ಬೆಳ್ತಂಗಡಿ: ಇಲ್ಲಿನ ಪಟ್ಟಣ ಪಂಚಾಯತ್ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯ ಅಂತಿಮ ಪಟ್ಟಿ ಮಾ. 11 ರಂದು ಪ್ರಕಟಗೊಂಡಿದೆ. ಅಧ್ಯಕ್ಷತೆಗೆ ಹಿಂದುಳಿದ ವರ್ಗ ಬಿ ಮತ್ತು ಉಪಾಧ್ಯಕ್ಷತೆಗೆ ಸಾಮಾನ್ಯ ಮೀಸಲಾತಿ ಅಂತಿಮಗೊಳಿಸಲಾಗಿದೆ. ಈ ಬಗ್ಗೆ ರಾಜ್ಯಪತ್ರ ಬಿಡುಗಡೆಗೊಂಡಿದ್ದು, ಆಕಾಂಕ್ಷಿಗಳಲ್ಲಿ ಸಹಜವಾಗಿಯೇ ಚಟುವಟಿಕೆ ಗರಿಗೆದರಿದೆ.
ರಾಜಕೀಯ ಸಂಖ್ಯಾಬಲ:
ಪಟ್ಟಣ ಪಂಚಾಯತ್ನ 11 ಸ್ಥಾನಗಳಲ್ಲಿ ಬಿಜೆಪಿ 7 ಸ್ಥಾನಗಳಲ್ಲಿ ಗೆದ್ದುಕೊಂಡಿದ್ದರೆ, ಕಾಂಗ್ರೆಸ್ 4 ಸ್ಥಾನಗಳಲ್ಲಿ ಗೆದ್ದುಕೊಂಡಿದೆ.
ಆ ಹಿನ್ನೆಲೆಯಲ್ಲಿ ಬಹುಮತ ಬಿಜೆಪಿ ಕಡೆಗೆ ಇದೆ. ಅದರಲ್ಲೂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಸಂಸದರು ಮತ್ತು ಶಾಸಕರಿಗೆ ಮತದಾನದ ಹಕ್ಕಿದ್ದು ಈ ಇಬ್ಬರೂ ಕೂಡ ಬಿಜೆಪಿಯವರೇ ಆಗಿರೂದರಿಂದ ಬಿಜೆಪಿಗೆ ಇದೆರಡೂ ಪ್ಲಸ್ ಪಾಯಿಂಟ್. ವಿಧಾನ ಪರಿಷತ್ತು ಶಾಸಕರಿಗೆ ತಮ್ಮ ವ್ಯಾಪ್ತಿಯ ಯಾವುದಾದರೂ ಒಂದು ಕಡೆ ಮತ ಹಾಕುವ ಅಧಿಕಾರವಿದ್ದು, ಹರೀಶ್ ಕುಮಾರ್ ಅವರು ಬೆಳ್ತಂಗಡಿಯಲ್ಲಿ ಮತದಾನಕ್ಕೆ ಆಯ್ಕೆ ಮಾಡಿಕೊಂಡರೆ ಕಾಂಗ್ರೆಸ್ ಸ್ಥಾನ 5 ಕ್ಕೇರಲಿದೆ ಅಷ್ಟೆ. ಆದ್ದರಿಂದ ಬೆಳ್ತಂಗಡಿ ಪಟ್ಟಣ ಪಂಚಾಯತ್ನಲ್ಲಿ ಬಿಜೆಪಿ ನಿಚ್ಚಳ ಬಹುಮತದಿಂದ ಅಧಿಕಾರ ಹಿಡಿಯಲಿದೆ.
ನ್ಯಾಯಾಲಯದಲ್ಲಿ ದಾವೆ: ಆಯ್ಕೆ ವಿಳಂಬಕ್ಕೆ ಕಾರಣ:
ನಗರ ಪಂಚಾಯತ್ ಚುನಾವಣೆ ನಡೆದು ವರ್ಷ ಕಳೆದರೂ, ರಾಜ್ಯಮಟ್ಟದಲ್ಲಿ ಮೀಸಲಾತಿ ವಿರೋಧಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯದೆ ಇದುವರೆಗೆ ವಿಳಂಬಗೊಂಡಿತ್ತು. ಈ ಮಧ್ಯೆ ಕಳೆದ ಕಾಂಗ್ರೆಸ್ ಆಡಳಿತದ ಸಂದರ್ಭ ಕೆಲವಾರು ಮಂದಿ ಪ್ರಭಾವ ಬಳಸಿ ಮೀಸಲಾತಿಯಲ್ಲಿ ಬದಲಾವಣೆ ತಂದಿದ್ದರೂ ಸರಕಾರ ಅರ್ಧದಲ್ಲಿ ಬಿದ್ದು ಹೋದುದರಿಂದ ಅದು ಜಾರಿಗೆ ಬಂದಿರಲಿಲ್ಲ.
ಯಾರಾಗಲಿದ್ದಾರೆ ಪಟ್ಟಣ ಪಂಚಾಯತ್ ಅಧ್ಯಕ್ಷರು?
ಹಿಂದುಳಿದ ವರ್ಗ ಬಿ ಮೀಸಲಾತಿ ಪ್ರಕಾರ ಬಿಜೆಪಿಯಿಂದ ಗೆದ್ದಿರುವ ಜಯಾನಂದ ಗೌಡ ಮತ್ತು ಶರತ್ ಕುಮಾರ್ ಶೆಟ್ಟಿ ಅವರು ಅಧ್ಯಕ್ಷತೆಗೆ ಅರ್ಹತೆ ಪಡೆದಿದ್ದಾರೆ. ಉಪಾಧ್ಯಕ್ಷತೆಗೆ ಬಹುಮತವಿರುವ ಬಿಜೆಪಿಯಿಂದ ಯಾರು ಬೇಕಾದರೂ ಆಯ್ಕೆಯಾಗುವ ಸಾಧ್ಯತೆ ಇದೆ. ಇದೀಗ ಅಧಿಕಾರ ಪಟ್ಟದಲ್ಲಿ ಯಾರು ಆಸೀನರಾಗಲಿದ್ದಾರೆ ಎಂಬ ಬಗ್ಗೆ ಕುತೂಹಲ ಮನೆಮಾಡಿದೆ.
(ಸುದ್ದಿ ಬಿಡುಗಡೆ ಮಾ.12 ರ ಆವೃತ್ತಿಯಲ್ಲಿ ಈ ಹಿಂದಿನ ಮೀಸಲಾತಿ ಇದ್ದಂತೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಅರ್ಹತೆ ಇರುವವರ ಹೆಸರು ತಪ್ಪಾಗಿ ಮುದ್ರಣಗೊಂಡಿರುತ್ತದೆ. ಅದನ್ನೂ ಈ ಮೇಲಿನಂತೆ ತಿದ್ದಿ ಓದಬೇಕಾಗಿ ವಿನಂತಿ)