ದಕ್ಷಿಣ ಕನ್ನಡ ಜಿಲ್ಲೆ ಲಾಕ್‌ಡೌನ್: ಬೆಳ್ತಂಗಡಿಯಲ್ಲಿ ತೆರೆದ ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು!

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಆದೇಶ ಹಾಗೂ 144 ಸೆಕ್ಷನ್ ಜಾರಿಯಿದ್ದರೂ ತಾಲೂಕಿನಲ್ಲಿ ಕೆಲವು ಅಂಗಡಿಗಳು ತೆರೆದಿದ್ದರಿಂದ ಪೊಲೀಸರು ಧ್ವನಿವರ್ಧಕ ಮೂಲಕ ಬಂದ್ ಮಾಡಲು ಸೂಚಿಸಿದರು.
ತಾಲೂಕಿನಲ್ಲಿ ಮಾ.23ರಂದು ಬೆಳಗ್ಗೆಯಿಂದಲೇ ಜನರ ಸಂಚಾರ ವಿರಳವಾಗಿದ್ದರೂ ಬೆಳ್ತಂಗಡಿ ಬಸ್ ನಿಲ್ದಾಣ ಸೇರಿದಂತೆ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಅಂಗಡಿಗಳಲ್ಲದೇ ಇತರ ಅಂಗಡಿಗಳು ತೆರೆದಿದ್ದರಿಂದ ಪೋಲಿಸರು ಮುಚ್ಚಿಸಿದರು.  ಧರ್ಮಸ್ಥಳ, ಉಜಿರೆಯಂತಹ ಪ್ರಮುಖ ಪ್ರದೇಶಗಳಲ್ಲೂ ತೆರೆದ ಅಂಗಡಿಗಳನ್ನು ಮುಚ್ಚಿಸಲಾಯಿತು. ಅಗತ್ಯ ಕಾರ್ಯಗಳಿಗೆ ಜನರು ಸ್ವಂತ ವಾಹನಗಳಲ್ಲಿ ಸಂಚರಿಸುವುದು ಕಂಡು ಬಂತು.

ಬಸ್ ಸಂಚಾರ ಸ್ಥಗಿತ:
ಬೆಳ್ತಂಗಡಿ ತಾಲೂಕಿನಿಂದ ಸುತ್ತಮುತ್ತಲಿನ ತಾಲೂಕು, ಊರುಗಳಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್, ಖಾಸಗಿ ಸಾರಿಗೆ ಬಸ್‌ಗಳು ಸಂಚರಿಸುವುದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ತಾಲೂಕು ಕೇಂದ್ರ ದಿಂದ ಮಂಗಳೂರು, ಪುತ್ತೂರು, ಕಾರ್ಕಳ, ಉಪ್ಪಿನಂಗಡಿ, ಮೂಡುಬಿದಿರೆ ಸೇರಿದಂತೆ ಹಲವು ಊರುಗಳಿಗೆ ತೆರಳುವ ಸರಕಾರಿ, ಖಾಸಗಿ ಬಸ್‌ಗಳು ಸಂಚಾರ ನಿಲ್ಲಿಸಿದ್ದವು.

ಧರ್ಮಸ್ಥಳ ಪೇಟೆ

ಖಾಸಗಿ ವಾಹನಗಳಿಗೆ ಅವಲಂಬನೆ :
ಬೆಳ್ತಂಗಡಿಗೆ ಸುತ್ತಮುತ್ತಲಿನ ಊರುಗಳಾದ ವೇಣೂರು, ಅಳದಂಗಡಿ, ಧರ್ಮಸ್ಥಳ, ಉಜಿರೆ, ಉಪ್ಪಿನಂಗಡಿ ಸೇರಿದಂತೆ ಹಲವು ಪ್ರದೇಶಗಳಿಂದ ಸಾರ್ವಜನಿಕರು ಅಗತ್ಯ ಕಾರ್ಯಕ್ಕಾಗಿ ಬರಬೇಕಾದರೆ ಖಾಸಗಿ ವಾಹನಗಳಾದ ರಿಕ್ಷಾ, ಮಿನಿ ಟೆಂಪೋ, ಜೀಪು ಮುಂತಾದವುಗಳಿಗೆ ಅವಲಂಬಿಸಬೇಕಾದ ಅನಿವಾರ್ಯತೆ ಒದಗಿದೆ.

ಅಗತ್ಯ ವಸ್ತುಗಳ ಖರೀದಿ:
ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪಟ್ಟಣದಲ್ಲಿ ಸೋಮವಾರದ ಸಂತೆ ರದ್ದಾಗಿದ್ದರೂ ಸಾರ್ವಜನಿಕರು ಅಗತ್ಯ ವಸ್ತುಗಳಾದ ತರಕಾರಿ, ದಿನಸಿ ಸಾಮಾನು, ಮೀನು, ಮಾಂಸ, ಹೂ, ಹಣ್ಣುಗಳನ್ನು ಕೊಂಡು ಕೊಳ್ಳಲು ಹೆಚ್ಚು ಮುಂದಾಗಿರುವುದು ಕಂಡು ಬಂತು.

ಉಜಿರೆ ಪೇಟೆ 

ಅಳದಂಗಡಿ ಪೇಟೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.