ಬೆಳ್ತಂಗಡಿ: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನ 50ನೇ ವರ್ಷಾಚರಣೆಯ ಅಂಗವಾಗಿ ಮೇ. 30 ರಂದು ಬೆಳ್ತಂಗಡಿ ಯಲ್ಲಿ ಮಾನವ ಸರಪಳಿ ಹಮ್ಮಿಕೊಳ್ಳಲಾಗಿತ್ತು. ಬೆಳ್ತಂಗಡಿ ಸಿಐಟಿಯು ಕಛೇರಿ ಬಳಿ ಕಾರ್ಯಕ್ರಮ ನಡೆಸಲಾಯಿತು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಅತ್ಯಂತ ಸರಳ ರೀತಿಯಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.
ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ, ನ್ಯಾಯವಾದಿ ಶಿವಕುಮಾರ್ ಎಸ್ ಎಂ ಮಾತನಾಡಿ, ಕಾರ್ಮಿಕ ವರ್ಗದ ಆಶಾಕಿರಣವಾಗಿ ಕಳೆದ ಐವತ್ತು ವರ್ಷಗಳಲ್ಲಿ ಮೂಡಿಬಂದ ಸಿಐಟಿಯು ಇಂದು ದೇಶದ ಅತೀ ದೊಡ್ಡ ಸಂಘಟನೆಯಾಗಿ ಕಾರ್ಮಿಕ ವರ್ಗದ ಮಧ್ಯೆ ಬೆಳೆದುಬಂದಿದೆ.
ಹೋರಾಟದ ಫಲವಾಗಿ ಪಡೆದ ಸವಲತ್ತುಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳು ಮಾಲೀಕರ ಪರವಾಗಿ ಬದಲಾವಣೆ ಮಾಡುವ ಮೂಲಕ ಕಾರ್ಮಿಕ ವರ್ಗಕ್ಕೆ ದ್ರೋಹ ಬಗೆಯುತ್ತಿದೆ. ಕಾರ್ಮಿಕ ವಿರೋಧಿ ಸರ್ಕಾರಗಳ ವಿರುದ್ಧ ಸಂಘಟಿತ ಹೋರಾಟ ಇಂದಿನ ಅನಿವಾರ್ಯ ಎಂದರು.
ಸಿಐಟಿಯು ತಾಲೂಕು ಉಪಾಧ್ಯಕ್ಷ ಶೇಖರ್ ಲಾಯಿಲ,ಕಾರ್ಯದರ್ಶಿ ವಸಂತ ನಡ, ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘ (ನಿ) ಅಧ್ಯಕ್ಷ ಹರಿದಾಸ್ ಎಸ್.ಎಂ , ಮಹಿಳಾ ಹೋರಾಟಗಾರ್ತಿ , ನ್ಯಾಯವಾದಿ ಸುಕನ್ಯಾ ಹೆಚ್ ಮಾತನಾಡಿದರು.
ಕಾರ್ಯಕ್ರಮದ ನೇತೃತ್ವವನ್ನು ಸುಜೀತ್ ಉಜಿರೆ ವಹಿಸಿದ್ದರು. ಸಿಐಟಿಯು ಮುಖಂಡ ಕೃಷ್ಣ ನೆರಿಯ, ಪ್ರಭಾಕರ್ ತೋಟತ್ತಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘದ ಮುಖಂಡ ಮಾಧವರಾಯ್ ಗುರುವಾಯನಕೆರೆ, ರಾಧಾಕೃಷ್ಣ ಮಲವಂತಿಗೆ, ಕುಸುಮ ಮಾಚಾರು, ಕಿರಣ್ ಮಾಚಾರು, ಶ್ರಮಶಕ್ತಿ ಸ್ವಸಹಾಯ ಗುಂಪಿನ ಸಂಯೋಜಕ ಸಂಜೀವ ಆರ್ ಉಜಿರೆ ಉಪಸ್ಥಿತರಿದ್ದರು.