ಬೆಳ್ತಂಗಡಿ : ಲಾಕ್ ಡೌನ್ ನಿಂದ ದಿನನಿತ್ಯ ಆದಾಯವಿಲ್ಲದೆ ಸಂಕಷ್ಟ ಎದುರಿಸುತ್ತಿರುವ ಅಟೋ ಮತ್ತು ರಿಕ್ಷಾ ಚಾಲಕರಿಗೆ ರಾಜ್ಯ ಸರಕಾರ ಘೋಷಿಸಿರುವ ರೂ. 5 ಸಾವಿರ ಪರಿಹಾರವನ್ನು ಕೂಡಲೇ ನೀಡುವಂತೆ ಸೋಷಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಬೆಳ್ತಂಗಡಿ ತಾಲೂಕು ಸಮಿತಿ (ಎಸ್ ಡಿ ಟಿಯು) ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದೆ.
ಸರಕಾರ ಪರಿಹಾರ ಘೋಷಣೆ ಮಾಡಿ 18 ದಿನಗಳು ಕಳೆದರು ಪರಿಹಾರ ಧನ ಫಲಾನುಭವಿಗಳಿಗೆ ತಲುಪಲಿಲ್ಲ. ಮಾತ್ರವಲ್ಲ ಪರಿಹಾರವನ್ನು ಯಾವ ರೀತಿ ಪಡೆದುಕೊಳ್ಳಬಹುದೆಂಬುದರ ಬಗ್ಗೆ ಅಧಿಕೃತವಾಗಿ ಸ್ಪಷ್ಟಪಡಿಸದೆ ಸತಾಯಿಸುತ್ತಿರುವುದು ಗಮನಿಸಿದರೆ ಸರಕಾರ ಚಾಲಕರ ಜೀವನದಲ್ಲಿ ಚೆಲ್ಲಾಟವಾಡುವ ಸಂಶಯ ಮೂಡುವಂತಾಗಿದೆ. ಹಣಕ್ಕಾಗಿ ಅರ್ಜಿ ಸಲ್ಲಿಸಲು ಚಾಲಕರು ಮಧ್ಯವರ್ತಿಗಳ ಮೂಲಕ ಅಂಚೆ ಕಛೇರಿಗಳು ಮತ್ತು ಇತರ ಸರಕಾರಿ ಕಛೇರಿಗಳ ಮುಂದೆ ಸುಡುಬಿಸಿಲಿನಲ್ಲಿ ಸರದಿ ಸಾಲಿನಲ್ಲಿ ನಿಂತು ಕಷ್ಟ ಪಡುತ್ತಿರುವ ದೃಶ್ಯ ಮನಕಲಕುವಂತಿದೆ. ಚಾಲಕರ ಈ ಅಸಹಾಯಕತೆಯ ಪರಿಸ್ಥಿತಿಯನ್ನು ಮಧ್ಯವರ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಾ ಅರ್ಜಿ ನಮೂನೆ ತುಂಬಿಸುವ ಹೆಸರಿನಲ್ಲಿ ಹಣ ಪಡೆಯುತ್ತಿರುವ ಪ್ರಕರಣಗಳು ಭ್ರಷ್ಟಾಚಾರ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ. ಆದುದರಿಂದ ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿಕೊಂಡು ಪರಿಹಾರ ಹಣವನ್ನು ಶೀಘ್ರವಾಗಿ ಫಲಾನುಭಗಳಿಗೆ ನೀಡಬೇಕು ಎಂದು ಎಸ್ ಡಿಟಿಯು ಬೆಳ್ತಂಗಡಿ ಕ್ಷೇತ್ರದಿಂದ ತಹಸೀಲ್ದಾರರ ಮುಖಾಂತರ ರಾಜ್ಯ ಸರಕಾರಕ್ಕೆ ಒತ್ತಾಯಿಸಿದೆ.
ನಿಯೋಗದಲ್ಲಿ ಎಸ್ ಡಿಟಿಯು ಬೆಳ್ತಂಗಡಿ ತಾಲ್ಲೂಕು ಅಧ್ಯಕ್ಷ ರಾದ ಉಮರ್ ಫಾರೂಕ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶಮೀಮ್ ಯೂಸೂಫ್, ಉಪಾಧ್ಯಕ್ಷರಾದ ಅಜಯ್ ಲೋಬೋ ಮತ್ತು ಆಟೋ ಯೂನಿಯನ್ ಚಾಲಕ ಸಂಘದ ಅಧ್ಯಕ್ಷರಾದ ನವಾಜ್ ಜಿಕೆ,ಕಾರ್ಯದರ್ಶಿಗಳಾದ ಅಬ್ದುಲ್ ರಹಮಾನ್,ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕೋಶಾಧಿಕಾರಿಗಳಾದ ಫಜಲ್ ರಹ್ಮಾನ್ ಕೋಯಾ ಹಾಗೂ ಇನ್ನಿತರ ಸದಸ್ಯರುಗಳು ಉಪಸ್ಥಿತರಿದ್ದರು.