ಬೆಳ್ತಂಗಡಿ: ಕೊರೊನಾ ವೈರಸ್ ಎಂಬ ಮಹಾಮಾರಿ ಜಾತ್ರೆ, ಉತ್ಸವ ಮಾತ್ರವಲ್ಲದೆ ಯಕ್ಷಗಾನ ನಿರ್ಬಂಧಕ್ಕೂ ತಲುಪಿದೆ. ಕರಾವಳಿ ಜಿಲ್ಲೆಯ ಹೆಮ್ಮೆಯಾದ ಯಕ್ಷಗಾನಕ್ಕೆ ಮಾ.೧೮ರಿಂದ ಇದೇ ಮೊದಲು ನಿರ್ಬಂಧ ಹೇರಲಾಗಿದೆ.
ಯಕ್ಷಗಾನ ತಡೆಯಿಂದ ಬಹುತೇಕ ಮೇಳಗಳು ಶಾಸ್ತ್ರೋಕ್ತ ಪೂಜೆಗೆ ಮಾತ್ರ ಸೀಮಿತವಾಗಿ ಪ್ರದರ್ಶನಗಳು ರದ್ದುಗೊಂಡಿವೆ. ಯಕ್ಷಗಾನ ಮೇಳಗಳು ದೇವಸ್ಥಾನ ಕ್ಕೆ ಸಂಬಂಧಿಸಿದವು ಹೆಚ್ಚು ಸಂಪ್ರದಾಯ ಪ್ರಕಾರ ಗೆಜ್ಜೆ ಕಟ್ಟಿದ ದಿನ ದೇವರ ಕ್ಷೇತ್ರ ಬಿಟ್ಟು ತಿರುಗಾಟಕ್ಕೆ ಹೊರಟರೆ ಮರಳುವುದು ತಿರುಗಾಟ ಮುಗಿದ ಬಳಿಕವೇ.
ಕಟೀಲಿನ ಆರು ಮೇಳಗಳ ಯಕ್ಷಗಾನ ಪ್ರದರ್ಶನಕ್ಕೆ ತಾತ್ಕಾಲಿಕವಾಗಿ ಜಿಲ್ಲಾಧಿಕಾರಿ ತಡೆ ನೀಡಿದ್ದರಿಂದ 6 ಮೇಳಗಳ ದೇವರ ಪೂಜೆ ಮಾತ್ರ ನೆರವೇರಿಸಲಾಗುತ್ತಿದೆ.
ಧರ್ಮಸ್ಥಳ ಮೇಳದಿಂದಲೂ ಪ್ರದರ್ಶನವಿಲ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳವೂ ತಿರುಗಾಟದಲ್ಲಿರುವಾಗ ಈಗ ಯಕ್ಷಗಾನ ಪ್ರದರ್ಶನ ನಿರ್ಬಂಧ ಹಾಕಿರುವುದರಿಂದ ತೀರ್ಥಹಳ್ಳಿ ಯಲ್ಲಿ ಮಾ.18ರಂದು ಪ್ರದರ್ಶನ ನೀಡಿಲ್ಲ.
ಬಾಚಕೆರೆ ಮೇಳ, ಮೇಗರವಳ್ಳಿ, ಸಾಲಿಗ್ರಾಮ, ಗೋಳಿಗರಡಿ, ಸೌಕೂರು ಮೇಳಗಳು ಪ್ರದರ್ಶನ ಸ್ಥಗಿತಗೊಳಿಸಿವೆ.