ಬೆಳ್ತಂಗಡಿ: ಲಾಕ್ಡೌನ್ ಸಡಿಲಿಕೆಯಾಗಿದ್ದು ಬಟ್ಟೆ ಅಂಗಡಿಗಳನ್ನು ತೆರೆಯುವಂತೆ ಸರಕಾರ ಈಗಾಗಲೇ ಅನುಮತಿಸಿದೆ. ಆದರೆ ರಂಝಾನ್ ಹಬ್ಬದ ಸಂದರ್ಭ ಬಟ್ಟೆ ವ್ಯಾಪಾರ ಆರಂಭಿಸಿದಲ್ಲಿ ಇದರಿಂದ ಸಾಮಾಜಿಕ ಅಂತರ ಕಾಪಾಡಲು ಅನಾನುಕೂಲವಾಗಿ ಜನಜಂಗುಳಿಯಲ್ಲಿ ಕೊರೊನಾ ವ್ಯಾಪಿಸುವ ಸಾಧ್ಯತೆ ಹೆಚ್ಚು ಇರುವ ಕಾರಣಕ್ಕೆ ಮತ್ತು ಇದರಿಂದ ನಾಳೆ ಸಮಾಜದಲ್ಲಿ ಒಂದು ಸಮುದಾಯದ ಮೇಲೆ ಕೆಟ್ಟ ಅಪಪ್ರಚಾರ ನಡೆಯುವ ಸಾಮಾಜಿಕ ಜವಾಬ್ಧಾರಿಯಿಂದ ರಂಝಾನ್ ಮುಗಿಯುವವರೆಗೂ ಮುಸ್ಲಿಂ ವರ್ತಕರು ಬಟ್ಟೆ ಅಂಗಡಿಗಳನ್ನು ತೆರೆಯದೇ ಇರುವಂತೆ ತೀರ್ಮಾನಕ್ಕೆ ಬಂದಿದ್ದಾರೆ.
ತಾ| ಮುಸ್ಲಿಂ ಒಕ್ಕೂಟದ ಕರೆಯ ಮೇರೆಗೆ ತಾ| ಮುಸ್ಲಿಂ ಬಟ್ಟೆ ವ್ಯಾಪಾರ ಮಳಿಗೆ ಮಾಲಕರು ಸಮಾಲೋಚನೆ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ವರ್ತಕರು, ನಮಗೆ ಈಗಾಗಲೇ ವ್ಯವಹಾರದಲ್ಲಿ ನಷ್ಟಗಳುಂಟಾಗಿದೆ ಎಂಬ ಬಗ್ಗೆ ಸಾಧಕ ಬಾಧಕಗಳ ಬಗ್ಗೆ ತಮ್ಮ ನೋವು ಹಂಚಿಕೊಂಡರು. ಅದಾಗ್ಯೂ ಕೂಡ ಇದರ ಪರಿಣಾಮವಾಗಿ ಮುಂದಕ್ಕೆ ದೆಹಲಿ ಮಾದರಿಯಲ್ಲಿ ಇಲ್ಲೂ ಕೂಡ ಈ ರೋಗದ ಹರಡುವಿಕೆಯಲ್ಲಿ ಮುಸ್ಲಿಂ ಸಮಾಜದ ಮೇಲೆ ಗೂಬೆಕೂರಿಸುವ ಸಾಧ್ಯತೆ ಇರುವುದರಿಂದ, ಹಾಗೂ ಈಗಾಗಲೇ ಖಾಝಿಗಳು ಈ ಬಾರಿಯ ರಂಝಾನ್ ಆಚರಣೆ ಹೊಸ ಬಟ್ಟೆಯಿಲ್ಲದೆ ಅತ್ಯಂತ ಸರಳವಾಗಿ ಆಚರಿಸುವಂತೆ ಸೂಚನೆ ನೀಡಿರುವುದನ್ನು ಪಾಲಿಸಿ, ಹಬ್ಬ ಮುಗಿಯುವವರೆಗೂ ವ್ಯಾಪಾರ ಸ್ಥಗಿತಗೊಳಿಸುವಂತೆ ನಿರ್ಧಾರಕ್ಕೆ ಬರಲಾಯಿತು. ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ ನಝೀರ್ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.