HomePage_Banner_
HomePage_Banner_

ವೇಣೂರು ಗ್ರಾ.ಪಂ.: ಸಾಮಾನ್ಯ ಸಭೆ ರದ್ದು! ಅಭಿವೃದ್ಧಿಗೂ ತೊಡಕು

ವೇಣೂರು: ವೇಣೂರು ಗ್ರಾಮ ಪಂಚಾಯತ್‌ನಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯು ಸದಸ್ಯರ ಗೈರು ಹಾಜರಿಯಿಂದ ಕೋರಂ ಇಲ್ಲದೆ ರದ್ದುಗೊಳ್ಳುವಂತಾಯಿತು.

2020-21ನೇ ಸಾಲಿನ ಕ್ರಿಯಾಯೋಜನೆ ತಯಾರಿ ಹಾಗೂ ಹಲವು ಯೋಜನೆಗಳ ನಿರ್ಣಯ ಕೈಗೊಳ್ಳುವ ಬಗ್ಗೆ ಸರ್ವ ಸದಸ್ಯರ ಸಾಮಾನ್ಯಸಭೆಯನ್ನು ಕರೆಯಲಾಗಿತ್ತು. ಈ ಬಗ್ಗೆ ಎಲ್ಲಾ ಸದಸ್ಯರಿಗೆ ರಿಜಿಸ್ಟಿರ್ ಮೂಲಕ ನೋಟೀಸು ನೀಡಲಾಗಿತ್ತು. ಅಧ್ಯಕ್ಷೆ ಮೋಹಿನಿ ವಿಶ್ವನಾಥ ಶೆಟ್ಟಿ ಸೇರಿದಂತೆ 6 ಮಂದಿ ಸದಸ್ಯರು ಸಭೆಗೆ ಹಾಜರಾಗಿದ್ದರು. 24 ಮಂದಿ ಸದಸ್ಯರಲ್ಲಿ 17 ಮಂದಿ ಸದಸ್ಯರು ಸಭೆಗೆ ಗೈರು ಹಾಜರಾಗಿ ಸಭೆ ಕೋರಂ ಇಲ್ಲದೆ ರದ್ದುಗೊಳ್ಳುವಂತಾಯಿತು.

ಈ ಮಧ್ಯೆ ಕೆಲ ಸದಸ್ಯರು ಸಭಾಂಗಣಕ್ಕೆ ಬಾರದೆ ಪಂಚಾಯತ್ ಕಚೇರಿ ಬಳಿಯಲ್ಲೇ ಲಂಗರು ಹೂಡಿದ್ದು, ಪೂರ್ವನಿರ್ಧರಿತವಾಗಿಯೇ ಸಭೆಗೆ ಗೈರು ಹಾಜರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಹಲವು ಬಾರಿ ಗ್ರಾಮಸಭೆಗಳು, ವಿಶೇಷ ಸಭೆಗಳು, ವಾರ್ಡ್‌ಸಭೆಗಳು ರದ್ದುಗೊಂಡಿತ್ತು. ಇದೀಗ ಮತ್ತೆ ಸದಸ್ಯರ ಒಳಗಿನ ರಾಜಕೀಯ ಪ್ರತಿಷ್ಠೆಯಿಂದ ಸಾಮಾನ್ಯಸಭೆ ರದ್ದುಗೊಳ್ಳುವಂತಾಗಿದ್ದು, ಕ್ರಿಯಾಯೋಜನೆ ಮೂಲಕ ಗ್ರಾಮದಲ್ಲಿ ಆಗಬೇಕಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ತೊಡಕುಂಟಾಗಿದೆ. ಒಂದಲ್ಲೊಂದು ವಿವಾದ ನಡೆಯುತ್ತಲೇ ಇರುವ ವೇಣೂರು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ನಡೆಯ ಬಗ್ಗೆ ಗ್ರಾಮದ ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಅವಿಶ್ವಾಸ ಮಂಡನೆ
ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿಶ್ವನಾಥ ಶೆಟ್ಟಿಯವರ ವಿರುದ್ಧ ಗ್ರಾ.ಪಂ. ಉಪಾಧ್ಯಕ್ಷ ಸೇರಿದಂತೆ ಸರ್ವ ಸದಸ್ಯರು ಪುತ್ತೂರು ಸಹಾಯಕ ಆಯುಕ್ತರಲ್ಲಿ ಅವಿಶ್ವಾಸ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಜೂ. 9 ರಂದು ಗ್ರಾಮ ಪಂಚಾಯತ್‌ನಲ್ಲಿ ಸಹಾಯಕ ಅಯುಕ್ತರು ಅವಿಶ್ವಾಸ ಮಂಡನೆಗೆ ಸದಸ್ಯರಲ್ಲಿ ವೈಯುಕ್ತಿಕ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಅಧ್ಯಕ್ಷರಲ್ಲಿ ವಿಶ್ವಾಸವಿಲ್ಲ…
ಈ ಹಿಂದೆ ನಡೆಸಲಾಗಿದ್ದ ಕ್ರಿಯಾಯೋಜನೆಯು ಶೇ. 5೦ರಷ್ಟು ಕೂಡಾ ಸರಿಯಾಗಿ ಅನುಷ್ಠಾನ ಆಗಿಲ್ಲ. ಇದೀಗ ಮತ್ತೆ ಸಾಮಾನ್ಯಸಭೆ ಕರೆದಿರುವುದಕ್ಕೆ ನಾವು ಆಕ್ಷೇಪಿಸಿ ಸಭೆಗೆ ಗೈರಾಗಿದ್ದೇವೆ. ಅಧ್ಯಕ್ಷರ ಮೇಲೆ ವಿಶ್ವಾಸ ಇಲ್ಲ ಎಂದೇ ನಾವು ಎಲ್ಲಾ ಸದಸ್ಯರು ಸಹಾಯಕ ಆಯುಕ್ತರಲ್ಲಿ ಅವಿಶ್ವಾಸ ಅರ್ಜಿ ಮಂಡಿಸಿದ್ದು, ಅಧ್ಯಕ್ಷರು ಕರೆಯುವ ಸಭೆಗೆ ನಾವು ಹಾಜರಾಗುವುದಿಲ್ಲ. ಬೇರೆ ಸದಸ್ಯರನ್ನು ಅಧ್ಯಕ್ಷತೆ ಮಾಡಿ ಸಭೆ ಕರೆದರೆ ನಾವು ಹಾಜರಾಗುತ್ತೇವೆ.
ಅರುಣ್ ಕ್ರಾಸ್ತ, ಉಪಾಧ್ಯಕ್ಷರು ಗ್ರಾ.ಪಂ. ವೇಣೂರು

ಈ ನಡೆಯಿಂದ ಅಭಿವೃದ್ಧಿ ಕುಂಠಿತ
ಬೆಳ್ತಂಗಡಿ ಇಒ ಅವರ ಅನುಮತಿ ಪಡೆದೇ ಸಾಮಾನ್ಯಸಭೆಗೆ ಎಲ್ಲಾ ಸದಸ್ಯರಿಗೆ ರಿಜಿಸ್ಟಿರ್ ಮೂಲಕ ನೋಟೀಸು ನೀಡಲಾಗಿತ್ತು. 17 ಮಂದಿ ಸದಸ್ಯರು ಸಭೆಗೆ ಗೈರು ಹಾಜರಾಗುವ ಮೂಲಕ ರೂ. 6೦ ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆಗೆ ತೊಡಕು ಉಂಟು ಮಾಡಿದಂತಾಗಿದೆ. ಇವರ ಈ ನಡೆಯಿಂದ ಗ್ರಾಮದ ಅಭಿವೃದ್ಧಿ ಕುಂಠಿತವಾಗಲಿದೆ.
ಮೋಹಿನಿ ವಿಶ್ವನಾಥ ಶೆಟ್ಟಿ, ಅಧ್ಯಕ್ಷರು ಗ್ರಾ.ಪಂ. ಅಧ್ಯಕ್ಷರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.