ಕೊಲೆ ಕೇಸಿನಿಂದ ಕೈ ಬಿಡುವ ಆಮಿಷ; ರೌಡಿಶೀಟರ್ ಬಂಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊಲೆ ಪ್ರಕರಣದಲ್ಲಿರುವ ಆರೋಪಿಗಳ ಹೆಸರುಗಳನ್ನು ಕೈ ಬಿಡುವ ಆಮಿಷ ತೋರಿಸಿ ವಂಚಿಸುತ್ತಿದ್ದ ರೌಡಿಶೀಟರ್ ಓರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ‘ಕನಕ’ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ನ ಅಡ್ಮಿನ್ ಆಗಿರುವ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕುಂಡಡ್ಕ ನಿವಾಸಿ ರೌಡಿಶೀಟರ್ ಅಬ್ದುಲ್ ರಶೀದ್ ಕುಂಡಡ್ಕ ಬಂಧಿತ ಆರೋಪಿ. ಈತ ಪೊಲೀಸ್ ಅಧಿಕಾರಿಗಳು, ಮಾಧ್ಯಮದವರ ಹಾಗೂ ರಾಜಕೀಯ ವ್ಯಕ್ತಿಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ವಸೂಲಿ ಮಾಡುತ್ತಿದ್ದ ಎಂಬ ಆರೋಪದಡಿ ಆತನನ್ನು ಬಂಧಿಸಲಾಗಿದೆ.

ಕುಖ್ಯಾತ ರೌಡಿ ಹಾಗೂ ಜ್ಯುವೆಲ್ಲರಿ ದರೋಡೆ ಪ್ರಕರಣವೊಂದರ ಪ್ರಮುಖ ಆರೋಪಿ ಮುತ್ತಾಸಿಮ್ ತಸ್ಲೀಂ ಎಂಬಾತನ ಕೊಲೆ ಪ್ರಕರಣದಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬನ ಹೆಸರನ್ನು ಪ್ರಕರಣದಿಂದ ತೆಗೆಸುತ್ತೇನೆ, ತನಗೆ ಪೊಲೀಸ್ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿ 20 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದನು. ಅಲ್ಲದೆ 4 ಲಕ್ಷ ರೂ. ಸುಲಿಗೆ ಪಡೆದಿರುವುದಾಗಿ ಮಂಗಳೂರು ನಗರದ ಕದ್ರಿ ಪೊಲೀಸ್ ಠಾಣೆಯಲ್ಲಿ ರಶೀದ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರಶೀದ್‌ನನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ(ಕದ್ರಿ) ಪೊಲೀಸ್ ಠಾಣೆಗೆ ಹಸ್ತಾಂತರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪತ್ರಕರ್ತನ‌ ಪಾತ್ರವಿಲ್ಲ: ಅಬ್ದುಲ್ ರಶೀದ್ ಕುಂಡಡ್ಕ ಎಂಬಾತನ ಬಂಧನ ಆಗುತ್ತಿದ್ದಂತೆ ಕ್ರಿಮಿನಲ್ ಹಿನ್ನೆಲೆಯುಳ್ಳ ಕೆಲವು ದುಷ್ಕರ್ಮಿಗಳು ಮಂಗಳೂರಿನ ಪತ್ರಕರ್ತ ರಂಜಿತ್ ಮಡಂತ್ಯಾರ್ ಅವರ ಹೆಸರನ್ನು ಜೋಡಿಸಿ ಸುಳ್ಳು ಸುದ್ದಿ ಹರಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಸಿಬಿ ಪೊಲೀಸರು, ರಂಜಿತ್ ಮಡಂತ್ಯಾರ್ ಅವರ ಹೆಸರನ್ನು ದುರುದ್ದೇಶಪೂರ್ವಕ ಈ ಪ್ರಕರಣದಲ್ಲಿ ಎಳೆದು ತರಲಾಗಿದೆ. ರೌಡಿಶೀಟರ್ ರಶೀದ್ ಎಂಬಾತ ಪ್ರಭಾವಿ ಪೊಲೀಸ್ ಅಧಿಕಾರಿಗಳ, ಹಾಗೂ ಪ್ರಭಾವಿ ಪತ್ರಕರ್ತರ ಹೆಸರು ಹೇಳಿಕೊಂಡು ಹಣ ಪಡೆಯುತ್ತಿದ್ದ. ಆದರೆ ಇದರಲ್ಲಿ ರಂಜಿತ್ ಮಡಂತ್ಯಾರ್ ಅವರ ಪಾತ್ರವಿಲ್ಲ ಮತ್ತು ಈ ಪ್ರಕರಣಕ್ಕೂ ರಂಜಿತ್ ಮಡಂತ್ಯಾರ್ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಸಿಸಿಬಿ ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಿದ ಕೀಡಿಗೇಡಿಗಳ ಸ್ಕ್ರೀನ್ ಶಾಟ್ ಸಹಿತ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.
ಆರೋಪಿ ‘ಕನಕ’ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ನ ಅಡ್ಮಿನ್ ಆಗಿದ್ದು, ಈ ಗ್ರೂಪ್ ನಲ್ಲಿ ಸರಕಾರಿ ಅಧಿಕಾರಿಗಳನ್ನು, ರಾಜಕೀಯ ವ್ಯಕ್ತಿಗಳನ್ನು, ಮಾಧ್ಯಮದವರನ್ನು ಸೇರಿಸಿಕೊಂಡಿದ್ದಾನೆ. ನಂತರ ತನ್ನ ವಾಟ್ಸ್‌ಆ್ಯಪ್ ಗ್ರೂಪ್ ಹೆಸರು ನಮೂದಿಸಿ ಕರೆ ಮಾಡಿ ತನ್ನ ಪರಿಚಯ ಮಾಡಿಕೊಂಡು, ಆ ಪರಿಚಯವನ್ನು ದುರುಪಯೋಗಪಡಿಸಿಕೊಂಡು ಹಣ ಸುಲಿಗೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅಬ್ದುಲ್ ರಶೀದ್ ವಿರುದ್ದ ಈ ಹಿಂದೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುತ್ತದೆ. ಅಲ್ಲದೇ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಕೂಡಾ ಇರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕ್, ಪಿಎಸ್ಸೈ ಎಚ್.ಡಿ. ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.