ವೇಣೂರು ಪ್ರಾ.ಆ. ಕೇಂದ್ರ: ಲಸಿಕೆ ಇದ್ದರೂ ನೀಡದ ಸಿಬ್ಬಂದಿ!

ವೇಣೂರು: ಜನನಿ ಸುರಕ್ಷಾ ಯೋಜನೆಯಡಿ ಮಗುವಿಗೆ ನೀಡಲ್ಪಡುವ ಲಸಿಕೆಯ ಶೇಖರಣೆ ಇದ್ದರೂ ಮಗುವಿಗೆ ನೀಡದೇ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾಯಿಸಿ ಅಮಾನವೀಯತೆ ಮೆರೆದ ವಿದ್ಯಾಮಾನ ವೇಣೂರು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಜರಗಿದೆ.

ಸರಕಾರಿ ಯೋಜನೆಯಡಿ ಮಗುವಿಗೆ ವಿವಿಧ ರೋಗಗಳ ತಡೆಗೆ ನಿಗಧಿತ ಸಮಯಗಳಲ್ಲಿ ಲಸಿಕೆಗಳನ್ನು ನೀಡಲಾಗುತ್ತಿದೆ. ಅದರಂತೆ ಗುರುವಾರ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಡಾರ ತಡೆಗೆ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ತಿಳಿಸಲಾಗಿತ್ತು. ಹಲವು ಮಂದಿಗೆ ಲಸಿಕೆಯನ್ನೂ ನೀಡಲಾಗಿದೆ. ಆದರೆ ಬೆಳಗ್ಗೆಯಿಂದ ಮಗುವನ್ನು ಹಿಡಿದು ಕಾದು ಕುಳಿತ ಒಂದೆರಡು ತಾಯಂದಿರಿಗೆ ಮಧ್ಯಾಹ್ನ ಆಗುವಷ್ಟರಲ್ಲಿ ಲಸಿಕೆ ನೀಡುವುದಿಲ್ಲ. ಮುಂದಿನ ವಾರದಲ್ಲಿ ಬನ್ನಿ ಮತ್ತು ಯಾರಲ್ಲೂ ತಿಳಿಸಬೇಡಿ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದು, ತಾಯಂದಿರು ಸಂಕಟ ಅನುಭವಿಸಿದ್ದಾರೆ. ಬಸ್ ಇಲ್ಲದೆ ನಾವು ಮೂರ‍್ನಾಲ್ಕು ಕಿ.ಮೀ. ದೂರದಿಂದ ರಿಕ್ಷಾವನ್ನು ಬಾಡಿಗೆಗೆ ಮಾಡಿಕೊಂಡು ಬಂದಿದ್ದೇವೆ. ನಮ್ಮನ್ನು ಇಷ್ಟು ಹೊತ್ತು ಕಾಯಿಸಿ ಲಸಿಕೆ ಇದ್ದರೂ ನೀಡಲಾಗುವುದಿಲ್ಲ ಎಂದರೆ ಹೇಗೆ? ದೇಶದೆಲ್ಲೆಡೆ ಕೊರೊನಾ ಭೀತಿ ಇದ್ದು, ಆಸ್ಪತ್ರೆಗಳಿಗೆ ಭೇಟಿ ನೀಡಬೇಡಿ ಎಂದು ಆರೋಗ್ಯ ಇಲಾಖೆಯೇ ಹೇಳುತ್ತಿದ್ದು, ಆದರೆ ನಮ್ಮನ್ನು ಸತಾಯಿಸಿ ಪದೇ ಪದೇ ಆಸ್ಪತ್ರೆಗೆ ಬರುವಂತೆ ಮಾಡುವುದು ಯಾಕೆ ಎಂದು ಫಲಾನುಭವಿ ತಾಯಂದಿರು ಪ್ರಶ್ನಿಸಿದ್ದಾರೆ.

ಆರೋಗ್ಯ ಸಿಬ್ಬಂದಿ ಸ್ಪಷ್ಟನೆ
ದೇಶದಲ್ಲಿ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಲಸಿಕೆ ಹಾಗೂ ಔಷಧಿಗಳ ಪೂರೈಕೆ ಆಗುತ್ತಿಲ್ಲ. ಸಂಗ್ರಹ ಇದ್ದ ಕಾರಣ ಮಕ್ಕಳಿಗೆ ನೀಡುವ ದಡಾರ ರೋಗ ನಿರೋಧಕ ಲಸಿಕೆಯನ್ನು ಗುರುವಾರ ಆಸ್ಪತ್ರೆಯಲ್ಲಿ ನೀಡಿದ್ದೇವೆ. ಅದು ಒಂದು ಪ್ಯಾಕೆಟ್‌ನಲ್ಲಿ ೧೦ ಲಸಿಕೆಗಳಿರುತ್ತದೆ. ಅದರಲ್ಲಿ ಒಂದೆರಡು ಲಸಿಕೆಯನ್ನು ತೆಗೆದರೆ ಉಳಿದವು ನಿರುಪಯುಕ್ತ ಆಗುತ್ತದೆ. ಈಗಾಗಿ ಒಬ್ಬರು ತಾಯಂದಿರನ್ನು ಮುಂದಿನ ವಾರವಂತೆ ತಿಳಿಸಿ ವಾಪಾಸು ಕಳುಹಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಇವರ ಈ ಅವೈಜ್ಞಾನಿಕ ನಿರ್ವಹಣೆಯಿಂದ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಆಸ್ಪತ್ರೆಯಲ್ಲಿ ಮಗುವನ್ನು ಹಿಡಿದುಕೊಂಡು ಕಾದು ಕುಳಿತ ತಾಯಂದಿರು ಸಂಕಷ್ಟ ಅನುಭವಿಸುವಂತಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.