ಬೆಳಾಲು ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಗೊಲ್ಲರವರಿಗೆ ಶ್ರದ್ಧಾಂಜಲಿ

Advt_NewsUnder_1
Advt_NewsUnder_1

ಬೆಳಾಲು:  ಶ್ರೀ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಗೊಲ್ಲರವರು ಇತ್ತೀಚೆಗೆ ನಿಧನರಾಗಿದ್ದರು. ಉತ್ತರ ಕ್ರಿಯೆಯ ಸಂದರ್ಭದಲ್ಲಿ ಅವರ ಮನೆ ಶ್ರೀನಿಕೇತನ ಊರ ಪ್ರಮುಖರು, ಸಂಘ ಸಂಸ್ಥೆಗಳ ಮುಖ್ಯಸ್ಥರೊಡಗೂಡಿ ಮೃತರ ಆತ್ಮಕ್ಕೆ ಶಾಂತಿಯನ್ನು ಹಾರೈಸಿ ಶ್ರದ್ಧಾಂಜಲಿ ಕಾರ್ಯಕ್ರಮ ಮೇ.29 ರಂದು ನಡೆಯಿತು.
ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಮಾತನಾಡುತ್ತಾ ಗೊಲ್ಲ ಮಾಸ್ಟರ್‌ರವರು ತನ್ನ ವೃತ್ತಿ ಮತ್ತು ಪ್ರವೃತ್ತಿಗಳಿಂದ ಊರಿಗೆ ಹೆಸರು ತಂದವರು.ಬದ್ಧತೆಯ ಶಿಕ್ಷಕರಾಗಿ,ನಿರಂತರ ಕ್ರಿಯಾಶೀಲತೆಯಿಂದ ಎಲ್ಲರೊಳಗೊಂದಾಗಿ ಬದುಕಿದವರು.ವ್ಯಕ್ತಿತ್ವ ವಿಶೇಷಗಳಿಂದ ಊರಿಗೇ ಮಾಸ್ಟ್ರಾದವರು.ಅವರ ನಡೆ ನುಡಿಗಳು ಸದಾ ಪ್ರೇರಣೆ ನೀಡಲಿ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಕೆ.ರಾಜಾರಾಮ ಶರ್ಮ ರವರು ಮಾತನಾಡಿ, ಗೊಲ್ಲರು ಶಿಕ್ಷಕರಾಗಿ ಸಾಮಾಜಿಕ ಜವಾಬ್ದಾರಿಯೊಂದಿಗೆ ಬದುಕನ್ನು ವಿಸ್ತರಿಸಿಕೊಂಡವರು. ಹಳ್ಳಿ ಶಾಲೆಯೊಂದರಲ್ಲಿ ಗ್ರಾಮೀಣ ವಿಜ್ಞಾನ ಘಟಕ ಸ್ಥಾಪಿಸಿ ಬೆಳ್ತಂಗಡಿ ತಾಲೂಕಿನಾದ್ಯಂತ ಪ್ರಾಥಮಿಕ ಶಾಲೆಗಳಲ್ಲಿ ಪ್ರಯೋಗಗಳ ಮೂಲಕ ಪಾಠ ಮಾಡಿದ ಮಾದರಿ ಶಿಕ್ಷಕರು. ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ದುಡಿದ ಸಹಕಾರಿಯೂ ಆಗಿದ್ದಾರೆ ಎಂದರು.
ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹೆಚ್ ಪದ್ಮ ಗೌಡರು ಮಾತನಾಡಿ, ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಗೊಲ್ಲ ಮಾಸ್ಟರ್‌ರವರ ಜ್ಞಾನ ಉನ್ನತ ಮಟ್ಟದಲ್ಲಿತ್ತು.ಅವರೋರ್ವ ಪ್ಯಾಕೇಜ್ ಶಿಕ್ಷಕರಂತೆ ಎಲ್ಲಾ ವಿಷಯಗಳಲ್ಲೂ ಪಾಠ ಮಾಡಲು ಪರಿಣಿತರಾಗಿದ್ದರು. ಅವರ ಸಾಧನೆಗೆ ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಸಿಗಬೇಕಿತ್ತು.ಆದರೆ ಊರ ಜನತೆಯ ಹೃದಯದಲ್ಲಿ ಪಡೆದ ಸ್ಥಾನ ಎಲ್ಲ ಪ್ರಶಸ್ತಿಗಿಂತ ದೊಡ್ಡದು ಎಂದು ಗುಣಗಾನ ಮಾಡಿದರು.
ತಾಲೂಕಿನ ಯಾವುದೇ ಪ್ರದೇಶಕ್ಕೆ ಹೋದರೂ ನೀವು ಗೊಲ್ಲ ಮಾಸ್ಟರ್ ರವರ ಶಿಷ್ಯರಾ ಎಂದು ಗಣ್ಯಾತಿ ಗಣ್ಯರು ಕೇಳುತ್ತಿದ್ದರು. ಅಷ್ಟೂ ಪ್ರಸಿದ್ಧಿ ಪಡೆದ ಗೊಲ್ಲ ಮಾಸ್ಟರ್ ರವರ ಶಿಷ್ಯ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಪಡುತ್ತೇನೆ.ಅವರು ತೋರಿದ ಮೌಲಿಕ ಬದುಕಿನ ಮಾರ್ಗದಲ್ಲಿ ನಡೆಯೋಣವೆಂದು ನಿವೃತ್ತ ಕೃಷಿ ಅಧಿಕಾರಿಗಳಾದ ನಾರಾಯಣ ಸುವರ್ಣರವರು ಅಭಿಪ್ರಾಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಗೊಲ್ಲರ ಪತ್ನಿ ವಿನೋದಿನಿ, ಮಕ್ಕಳಾದ ಶಿವಪ್ರಸಾದ, ಶಶಿಧರ, ಶರಶ್ಚಂದ್ರ ಮಗಳಂದಿರಾದ ಶೈಲಜಾ,ಶ್ಯಾಮಲಾ, ಶಾಲಿನಿ, ಶರ್ಮಿಳ ಹಾಗೂ ಅಳಿಯಂದಿರು ,ಮೊಮ್ಮಕ್ಕಳು ಬಂಧು ಮಿತ್ರರು ಉಪಸ್ಥಿತರಿದ್ದರು. ಆರಂಭದಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.