ಕಲ್ಲೇರಿ ಜನತಾ ಕಾಲೋನಿ: ಶಾಸಕ ಹರೀಶ್ ಪೂಂಜ ಭೇಟಿ

ಬೆಳ್ತಂಗಡಿ: ತಣ್ಣೀರುಪಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಾಯ ಗ್ರಾಮದ ಕಲ್ಲೇರಿ ಜನತಾ ಕಾಲೋನಿಗೆ ಶುಕ್ರವಾರ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ ಆಹಾರ ಸಾಮಾಗ್ರಿ ಕಿಟ್ ವಿತರಣೆ, ಕೊಳವೆ ಬಾವಿ ಕೊರೆಯಲು ಸೂಚನೆ ಸಹಿತ ಕೆಲವೊಂದು ಅಗತ್ಯ ಸೌಕರ್ಯವನ್ನು ಒದಗಿಸಿಕೊಟ್ಟರು.


ಇಲ್ಲಿನ ಯುವಕನೊರ್ವನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಇಲ್ಲಿನ ೮೮ ಮನೆಗಳು ಹೋಂ ಕ್ವಾರೆಂಟೆನ್ಲ್ಲಿದೆ. ಈತನ ಸಂಪರ್ಕದಲ್ಲಿದ್ದ ಒಂದೇ ಮನೆಯ ಒಂಬತ್ತು ಜನ ಸೇರಿದಂತೆ ಒಟ್ಟು ೨೦ ಮಂದಿಗೆ ಹೋಂ ಕ್ವಾರೆಂಟೆನ್ ವಿಧಿಸಲಾಗಿದೆ.
ಆಹಾರ ಸಾಮಾಗ್ರಿ ಸಾಗಾಟ, ಮೂರು ಕಡೆ ಗೇಟುಗಳಲ್ಲಿ ಕರ್ತವ್ಯ ನಿರ್ವಹಿಸಲು, ಔಷಧಿ ಹಾಗೂ ಅಂಬುಲೈನ್ಸ್‌ನಲ್ಲಿ, ಹೆಲ್ತ್ ಡೆಸ್ಕ್‌ನಲ್ಲಿ, ೮೮ ಮನೆಗಳಿಗೆ ಆಹಾರ ಸಾಮಾಗ್ರಿ ಕೊಡಲು ಸೇರಿದಂತೆ ಇಲ್ಲಿನ ಗ್ರಾಪಂನ ಮೇಲುಸ್ತುವಾರಿ ಹೈ ರಿಸ್ಕ್ ಸ್ವಯಂಸೇವಕರಾಗಿ ೨೨ ಮಂದಿ ಈ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.


ಭೇಟಿ ನೀಡಿದ ಸಂದರ್ಭ ಇಲ್ಲಿನ ಸ್ಥಳೀಯಾಡಳಿತ, ಸ್ವಯಂ ಸೇವಕರ ಜತೆ ಚರ್ಚಿಸಿ, ಅಗತ್ಯತೆ ಸಹಕಾರ ನೀಡುವುದುದಾಗಿ ಭರವಸೆ ನೀಡಿದರು. ಶಾಸಕ ಹರೀಶ್ ಪೂಂಜ ಅವರ ಮನವಿಗೆ ಸ್ಪಂದಿಸಿದ ಬಂಜಾರ ಗ್ರೂಫ್‌ನ ಪ್ರಕಾಶ್ ಶೆಟ್ಟಿ ಅವರು ತಣ್ಣೀರುಪಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೇರಿ ಜನತಾ ಕಾಲೋನಿಗೆ ಒಂದು ಮನೆಗೆ ಹತ್ತು ಕೆ.ಜಿ. ಅಕ್ಕಿ ಹಾಗೂ ದಿನಸಿ ಸಾಮಾಗ್ರಿಗಳ ೧೦೦ ಕಿಟ್‌ಗಳನ್ನು ನೀಡಿದ್ದಾರೆ.


ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯವಿಕ್ರಮ, ಪಿಡಿಒ ಪೂರ್ಣಿಮಾ, ಸದಸ್ಯ ಆದಂ, ಅಯೂಬ್, ತಾಜುದ್ದೀನ್, ನವೀನ್ ಕುಮಾರ್, ಬಾರ್ಯ ಸಿಎ ಬ್ಯಾಂಕಿನ ಅಧ್ಯಕ್ಷ ಸುಬ್ರಹ್ಮಣ್ಯ ಗೌಡ ಕೆ.ಆರ್., ಮಹೇಶ್ ಜೆಂತ್ಯಾರು, ಸ್ವಯಂ ಸೇವಕರ ತಂಡದ ಪ್ರಮುಖರಾದ ನಿಝಾರ್, ಅಶ್ರಫ್, ನಮಾಜ್ ಮತ್ತು ತಂಡದ ಸ್ವಯಂ ಸೇವಕರು ಇದ್ದರು.

ಇಲ್ಲಿನ ೮೮ ಮನೆಗಳ ಜನರ ಅಗತ್ಯ ಸೌಕರ್ಯಕ್ಕಾಗಿ ಶಾಸಕರ ನೇತೃತ್ವದಲ್ಲಿ ಒಂದು ಆಂಬುಲೆನ್ಸ್ ನಿಯೋಜಿಸಲಾಗಿದ್ದು, ಅದಕ್ಕೆ ಮುಂಡಗವಾಗಿ ೫೦ ಸಾವಿರ ರೂ. ಅಡ್ವಾನ್ಸ್ ಹಣ, ಅಗತ್ಯ ಔಷಧಿಗಾಗಿ ಪಂಚಾಯಿತಿಗೆ ೫೦ ಸಾವಿರ ರೂ. ಹಾಗೂ ಕಳೆದ ಮಾ.೨೭ ರಿಂದ ಲಾಕ್ ಡೌನ್ ಆದ ಪ್ರದೇಶದಲ್ಲಿ ಸ್ವಯಂ ಪ್ರೇರಣೆಯಿಂದ ದುಡಿಯುತ್ತಿರುವ ಸ್ವಯಂಸೇವಕರ ಊಟದ ವ್ಯವಸ್ತೆಗೆ ೨೫ ಸಾವಿರ ರೂ. ವನ್ನು ಸೇರಿ ೧.೨೫ ಲಕ್ಷ ರೂ.ವನ್ನು ನೀಡಿದ್ದು, ಜನತಾ ಕಾಲೋನಿಗೆ ನೀರಿನ ಸಮಸ್ಯೆಗೆ ಸ್ಪಂದಿಸಿ ಕೊಳವೆ ಬಾವಿ ತೆಗೆಯಲು ಶಾಸಕರು ಸೂಚನೆ ನೀಡಿದ್ದಾರೆ.


೧೦೦ ಕಿಟ್‌ಗಳ ಜತೆಗೆ ಪಂಚಾಯಿತಿ ವತಿಯಿಂದ ತರಕಾರಿ ಹಂಚಿಕೆ. ಪಂಚಾಯಿತಿಯಲ್ಲಿ ಅಗತ್ಯ ಸಂದರ್ಭದಲ್ಲಿ ಬಡವರಿಗೆ ಹಂಚಿಕೆ ೬ ಕ್ವಿಂಟಾಲ್ ಅಕ್ಕಿ ದಾಸ್ತಾನು ಇರಿಸಲಾಗಿದೆ. ಗುರುವಾರ ೧೦೦ ಬಟ್ಟೆಯ ಮಾಸ್ಕ್, ಸ್ಯಾನಿಟರಿ, ಕೈ ಗ್ಲೌಸ್ ೪೦ ಆರೋಗ್ಯ ಇಲಾಖೆಯಿಂದ ನೀಡಲಾಗಿದೆ ಎಂದು ತಣ್ಣೀರುಪಂತ ಗ್ರಾ.ಪಂ. ಪಿಡಿಒ ಪೂರ್ಣಿಮಾ ತಿಳಿಸಿದರು.

ಇಲ್ಲಿನ ಜನತಾ ಕಾಲೋನಿಗೆ ಶಾಸಕರು ಮೊನ್ನೆ ಭೇಟಿ ನೀಡಿದ ಸಂದರ್ಭ ಕೊಟ್ಟಂತಹ ಭರವಸೆಯನ್ನು ಈಡೇರಿಸಿದ್ದಾರೆ. ಇನ್ನು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಅವರಿಗೆ ಗ್ರಾ.ಪಂ.ನಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಣ್ಣೀರುಪಂತ ಗ್ರಾಪಂ ಅಧ್ಯಕ್ಷ ಜಯವಿಕ್ರಮ ತಿಳಿಸಿದರು.

ಇಲ್ಲಿನ ಒರ್ವ ಯುವಕನಿಗೆ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಇಲ್ಲಿರುವ ೮೮ ಮನೆಗಳ ಹಿತರಕ್ಷಣೆಯನ್ನು ಇಲ್ಲಿನ ಸ್ವಯಂಸೇವಕರು ತಾಲೂಕು ಆಡಳಿತ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದ ಜತೆ ಸೇರಿಕೊಂಡು ಮಾಡಿದ್ದಾರೆ. ಇನ್ನು ೮ ದಿನಗಳಲ್ಲಿ ಯಾವುದೇ ಪಾಸಿಟಿವ್ ಬಾರದೇ ಹೋದಲ್ಲಿ ಬೆಳ್ತಂಗಡಿ ಜನತೆ ನಿಶ್ಚಿಂತೆಯಿಂದ ಜೀವನ ಮಾಡಬಹುದು.
ಬಂಜಾರ ಗ್ರೂಪ್‌ನ ಪ್ರಕಾಶ್ ಶೆಟ್ಟಿಯವರು ೧೦೦ ಆಹಾರ ಕಿಟ್ ನೀಡಿದ್ದನ್ನು ಇಲ್ಲಿನ ಜನರಿಗೆ ನೀಡಿದ್ದೇವೆ. ಸ್ಥಳೀಯಾಡಳಿತ ಇಲ್ಲಿ ನೀರಿನ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ತಕ್ಷಣ ಬೋರ್‌ವೆಲ್ ಕೊರೆಯುವ ಕರೆ ಮಾಡಿದ್ದೇನೆ. ಇಂದೇ ಕೊಳವೆ ಬಾವಿ ತೆಗೆಯಲಾಗುವುದು. ಜನರ ಹಿತರಕ್ಷಣೆ ದೃಷ್ಟಿಯಿಂದ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಇಲ್ಲಿನ ಸ್ಥಳೀಯಾಡಳಿತ, ಸ್ವಯಂಸೇವಕರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.