ಬೆಳ್ತಂಗಡಿ: ತನ್ನ ಸಹೋದರ ಮನೆಯಲ್ಲಿದ್ದ ಸಹೋದರಿಯೊಬ್ಬರು ತನ್ನ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಮಕ್ಕಳ ಜೊತೆ ನಾಪತ್ತೆಯಾದ ಘಟನೆ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ತಡವಾಗಿ ಬಂದ ದೂರಿನಂತೆ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಲಾಯಿಲದ ಶೇಖ್ಅಹಮ್ಮದ್ ಎಂಬವರ ಪತ್ನಿ ಶಾಹಿನಾಬಾನು ಅವರ ಪುತ್ರ ಸೈಫಾಜ್(18ವ), ಪುತ್ರಿ ಸೈಜಾನ(15ವ) ಮತ್ತು 5 ವರ್ಷ ಪ್ರಾಯದ ರಿಜ್ವಾನ್ ಅವರು ನಾಪತ್ತೆಯಾದವರು. ಈ ಕುರಿತು ಶಾಹಿನಾಬಾನು ಅವರ ಸಹೋದರ ಹಾರಾಡಿ ನಿವಾಸಿ ಮಹಮ್ಮದ್ ಪರ್ವಿನ್ ಅವರು ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ಮಹಮ್ಮದ್ ಪರ್ವಿನ್ ಅವರ ಸಹೋದರಿ ಶಾಹಿನಾಬಾನು ಅವರನ್ನು 19 ವರ್ಷದ ಹಿಂದೆ ಬೆಳ್ತಂಗಡಿಯ ಲಾಯಿಲದ ಶೇಖ್ ಅಹಮ್ಮದ್ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು.
ಅವರಿಗೆ ಮೂವರು ಮಕ್ಕಳಿದ್ದು, ಮದುವೆಯಾದ ಬಳಿಕ ಸುಮಾರು 10 ವರ್ಷ ಗಂಡನೊಂದಿಗೆ ಬೆಳ್ತಂಗಡಿಯ ಲಾಯಿಲದಲ್ಲಿ ವಾಸವಾಗಿದ್ದವರು, ಬಳಿಕ ಬನ್ನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಆ ಸಮಯ ಶಾಹಿನಾಬಾನು ಊರವರಿಂದ ಹಾಗೂ ಸಂಘದಿಂದ ರೂ. ಐದರಿಂದ ಆರು ಲಕ್ಷದ ತನಕ ಸಾಲ ಪಡೆದಿರುವ ಮಾಹಿತಿ ತಿಳಿದ ಸಹೋದರ ಮಹಮ್ಮದ್ ಪರ್ವಿನ್ ಅವರು ತಂಗಿ, ಭಾವ ಮತ್ತು ಮಕ್ಕಳನ್ನು ತನ್ನ ಹಾರಾಡಿ ಮನೆಯಲ್ಲಿಯೇ ಇರುವಂತೆ ತಿಳಿಸಿದ್ದರು. ಹಾಗಾಗಿ ಕಳೆದ ಸುಮಾರು 2 ತಿಂಗಳಿನಿಂದ ಮಹಮ್ಮದ್ ಪರ್ವಿನ್ ಅವರ ಮನೆಯಲ್ಲಿ ವಾಸವಾಗಿದ್ದವರು, ಫೆ.18ರಂದು ತಂಗಿ, ಭಾವ ಮತ್ತು ಮಕ್ಕಳು ಮನೆಯಿಂದ ನಾಪತ್ತೆಯಾಗಿದ್ದರು. ಈ ಕುರಿತು ಮನೆಯಲ್ಲಿ ವಿಚಾರಿಸಿದಾಗ ಅವರು ಸಂಘಕ್ಕೆ ಹೋಗಿರಬಹುದು ಎಂದು ತಿಳಿಸಿದ್ದರು. ಆದರೆ ಅವರು ಬಾರದೆ ಇದ್ದು, ವಾರದ ಬಳಿಕ ಶೇಖ್ ಅಹಮ್ಮದ್ ಅವರು ಲಾಯಿಲಕ್ಕೆ ಬಂದ ವಿಚಾರ ತಿಳಿದು, ಮಹಮ್ಮದ್ ಪರ್ವಿನ್ ಅವರು ತಂಗಿ ಮತ್ತು ಮಕ್ಕಳ ಬಗ್ಗೆ ವಿಚಾರಿಸಿಕೊಂಡಾಗ “ನಾವು ಸ್ವಲ್ಪ ದಿನ ಜಾವಗಲ್ನಲ್ಲಿದ್ದು, ಬಳಿಕ ಮಂಗಳೂರಿನ ಕಾವೂರಿನಲ್ಲಿ ಇದ್ದೆವು” ಎಂದು ತಿಳಿಸಿದ್ದರು. ಹಾಗಾಗಿ ಮಹಮ್ಮದ್ ಪರ್ವಿನ್ ಅವರು ಕಾವೂರಿಗೆ ಹೋಗಿ ನೋಡಿದಾಗ ಅಲ್ಲಿ ಯಾರು ಇಲ್ಲದಿರುವುದು ಬೆಳಕಿಗೆ ಬಂದಿದ್ದ ಹಿನ್ನೆಲೆಯಲ್ಲಿ ಮಹಮ್ಮದ್ ಪರ್ವಿನ್ ಅವರು ಇದೀಗ ತಡವಾಗಿ ನೀಡಿದ ದೂರಿನಂತೆ ಮಹಿಳಾ ಪೊಲೀಸರು ಪ್ರಕರಣ ದಾಖಲಸಿಕೊಂಡಿದ್ದಾರೆ.