ಧರ್ಮಸ್ಥಳ “ಸಿರಿ” ಗ್ರಾಮೋದ್ಯೋಗ ಸಂಸ್ಥೆಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಸರಕು ಸಾಗಾಟದ ಘನ ವಾಹನ ಕೊಡುಗೆ.

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಧರ್ಮಸ್ಥಳ “ಸಿರಿ” ಗ್ರಾಮೋದ್ಯೋಗ ಸಂಸ್ಥೆಗೆ ಶನಿವಾರ ಧರ್ಮಸ್ಥಳದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್ ವತಿಯಿಂದ ಸರಕು ಸಾಗಾಟದ ಘನ ವಾಹನವನ್ನು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಕೊಡುಗೆಯಾಗಿ ನೀಡಿ ಶುಭ ಹಾರೈಸಿದರು. ಹೆಗ್ಗಡೆಯವರ ನಿವಾಸ ಬೀಡಿನಲ್ಲಿ ನಡೆದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಾಧಿಕಾರಿ ಡಿ.  ವೀರೇಂದ್ರ ಹೆಗ್ಗಡೆಯವರು, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಗ್ರಾಮೀಣ ಗುಡಿ ಕೈಗಾರಿಕೆ ಮತ್ತು ಗೃಹ ಕೈಗಾರಿಕೆಗೆ ಪ್ರೋತ್ಸಾಹ ನೀಡಿದಂತೆ, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮೂಲಕ ಸ್ವ-ಸಹಾಯ ಸಂಘಗಳನ್ನು ರಚಿಸಿ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕಚ್ಛಾ ವಸ್ತುಗಳನ್ನು ಒದಗಿಸಿ, ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಿ ಆರ್ಥಿಕ ಸ್ವಾವಲಂಬನೆಗೆ ಪ್ರೇರಣೆ ನೀಡಲಾಗಿದೆ.

ಅವರು ತಯಾರಿಸಿದ ಆಹಾರೋತ್ಪನ್ನಗಳು, ಸಿದ್ಧ ಉಡುಪುಗಳು, ಹಾಳೆತಟ್ಟೆ, ಅಗರಬತ್ತಿ, ರೆಕ್ಸಿನ್, ಶುಚಿಕಾರಕಗಳ ಸಾಗಾಟ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಸಿರಿ ಸಂಸ್ಥೆಯ ಮೂಲಕ ಮಾಡಲಾಗುತ್ತದೆ. ರಾಜ್ಯದಲ್ಲಿ 295 ಗ್ರಾಮಗಳಲ್ಲಿ ಐದು ಸಾವಿರಕ್ಕೂ ಮಿಕ್ಕಿ ಮಹಿಳೆಯರು ಸಿರಿ ಸಂಸ್ಥೆಯ ನೇತೃತ್ವದಲ್ಲಿ ಆರ್ಥಿಕ ಸಬಲೀಕರಣಗೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಿರಿ ಉತ್ಪನ್ನಗಳು ಶ್ರೇಷ್ಠ ಗುಣಮಟ್ಟವನ್ನು ಹೊಂದಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ಕರ್ಣಾಟಕ ಬ್ಯಾಂಕ್‌ಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದ್ದು ತಾವು ಹಾಗೂ ಸಹೋದರರಾದ ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಬ್ಯಾಂಕಿನ ನಿರ್ದೇಶಕರಾಗಿ ಸಹಕರಿಸಿರುವುದಾಗಿ ಹೇಳಿದರು. ರಾಷ್ಟ್ರಮಟ್ಟದಲ್ಲಿ ಸಿರಿ ಉತ್ಪನ್ನಗಳು ಜನಪ್ರಿಯವಾಗಿ ಗ್ರಾಹಕರ ಪ್ರಶಂಸೆಗೆ ಪಾತ್ರವಾಗಲಿ ಎಂದು ಹೆಗ್ಗಡೆಯವರು ಶುಭ ಹಾರೈಸಿದರು.

ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಕಾರ್ಯನಿವಾಹಕ ನಿರ್ದೇಶಕ ಕೆ.ಎನ್. ಜನಾರ್ದನ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಪ್ರಗತಿ-ಸಾಧನೆಯ ಪಕ್ಷಿನೋಟ ನೀಡಿದರು. ಕರ್ಣಾಟಕ ಬ್ಯಾಂಕ್‌ನ ಮಹಾಪ್ರಬಂಧಕ ಚಂದ್ರಶೇಖರ ರಾವ್, ಉಪ ಮಹಾಪ್ರಬಂಧಕ ಚಂದ್ರಶೇಖರ್, ಡಿ, ಹರ್ಷೇಂದ್ರ ಕುಮಾರ್, ಮುಖ್ಯ ಪ್ರಬಂಧಕಿ ಮಲ್ಲಿಕಾ, ಉಜಿರೆ ಕರ್ಣಾಟಕ ಬ್ಯಾಂಕ್ ಶಾಖೆಯ ಪ್ರಬಂಧಕ ಅರವಿಂದ ಭಂಡಾರ್ಕರ್, ಟಾಟಾ ಮೋಟಾರ್‍ಸ್‌ನ ಉದಯ ಮತ್ತು ಅರವಿಂದ ಉಪಸ್ಥಿತರಿದ್ದರು. ಸಿರಿ ಸಂಸ್ಥೆಯ ಜೀವನ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.