ಬೆಂಗಳೂರು: ಲಾಕ್ ಡೌನ್ 4.0 ಮೇ ವಿಸ್ತರಣೆಯಾಗಿದ್ದು, ಇದರ ನಡುವೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಪ್ರಕಾರ ನಾಳೆಯಿಂದಲೇ ರಾಜ್ಯದೊಳಗೆ ಸಾರಿಗೆ ಸಂಚಾರ ಆರಂಭವಾಗಲಿದ್ದು ಇದರೊಂದಿಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆಯಬಹುದಾಗಿದೆ.
ಸೋಮವಾರ ಬೆಳಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, “ರಾಜ್ಯದಲ್ಲಿ ಮಾಲ್, ಚಿತ್ರಮಂದಿರ, ಜಿಮ್ ಹೊರತುಪಡಿಸಿ, ದಂತ ಚಿಕಿತ್ಸಾಲಯ , ಸೆಲೂನ್ , ಸೇರಿ ಉಳಿದೆಲ್ಲಾ ಅಂಗಡಿ – ಮುಂಗಟ್ಟುಗಳನ್ನು ತೆರೆಯಬಹುದಾಗಿದೆ. ಬೆಳಗ್ಗೆ 7 ರಿಂದ 9 ಗಂಟೆ ಹಾಗೂ ಸಂಜೆ 5 ರಿಂದ 7 ಗಂಟೆವರೆಗೆ ಉದ್ಯಾನವನಗಳನ್ನು ತೆರೆಯಬಹುದು. ಆದರೆ ಪ್ರತಿ ಭಾನುವಾರ ರಾಜ್ಯದಾದ್ಯಂತ ಕಂಪ್ಲೀಟ್ ಲಾಕ್ ಡೌನ್ ಜಾರಿಯಲ್ಲಿರಲಿದ್ದು, ಅಂದು ಎಲ್ಲ ವ್ಯವಹಾರಗಳನ್ನು ಬಂದ್ ಮಾಡಬೇಕಾಗಿದೆ. ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸದ್ಯ ಒಂದು ಬಸ್ನಲ್ಲಿ 30 ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿರಲಿದೆ”.
ರೆಡ್ ಮತ್ತು ಕಂಟೈನ್ಮೆಂಟ್ ಝೋನ್ಗಳಿಗೆ ಈ ಮಾರ್ಗಸೂಚಿ ಅನ್ವಯವಾಗುವುದಿಲ್ಲ. ಯಾವುದೇ ಧಾರ್ಮಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲವಾಗಿದ್ದು, ಮದುವೆ ಸಮಾರಂಭದ ವೇಳೆ ಕೇವಲ 50 ಮಂದಿ ಮಾತ್ರ ಭಾಗವಹಿಸಬಹುದಾಗಿದೆ ಎಂದು ಹೇಳಿದ್ದಾರೆ