HomePage_Banner_
HomePage_Banner_
HomePage_Banner_

ಕೊರೊನಾ ಎಫೆಕ್ಟ್: ಜರ್ಮನಿಯಲ್ಲೇ ಉಳಿದ ಬಿಷಪ್ ಲಾರೆನ್ಸ್ ಮುಕ್ಕುಯಿ ಕ್ಲೆರೇಶನ್ ಫಾದರ್‍ಸ್ ಪ್ರೊವೆಂನ್ಶ್ಯಲ್ ಹೌಸ್‌ನಲ್ಲಿ ಸುರಕ್ಷಿತ

* ಫೆ. 25 ರಂದು ತೆರಳಿದ್ದ ಬಿಷಪ್
* ಮಾ. 28 ರಂದು ಊರಿಗೆ ಮರಳಬೇಕಾಗಿತ್ತು
* ಕಳೆಂಜ, ಧರ್ಮಸ್ಥಳ ಚರ್ಚ್‌ನ ಧರ್ಮಗುರುಗಳು ಬಿಷಪ್ ಜೊತೆ ಬಾಕಿ.

ಬೆಳ್ತಂಗಡಿ: ಧಾರ್ಮಿಕ ಕೇಂದ್ರಗಳ ಸಂದರ್ಶನ ಮತ್ತು ಪರಮೋಚ್ಛ ಗುರುಗಳ ಬೇಟಿ ಇತ್ಯಾಧಿ ಕಾರ್ಯಕ್ರಮಗಳಿಗಾಗಿ ಜರ್ಮನಿ, ಇಟಲಿ ಮತ್ತು ರೋಮ್ ದೇಶಕ್ಕೆ ತೆರಳಿದ್ದ ಬೆಳ್ತಂಗಡಿ ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಬಿಪಷ್ ಲಾರೆನ್ಸ್ ಮುಕ್ಕುಯಿ ಅವರನ್ನೊಳಗೊಂಡ ಧರ್ಮಸ್ಥಳ ಮತ್ತು ಕಳೆಂಜದ ಧರ್ಮಗುರುಗಳ ತಂಡ ಇದೀಗ ಕೊರೊನಾ ಹಿನ್ನೆಲೆಯಲ್ಲಿ ಭಾರತಕ್ಕೆ ಮರಳಲಾಗದೆ ಜರ್ಮನಿಯಲ್ಲಿ ಬಾಕಿಯಾಗುವಂತಾಗಿದೆ.

ವರ್ಷಕ್ಕೆ ಕನಿಷ್ಠ ಎರಡು ದೇಶಗಳಿಗೆ ಅಧ್ಯಯನ ಪ್ರವಾಸಗಳನ್ನು ಕೈಗೊಳ್ಳುತ್ತಿರುವ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರು ಕೊರೊನಾ ಕಾಯಿಲೆ ಹರಡುವ ಮುನ್ನವೇ, ಅಂದರೆ ಫೆ. 25 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರೋಮ್‌ಗೆ ತೆರಳಿದ್ದರು. ಅಲ್ಲಿ ಕ್ರೈಸ್ತ ಧರ್ಮದ ಪ್ರಮೋಚ್ಛ ಗುರುಗಳಾದ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದರು. ಆ ಬಳಿಕ ಇಟಲಿ ಪ್ರವಾಸ ಕೈಗೊಂಡಿದ್ದರು. ಇಷ್ಟರಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬಿ ಅನೇಕ ಮಂದಿಯನ್ನು ಬಲಿಪಡೆದ ಘಟನೆ ಇಟಲಿ, ಜರ್ಮನ್, ಭಾರತ ಸಹಿತ ಇತರ ರಾಷ್ಟ್ರಗಳಿಂದ ವರದಿಯಾಯಿತು. ಆ ಹಿನ್ನೆಲೆಯಲ್ಲಿ ಜರ್ಮನಿಯ ಕ್ಲೆರೇಶನ್ ಫಾದರ್‍ಸ್ ಪ್ರೊವೆಂನ್ಶ್ಯಲ್ ಹೌಸ್‌ನಲ್ಲಿ ಸುರಕ್ಷಿತವಾಗಿದ್ದಾರೆ.

ಮಾ. 28 ರಂದು ಭಾರತಕ್ಕೆ ಬರಬೇಕಾಗಿತ್ತು:
ಬಿಷಪ್ ಅವರ ಜೊತೆ ಧರ್ಮಸ್ಥಳ ಚರ್ಚ್‌ನ ಧರ್ಮಗುರುಗಳಾದ ಫಾ. ಜೋನ್ ಮುಳಿಯೇಕ್ಕಲ್ ಮತ್ತು ಕಳೆಂಜ ಚರ್ಚ್‌ನ ಫಾ. ಜೇಮ್ಸ್ ಪಟ್ಟೇರಿಯಲ್ ಇವರೂ ತೆರಳಿದ್ದು, ಉದ್ದೇಶಿದ ಯಾತ್ರ ಪ್ರಕಾರ ಅವರುಗಳು ಮಾ. 28 ರಂದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮತ್ತೆ ಸ್ವದೇಶಕ್ಕೆ ಮರಳಬೇಕಾಗಿತ್ತು. ಆದರೆ ಪರಿಸ್ಥಿತಿ ತೀರಾ ಕೈ ಮೀರಿದ್ದರಿಂದ ವಿಮಾನ ಯಾನಗಳು ಸ್ಥಗಿತಗೊಂಡದ್ದೂ ಮಾತ್ರವಲ್ಲದೆ, ಕರ್ನಾಟಕ ರಾಜ್ಯದಲ್ಲಿ ಲಾಕ್ ಡೌನ್ ಕೂಡ ಘೋಷಣೆಯಾಗಿರುವುದರಿಂದ ಅವರ ಯಾತ್ರೆ ಕೂಡ ರದ್ದಾಗಿದೆ. ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಬಿಷಪ್ ಅವರ ಅನುಪಸ್ಥಿತಿಯಲ್ಲಿ ಕೊಡಗು-ದ.ಕ ಜಿಲ್ಲೆ ಸೇರಿದಂತೆ ಅವರ ಪ್ರಾಂತ್ಯ ವ್ಯಾಪ್ತಿಗೆ ಬರುವ 55 ಚರ್ಚ್‌ಗಳ ಬಗೆಗಿನ ಅವರ ಕರ್ತವ್ಯಗಳನ್ನು ವಿಕಾರ್ ಜನರಲ್ ರೆ. ಫಾ. ಜೋಸ್ ವಲಿಯಪರಂಬಿಲ್ ಅವರು ನಿರ್ವಹಿಸುತ್ತಿದ್ದಾರೆ.

ಸರಕಾರದ ನಿಯಮಾವಳಿ ಎಲ್ಲರೂ ಪಾಲಿಸಿ: ಬಿಷಪ್
ನಾನು ಅಧ್ಯಯನಾರ್ಥ ವಿದೇಶ ಪ್ರವಾಸದಲ್ಲಿದ್ದು, ಅನಿವಾರ್ಯ ಕಾರಣದಿಂದ ಜರ್ಮನಿಯಲ್ಲಿ ತಂಗುವಂತಾಗಿದೆ. ಇಲ್ಲಿ ಕೊರೊನಾ ಬಗ್ಗೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇದೇ ರೀತಿ ಭಾರತದಲ್ಲೂ ತೀವ್ರ ರೀತಿಯ ಕ್ರಮಗಳನ್ನು ಅನುಷ್ಠಾನಿಸಿರುವ ಬಗ್ಗೆ ಮಾಧ್ಯಮಗಳ ಮೂಲಕ ಮತ್ತು ದೂರವಾಣಿ ಮೂಲಕ ತಿಳಿಯಲು ಸಾಧ್ಯವಾಯಿತು. ಕರಾಳ ವೈರಸ್ ದ.ಕ ಜಿಲ್ಲೆಯಲ್ಲೂ ಅಧಿಕೃತಗೊಂಡಿರುವ ಬಗ್ಗೆ ತಿಳಿದು ಆತಂಕವಾಗಿದೆ. ಇಂತಹಾ ಸಂದಿಗ್ದ ಪರಿಸ್ಥಿತಿಯಲ್ಲಿ ನಮ್ಮ ವ್ಯಾಪ್ತಿಯ ಎಲ್ಲಾ ಚರ್ಚ್‌ಗಳ ಸಾಮೂಹಿಕ ಪ್ರಾರ್ಥನೆಗಳನ್ನು ಈಗಾಗಲೇ ನಿರ್ಬಂಧಿಸಿ ಮಾಹಿತಿ ನೀಡಲಾಗಿದೆ. ಜನರೂ ಕೂಡ ಸರಕಾರ ನೀಡುವ ಎಲ್ಲಾ ಸೂಚನೆಗಳನ್ನು ಪಾಲಿಸಿ ಈ ರೋಗದಿಂದ ದೇಶವನ್ನೇ ಮುಕ್ತವನ್ನಾಗಿಸಲು ಸಹಕಾರ ನೀಡಬೇಕು.

ಬಿಷಪ್ ಲಾರೆನ್ಸ್ ಮುಕ್ಕುಯಿ, ಬಿಷಪ್ ಬೆಳ್ತಂಗಡಿ ಧರ್ಮಪ್ರಾಂತ್ಯ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.