ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪಿಎಂಕೇರ್ ನಿಧಿಗೆ ರೂ. 5 ಕೋಟಿ ದೇಣಿಗೆ ಸ್ವಸಹಾಯ ಸಂಘಗಳ ಸದಸ್ಯರಿಗೆ ‘ಕೋವಿಡ್ ಪರಿಹಾರ ತುರ್ತುಸಾಲ’

ಧರ್ಮಸ್ಥಳ: ಕೋವಿಡ್-19 ಚಿಕಿತ್ಸೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ ಪಿಎಂಕೇರ್ ನಿಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು 5 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ತಿಳಿಸಿದ್ದಾರೆ.

ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಎ.17 ರಂದು ಕರೆದಿದ್ದ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸ್ವಸಹಾಯ ಸಂಘಗಳ ಸದಸ್ಯರು ಶಿಸ್ತು ಕಾಪಾಡಿ, ಸರಕಾರವು ಸೂಚಿಸಿರುವ ಸಾಮಾಜಿಕ ಅಂತರ ಕಾಪಾಡಿಕೊಂಡು ಮನೆಯಲ್ಲಿನ ಹಿರಿಯರ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಇರಬೇಕು ಎಂದು ಹೆಗ್ಗಡೆಯವರು ಸೂಚಿಸಿದ್ದಾರೆ.

ಸ್ವಸಹಾಯ ಸಂಘದ ಸದಸ್ಯರಿಗೆ ತುರ್ತು ಸಾಲ :
ಕೊರೊನಾ ವೈರಸ್‍ನ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಿಸಿರುವುದರಿಂದ ಆರ್ಥಿಕ ಆಘಾತ ನಿಯಂತ್ರಿಸಲು ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ‘ಕೋವಿಡ್ ಪರಿಹಾರ ತುರ್ತುಸಾಲ’ ಎಂಬ ಹೆಸರಿನಲ್ಲಿ ಯೋಜನೆ ಪ್ರಾರಂಭಿಸಿದ್ದು, ಸಂಘದ ಸದಸ್ಯರಿಗೆ ಗರಿಷ್ಠ ರೂ.25 ಸಾವಿರದವರೆಗೆ ಈ ಮೊತ್ತ ಪಡೆಯಬಹುದಾಗಿದೆ. ಸಂಘಗಳಿಂದ ಈ ಹಿಂದೆ ಸಾಲ ಪಡಕೊಂಡವರು ಈ ವಿಶೇಷ ನೆರವು ಪಡೆಯಬಹುದು.

ಯೋಜನೆಯಿಂದ ಸಹಾಯ :
ರಾಜ್ಯಾದ್ಯಂತ ಘೋಷಿಸಿರುವ ಲಾಕ್‍ಡೌನ್‍ನಿಂದ ತೊಂದರೆಯಾದ ಕುಟುಂಬಗಳಿಗೆ ಅಗತ್ಯವಿರುವ ನೆರವಿನ ಹಸ್ತವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳು ನೀಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ, ಉಡುಪಿ, ಬೆಂಗಳೂರಿನಲ್ಲಿನ ಅಗತ್ಯವಿರುವ ಹಲವೆಡೆಗಳಲ್ಲಿ ಆಹಾರ ಸಾಮಾಗ್ರಿಗಳನ್ನು ಯೋಜನೆಯು ಒದಗಿಸುತ್ತಿದೆ. ಇತರರಿಗೆ ಸಹಾಯದ ಅಗತ್ಯವಿದ್ದಲ್ಲಿ ಸ್ಥಳೀಯ ಸೇವಾಪ್ರತಿನಿಧಿಗಳ ಸಂಪರ್ಕಿಸಬೇಕೆಂದು ಕಾರ್ಯನಿರ್ವಾಹಕ ನಿರ್ದೇಶಕರು ಕೋರಿದ್ದಾರೆ.
ಸ್ವ ಉದ್ಯೋಗಕ್ಕೆ ನೆರವು :
ನಗರದಿಂದ ಗ್ರಾಮಗಳಿಗೆ ಹಿಂದಿರುಗಿರುವ ಕುಶಲಕರ್ಮಿಗಳು ಆದಾಯ ಗಳಿಸಲು ಸ್ವ ಉದ್ಯೋಗಕ್ಕೆ ಯೋಜನೆಯು ಸಹಾಯ ಮಾಡಲಿದೆ. ಇದಕ್ಕಾಗಿ ತುರ್ತು ಯಂತ್ರ, ಬಂಡವಾಳ, ಮಾರುಕಟ್ಟೆ ಒದಗಿಸುವ ವ್ಯವಸ್ಥೆ ಪ್ರಾರಂಭಿಸಿದೆ.ಅಗತ್ಯವಿರುವ ಫಲಾನುಭವಿಗಳು ಯೋಜನೆಯ ಸ್ವಸಹಾಯ ಸಂಘದ ಸದಸ್ಯರಾಗಬೇಕೆಂಬ ನಿಯಮವಿಲ್ಲ. ಸ್ಥಳೀಯ ಸೇವಾ ಪ್ರತಿನಿಧಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.