸ್ಮರಣೆಗಾಗಿ ತಮ್ಮ ಮನೆಯಲ್ಲೇ ಸಾರ್ವಜನಿಕ ಸಭಾಂಗಣ ರಚಿಸಿ ಕಲೆ, ಸಾಂಸ್ಕೃತಿಕ ಹಾಗೂ ಖಾಸಗಿ ಕಾರ್ಯಕ್ರಮಗಳಿಗೆ ಒದಗಿಸುತ್ತಿದ್ದರು. ಹಿಂದಿನಿಂದಲೂ ಅವರ ಮನೆಯಲ್ಲಿ ಗಣೇಶೋತ್ಸವ ಸಂದರ್ಭ ವಿಶೇಷ ಆಚರಣೆ, ಸಾರ್ವಜನಿಕ ಅನ್ನಸಂತರ್ಪಣೆ ಇತ್ಯಾಧಿ ಕಾರ್ಯಕ್ರಮ ನಡೆಸಿಕೊಂಡುಬರುತ್ತಿದ್ದರು. ಮಿತ್ತಬಾಗಿಲು ಗ್ರಾ.ಪಂ ಸದಸ್ಯರಾಗಿದ್ದ ಅವರು ಒಂದು ಅವಧಿಯಲ್ಲಿ ಉಪಾಧ್ಯಕ್ಷರೂ ಆಗಿದ್ದರು. ಮಾಜಿ ಶಾಸಕ ವಸಂತ ಬಂಗೇರ, ತಾ.ಪಂ ಮಾಜಿ ಅಧ್ಯಕ್ಷ ವಳಂಬ್ರ ನಾರಾಯಣ ಗೌಡ ಅವರ ಆತ್ಮೀಯರಾಗಿದ್ದು ಜಾತ್ಯತೀತ ಜನತಾದಳ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಕೃಷಿ ಮತ್ತು ವ್ಯವಹಾರದಲ್ಲೇ ಹೆಚ್ಚು ಸಕ್ರೀಯರಾಗಿದ್ದರು.
ಉತ್ತಮ ಸ್ನೇಹಜೀವಿಯಾಗಿದ್ದ ಅವರು ಅನ್ನದಾನ ಮತ್ತು ದಾನಧರ್ಮದ ಮೂಲಕ ಸ್ಥಳೀಯವಾಗಿ ಪ್ರಸಿದ್ಧಿ ಪಡೆದಿದ್ದರು.
ಹಾಸ್ಯ ಪ್ರವೃತ್ತಿ ಅಳವಡಿಸಿಕೊಂಡಿದ್ದ ಅವರು ಮೊದಲ ಭೇಟಿಯಲ್ಲೇ ಆತ್ಮೀಯ ಮಿತ್ರರಾಗುವ ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದರು. ಕಡಿರುದ್ಯಾವರ ಮಿಲ್ಕ್ ಸೊಸೈಟಿ ನಿರ್ದೇಶಕಾಗಿದ್ದು, ತಾಲೂಕು ಸೌಹಾರ್ದ ವೇದಿಕೆಯ ಕಡಿರುದ್ಯಾವರ ಘಟಕದ ಅಧ್ಯಕ್ಷರಾಗಿಯೂ ಸೇವೆಸಲ್ಲಿಸುತ್ತಿದ್ದರು.
ಮೃತರು ತಾಯಿ ವಸಂತಿ ಪ್ರಭು, ಪತ್ನಿ ವಿಜೇತಾ ವಿ ಪ್ರಭು, ಪುತ್ರಿ ವಿಶ್ಮಾ ದಯಾನಂದ ಶೆಣೈ, ಪುತ್ರ ವಿಘ್ನೇಶ ವಿ ಪ್ರಭು, ಮೊಮ್ಮಗ ಅಮೈ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.