ಕೊರೊನಾ ಲಾಕ್ ಡೌನ್ ಮತ್ತು ಏಕತಾನತೆ…..?!! ನಿತ್ಯಾನಂದ ವಿವೇಕವಂಶಿ ಅದ್ಭುತ ಬರಹ.

ಮುಂದಿನ 21 ದಿನಗಳೊಳಗಾಗಿ ಎಷ್ಟು ಜನ ಮನುಷ್ಯರು ಕೊರೋನಾಗೆ ಬಲಿಯಾಗ್ತಾರೋ ನನಗೆ ಗೊತ್ತಿಲ್ಲ.

ಎಷ್ಟು ಜನ ಹಸಿವಿನಿಂದ ನರಳುತ್ತಾರೋ, ಒಂಟಿತನದಿಂದ ಬಳಲುತ್ತಾರೋ, ಏಕತಾನತೆಯಿಂದ ಬಳಲುತ್ತಾರೋ ಇತ್ಯಾದಿ ಇತ್ಯಾದಿಗಳಿಂದ ಬಳಲುತ್ತಾರೋ ಅದೂ ನನಗೆ ಗೊತ್ತಿಲ್ಲ.

ಆದರೆ,

ಈ ಇಪ್ಪತ್ತೊಂದು ದಿನಗಳು ಕಳೆಯುವ ವೇಳೆಗೆ…

@ ಗಂಗಾ ನದಿ ಸೇರಿದಂತೆ ದೇಶದ ಅನೇಕ ನದಿಗಳು ಸ್ವಚ್ಛವಾಗಿರುತ್ತವೆ.

@ ದೆಹಲಿ ಸೇರಿದಂತೆ ಅನೇಕ ನಗರಗಳ ವಾಯುಮಾಲಿನ್ಯ ಇಳಿಮುಖವಾಗಿ ಗಾಳಿ ಶುದ್ಧವಾಗಿರುತ್ತದೆ. ಗಿಡಮರಗಳ ಆರೋಗ್ಯ ಸುಧಾರಿಸುತ್ತದೆ.

@ ಅರಬ್ಬಿ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿಗಳ ಕಡಲ ಕಿನಾರೆಗಳು ಸುಧಾರಿಸಿರುತ್ತವೆ. ಜಲಚರಗಳು ಸ್ವಲ್ಪ ಉಸಿರಾಡಲು ಅವಕಾಶವಾಗುತ್ತದೆ.

@ ಜಲಪಾತಗಳೂ ಸೇರಿದಂತೆ ಪ್ರಕೃತಿಯ ಅನೇಕ ಸುಂದರ ಜಾಗಗಳು ಪ್ಲಾಸ್ಟಿಕ್ ಮುಕ್ತವಾಗಿ ನೀರು ಸರಾಗವಾಗಿ ಹರಿಯುತ್ತದೆ.

@ ಕಾಡಿನ ಪ್ರಾಣಿಗಳು ವಾಹನಗಳ ಪ್ರವೇಶವಿಲ್ಲದೇ ಪ್ರಥಮ ಬಾರಿಗೆ ನಿಜವಾದ ಕಾಡಿನ ದಿವ್ಯಮೌನದ ಸಾನಿಧ್ಯವನ್ನು ಅನುಭವಿಸುತ್ತವೆ.

@ ಮೃಗಾಲಯಗಳಲ್ಲಿ ಮನುಷ್ಯನ ಕಿರಿಕಿರಿಯಿಲ್ಲದೇ ಪ್ರಾಣಿ ಪಕ್ಷಿಗಳು ಆಡಿಕೊಂಡು ನೆಮ್ಮದಿಯಿಂದ ಇರುತ್ತವೆ.

@ ಮನುಷ್ಯನ ಭಯವಿಲ್ಲದೇ ಮನೆಯ ಮುಂದಿನ ಜಗಲಿಯವರೆಗೂ ಗುಬ್ಬಚ್ಚಿಯಂಥಾ ಪುಟ್ಟ ಪುಟ್ಟ ಪಕ್ಷಿಗಳು ಬಂದಿರುತ್ತವೆ.

@ ರೆಸಾರ್ಟ್‌ ಗಳ ಹೆಸರಿನಲ್ಲಿ ಬೆಟ್ಟ ಗುಡ್ಡಗಳಲ್ಲಿ ಮನುಷ್ಯ ಆಕ್ರಮಿಸಿಕೊಂಡಿದ್ದ ಜಾಗಗಳಲ್ಲಿ ಆ ಜಾಗದ ನಿಜವಾದ ಯಜಮಾನರಾದ ಮಂಗಗಳಂಥಾ ಪ್ರಾಣಿಗಳು ಮಾಲಿಕತ್ವದ ಆನಂದವನ್ನು ಅನುಭವಿಸುತ್ತವೆ.

@ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದ ನಾಯಿಗಳು, ಬೆಕ್ಕುಗಳು, ಮೊಲ, ಹಾವು ಇತ್ಯಾದಿ ಪ್ರಾಣಿಗಳು ಜೀವ ಉಳಿಸಿಕೊಳ್ಳುತ್ತವೆ.

@ ಅಷ್ಟರಲ್ಲಿ ಒಂದೆರಡು ಜೋರು ಮಳೆ ಬಂದಿದ್ದರೆ ಮನುಷ್ಯ ಎಲ್ಲೆಂದರಲ್ಲಿ ಉಗಿದಿದ್ದ ಪಾನ್ ಬೀಡಾ ಗುಟ್ಕಾದ ಕಲೆಗಳು ಅಳಿಸಿ ಹೋಗಿ ಭೂಮಿ ತಾಯಿಯ ಮುಖ ಹೊಳೆಯುತ್ತಿರುತ್ತದೆ.

@ ಕಸಾಯಿಖಾನೆಗಳಲ್ಲಿ ದಿನನಿತ್ಯ ಭೀಕರವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದ ಕುರಿ, ಕೋಳಿ, ಮೇಕೆ, ಹಂದಿ, ಹಸು, ಎಮ್ಮೆ, ಮೀನು ಸೇರಿದಂತೆ ಅನೇಕ ಪ್ರಾಣಿ ಪಕ್ಷಿಗಳು 21 ದಿನಗಳ ಕಾಲ ಪ್ರಾಣಭಯದಿಂದ ದೂರವಿರುತ್ತವೆ.

@ ಕೀಟನಾಶಕಗಳ ಸಿಂಪಡಣೆಯಿಂದ, ರಾಸಾಯನಿಕ ರಸಗೊಬ್ಬರದ ಬಳಕೆಯಿಂದ ಭೂಮಿಯ ಒಳಗೆ ಮಾಯವಾಗಿದ್ದ ಎರೆಹುಳುಗಳಂಥಾ ನಿಸ್ವಾರ್ಥ ಜೀವಿಗಳು ಈಗ ಮತ್ತೊಮ್ಮೆ ಮರುಹುಟ್ಟು ಪಡೆದು ಕರ್ತವ್ಯವನ್ನಾರಂಭಿಸುತ್ತದೆ. ಪರಿಸರ ಸ್ನೇಹಿ ಸೂಕ್ಷ್ಮ ಜೀವಿಗಳು ಮರುಹುಟ್ಟು ಪಡೆದು ಭೂಮಿಯ ಆರೋಗ್ಯ ಸುಧಾರಿಸುತ್ತದೆ.

@ 21 ದಿನಗಳಲ್ಲಿ ಹೀಗಾದ ಬದಲಾವಣೆಯನ್ನು ಮನುಷ್ಯ ಗಮನಿಸಿ ಗುರುತಿಸುವಷ್ಟು ಸೂಕ್ಷ್ಮನಾದರೆ ತನ್ನ ಮಿತಿಮೀರಿದ ಶೋಷಣೆಯಿಂದ ಭೂಮಿಯ ಇತರ ಜೀವರಾಶಿಗಳಿಗೆ ಸ್ವಲ್ಪ ದಿನಗಳ ಕಾಲ ಮುಕ್ತಿ ಕೊಡಿಸಲು ಪ್ರಕೃತಿಮಾತೆಯೇ ಈ ಕರೋನಾ ಭೀತಿ ಮೂಡಿಸಿದ್ದಳೇನೋ ಎಂದು ಮನುಷ್ಯನಿಗೆ ಸ್ವಲ್ಪ ಮಟ್ಟಿಗಾದರೂ ಅರಿವು ಬಂದಿರುತ್ತದೆ*.

(ಅಲ್ಲಿಯವರೆಗೂ ಅವನು ಬದುಕಿ ಉಳಿದಿದ್ದರೆ ಮಾತ್ರ…)

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.