ಸಾಲ ಮರುಪಾವತಿಗೆ ಮತ್ತೆ 3 ತಿಂಗಳು ಕಾಲಾವಕಾಶ ವಿಸ್ತರಿಸಿದ ಆರ್ ಬಿಐ

Advt_NewsUnder_1
Advt_NewsUnder_1
  • ಬಿಕ್ಕಟ್ಟಿನ ನಡುವೆಯೂ ಕೃಷಿ ಕ್ಷೇತ್ರ ಆಶಾದಾಯಕ ಎಂದ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್

ನವದೆಹಲಿ: ಕೊರೊನಾದಿಂದಾಗಿ ಲಾಕ್ ಡೌನ್ ಘೋಷಣೆಯಾದ ಬಳಿಕ ಸಾಲದ ಕಂತುಗಳ (ಇಎಂಐ) ಕಟ್ಟುವುದನ್ನು ಈ ಮೊದಲು ಮೂರು ತಿಂಗಳು ಮುಂದೂಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಇದೀಗ ಮತ್ತೆ ಇಎಂಐ ಪಾವತಿಯನ್ನು ಜೂನ್ 1 ರಿಂದ ಆಗಸ್ಟ್ 31ರವರೆಗೆ ವಿಸ್ತರಿಸಿದೆ.

ಮೇ 22ರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಬಿ.ಐ ಗವರ್ನರ್ ಶಕ್ತಿಕಾಂತ ದಾಸ್ ಸಾರ್ವಜನಿಕರ ಹಾಗೂ ಸಣ್ಣ ಉದ್ಯಮಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮೂರು ತಿಂಗಳಾದ ಬಳಿಕ ಒಟ್ಟಾರೆ ಆರು ತಿಂಗಳು ಬಾಕಿ ಉಳಿದ ಕಂತುಗಳ ಮೇಲಿನ ಬಡ್ಡಿ ಸೇರಿಸಿ ಸಾಲ ಪಾವತಿ ಮಾಡಬೇಕಾಗುತ್ತದೆ.

ದೇಶದ ಆರ್ಥಿಕ ಸ್ಥಿತಿ ನಿರೀಕ್ಷೆ ಮೀರಿ ತೀರಾ ಸಂಕಷ್ಟಕ್ಕೆ ಸಿಲುಕಿದೆ ಎಂದ ಅವರು ಕೃಷಿ ಕ್ಷೇತ್ರ ಮಾತ್ರ ಆಶಾದಾಯಕವಾಗಿದೆ ಎಂದರು. ಕಚ್ಚಾ ತೈಲದ ಬೆಲೆ ಕಡಿಮೆಯಾಗಿರುವುದು ಆದಾಯ ಹರಿವಿನ ಮೇಲೆ ಪರಿಣಾಮ ಬೀರಿದೆ. ಆಹಾರ ಹಣದುಬ್ಬರ ಪ್ರಮಾಣವು ಏಪ್ರಿಲ್‍ನಲ್ಲಿ ಶೇ. 8.6ಕ್ಕೆ ಹೆಚ್ಚಿದೆ ಎಂದು ಆರ್.ಬಿ.ಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದರು.

ಲಾಕ್ ಡೌನ್ ನಂತರ ಖಾಸಗಿ ಭೋಗದ ಪ್ರಮಾಣ ಕಡಿಮೆ ಆಗಿದೆ. ಔದ್ಯಮಿಕ ಉತ್ಪಾದನೆಗೂ ಹೊಡೆತ ಬಿದ್ದಿದೆ. ಹೂಡಿಕೆ ಅವಕಾಶಕ್ಕೂ ಸಂಚಕಾರವಾಗಿದೆ. ಆಮದು ಕೂಡ ಶೇ. 58ರಷ್ಟು ತಗ್ಗಿದೆ ಎಂದು ಸಂಕಷ್ಟಗಳ ವಿವರ ನೀಡಿದರು.

ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಕಡಿತ:
ದೇಶದ ಹಣಕಾಸು ವ್ಯವಸ್ಥೆಗೆ ಪುಷ್ಟಿ ನೀಡಲು ವಿವಿಧ ಕ್ರಮಗಳನ್ನು ಘೋಷಿಸಿದ್ದಾರೆ. ರೆಪೋ ಮತ್ತು ರಿವರ್ಸ್ ರೆಪೋ ದರ ಇಳಿಕೆ ಮಾಡಿದ್ದಾರೆ. ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಕಡಿತ ಮಾಡಲಾಗಿದೆ. ಅಂದರೆ ಶೇ. 4.4ರಷ್ಟಿದ್ದ ರೆಪೋ ದರ ಶೇ. 4ಕ್ಕೆ ಇಳಿಕೆಯಾಗಿದೆ. ರಿವರ್ಸ್ ರೆಪೋ ದರವನ್ನೂ ಕೂಡ ಶೇ. 3.35ಕ್ಕೆ ಆರ್.ಬಿ.ಐ ಇಳಿಸಿದೆ.

ಏನಿದು ರೆಪೋ?, ರಿವರ್ಸ್ ರೆಪೋ?:
ರೆಪೋ ದರ ಎಂದರೆ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ರಿವರ್ಸ್ ರೆಪೋ ದರ ಎಂದರೆ ವಾಣಿಜ್ಯ ಬ್ಯಾಂಕುಗಳು ಆರ್.ಬಿ.ಐನಲ್ಲಿ ಠೇವಣಿ ಇಡುವ ಹಣಕ್ಕೆ ಆರ್.ಬಿ.ಐ ಕೊಡುವ ಬಡ್ಡಿಯ ದರವಾಗಿರುತ್ತದೆ.

ಕೋವಿಡ್ ಬಿಕ್ಕಟ್ಟಿನ ವೇಳೆ ಈ ಹಿಂದಿನ ಎರಡು ಪತ್ರಿಕಾಗೋಷ್ಠಿಯಲ್ಲಿ ಆರ್.ಬಿ.ಐ ಮುಖ್ಯಸ್ಥರು ದೇಶದ ಹಣಕಾಸು ವ್ಯವಸ್ಥೆಯಲ್ಲಿ ಹಣದ ಹರಿವು ಹೆಚ್ಚಿಸಲು ವಿವಿಧ ಕ್ರಮಗಳನ್ನು ಪ್ರಕಟಿಸಿದ್ದರು. 75 ಬೇಸಿಸ್ ಪಾಯಿಂಟ್‍ಗಳ ಇಳಿಕೆ, ಸಾಲದ ಕಂತು ಕಟ್ಟಲು 3 ತಿಂಗಳು ಮುಂದೂಡಿಕೆ ಇತ್ಯಾದಿ ಕ್ರಮಗಳು ಬಂದಿದ್ದವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.