ಲಾಕ್‌ಡೌನ್ ಸಮಯದಲ್ಲಿ ವೇತನ ಪಾವತಿಸದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್ ಆದೇಶ

ಬೆಳ್ತಂಗಡಿ:  ಲಾಕ್ ಡೌನ್ ಸಮಯದಲ್ಲಿ ಕೆಲಸಗಾರರಿಗೆ ವೇತನ ನೀಡದಿರುವ ಕಂಪೆನಿಗಳ ಮಾಲೀಕರ ವಿರುದ್ಧ ಜುಲೈ ಕೊನೆಯವರೆಗೆ ಕಠಿಣ ಕ್ರಮ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ವೇತನ ಪಾವತಿ ವಿಚಾರದಲ್ಲಿ ಕಂಪೆನಿ ಮಾಲೀಕರು ಮತ್ತು ಕೆಲಸಗಾರರ ಮಧ್ಯೆ ಹೊಂದಾಣಿಕೆಯ ಕುರಿತು ರಾಜ್ಯ ಸರ್ಕಾರ ಸಹಾಯ ಮಾಡಬೇಕಾಗಿದ್ದು ಸಂಬಂಧಪಟ್ಟ ಕಾರ್ಮಿಕ ಆಯುಕ್ತರಿಗೆ ವರದಿ ಸಲ್ಲಿಸಬೇಕು ಎಂದು ಹೇಳಿದೆ.

ಕಳೆದ ಮಾ.29ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ, ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೆಲಸಗಾರರಿಗೆ ಕಂಪೆನಿಗಳು ವೇತನ ಕಡಿತ ಮಾಡದೆ ಸಂಪೂರ್ಣ ನೀಡಬೇಕು ಎಂದು ಹೇಳಿತ್ತು. ಆದರೆ ಲಾಕ್ ಡೌನ್ ಸಮಯದಲ್ಲಿ ಕೆಲಸಗಾರರಿಗೆ ಕಡ್ಡಾಯವಾಗಿ ಸಂಪೂರ್ಣ ವೇತನ ನೀಡಬೇಕೆಂದು ಮಾ.29ರಂದು ಹೊರಡಿಸಿದ್ದ ಆದೇಶದ ಕಾನೂನು ಬದ್ಧತೆ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ 4 ವಾರಗಳ ಹೆಚ್ಚುವರಿ ಕಾಲಾವಕಾಶವನ್ನು ಸಹ ಇದೇ ಸಂದರ್ಭದಲ್ಲಿ ನೀಡಿದೆ.  50 ದಿನಗಳವರೆಗೆ ವೇತನ ಪಾವತಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ , ಸಂಜಯ್ ಕಿಶನ್ ಕೌಲ್ ಮತ್ತು ಎಂಆರ್ ಶಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆಗೆ ವಿರುದ್ಧವಾಗಿ ಹಲವು ಕಂಪೆನಿಗಳು ಸಲ್ಲಿಸಿರುವ ಅರ್ಜಿಗಳ ಬಾಕಿ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ಜುಲೈ ಕೊನೆ ವಾರಕ್ಕೆ ಮುಂದೂಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.