ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದ ನಡ್ತಿಕಲ್ಲು ಸಮೀಪ ಲಾರಿ ಮತ್ತು ಬೈಕ್ ನಡುವೆ ಫೆ.29 ರಂದು ಸಂಭವಿಸಿದ ಅಪಘಾತದಲ್ಲಿ ಗ್ರಾಮದ ಪೋಸ್ಟ್ಮ್ಯಾನ್ ಬಾಬು ಸಾಲ್ಯಾನ್ (೪೬) ಅವರು ಮೃತಪಟ್ಟಿದ್ದಾರೆ.
ಕೂಕ್ರಬೆಟ್ಟು ಕಡೆಯಿಂದ ಬಜಿಲಪಾಡೆ ಕಡೆಗೆ ಸಾಗುತ್ತಿದ್ದ ಲಾರಿ ಮತ್ತು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಲಾರಿಯ ಚಕ್ರಕ್ಕೆ ಬಾಬು ಸಾಲ್ಯಾನ್ ದೇಹ ಸಿಲುಕಿ ಛಿದ್ರವಾಗಿ, ಸ್ಥಳದಲ್ಲೇ ಮೃತಪಟ್ಟರು. ಮೃತದೇಹವನ್ನು ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಲಾರಿ ಚಾಲಕ ಪರಾರಿಯಾಗಿದ್ದು, ಆತನ ವಿರುದ್ಧ ದೂರು ದಾಖಲಾಗಿದೆ. ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಸ್ಥಳಕ್ಕೆ ಭೇಟಿ ನೀಡಿದರು. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರೋಡಿಯಲ್ಲಿ ಹಲವು ವರ್ಷಗಳಿಂದ ಪೋಸ್ಟ್ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವರು ಪೋಸ್ಟ್ ಬಾಬಣ್ಣ ಎಂದೇ ಪ್ರಸಿದ್ಧರಾಗಿದ್ದರು. ಮೃತರು ಪತ್ನಿ, ಪುತ್ರ, ಹಾಗೂ ಪುತ್ರಿಯನ್ನು ಅಗಲಿದ್ದಾರೆ.