ಬೆಂಗಳೂರು: ಶಾಲೆಗಳನ್ನು ಜುಲೈ 1ರಂದು ತೆರೆಯುವುದಿಲ್ಲ. ಅದು ಕೇವಲ ಉದ್ದೇಶಿತ ದಿನಾಂಕವಷ್ಟೆ. ಶಾಲೆಗಳಲ್ಲಿ ನಡೆಯುವ ಪಾಲಕರ ಸಭೆಯ ನಿರ್ಣಯ ಕ್ರೋಢೀಕರಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ನಂತರವಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶಾಲೆ ಆರಂಭದ ಗೊಂದಲದ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಸಂಬಂಧ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಶಾಲಾರಂಭದ ಸಿದ್ಧತೆಗಾಗಿ ಉದ್ದೇಶಿತ ದಿನಾಂಕವನ್ನು ಪ್ರಕಟಿಸಿದ್ದೇವೆ. ಈ ಮಧ್ಯೆ ಎಲ್ಲಾ ಶಾಲೆಗಳಲ್ಲಿ ಮುಖ್ಯಶಿಕ್ಷಕರಿಗೆ ಪಾಲಕರ ಮತ್ತು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಸಭೆ ನಡೆಸಲು ಸೂಚನೆ ನೀಡಿದ್ದೇವೆ. ಆ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಎಸ್ಎಟಿಎಸ್ ಮೂಲಕ ಇಲಾಖೆಗೆ ಸಲ್ಲಿಸಲಿದ್ದಾರೆ. ಇದೆಲ್ಲವನ್ನು ಕ್ರೋಢಿಕರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಹಾಗೆಯೇ ರಾಜ್ಯದಲ್ಲೂ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಅಲ್ಲಿಯವರೆಗೂ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾಗುವುದಿಲ್ಲ ಎಂದು ತಿಳಿಸಿದ್ದಾರೆ. ತಕ್ಷಣವೇ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಪಾಲಕರು ಸಿದ್ಧರಿಲ್ಲ ಎಂಬ ಅರಿವು ಸರ್ಕಾರಕ್ಕೆ ಇದೆ. ಹಾಗೆಯೇ ತರಾತುರಿಯಲ್ಲಿ ಯಾವುದೇ ನಿರ್ಧಾರವನ್ನು ಸರಕಾರವೂ ತೆಗೆದುಕೊಳ್ಳುವುದಿಲ್ಲ. ಮಕ್ಕಳ ಹಿತ ಕಾಪಾಡುತ್ತೇವೆ ಮತ್ತು ಖಾಸಗಿ ಲಾಬಿಗೂ ಮಣಿಯುವುದಿಲ್ಲ. ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ತರಗತಿ ಆರಂಭಿಸುವ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಬಹುತೇಕರು ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಎಲ್ಲ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಕೊರೋನಾ ಪರಿಸ್ಥಿತಿ ಅವಲೋಕಿಸಿದ ನಂತರವೇ ತರಗತಿ ಆರಂಭಿಸಲಿವೆ. ಯಾವುದೇ ರೀತಿಯಲ್ಲೂ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.