ಪತ್ನಿಯ ಕೊಲೆಗೈದ ರೌಡಿಶೀಟರ್ ಫಾರೂಕ್ ಮೈಸೂರಿನಲ್ಲಿ ಪೊಲೀಸ್ ಬಲೆಗೆ

ಬೆಳ್ತಂಗಡಿ: ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಎಂಬಲ್ಲಿ 2019 ರ ಡಿ. 17 ರಂದು ತನ್ನ ಪತ್ನಿಯನ್ನು ಹಲ್ಲೆಗೈದು ಕೊಲೆ ನಡೆಸಿ ಮನೆಯ ಸ್ನಾನದ ಕೊಠಡಿಯಲ್ಲಿ ಎತ್ತಿಹಾಕಿ ತಲೆಮರೆಸಿಕೊಂಡಿದ್ದ ಪತಿ, ರೌಡಿಶೀಟರ್ ಕೂಡ ಆಗಿರುವ ಫಾರೂಕ್(32ವ.) ಅವರನ್ನು ಬೆಳ್ತಂಗಡಿ ಪೊಲೀಸರ ತಂಡ ಮೈಸೂರಿನ ರೈಲ್ವೇ ನಿಲ್ದಾಣದಲ್ಲಿ ಬಲೆಗೆ ಬೀಳಿಸಿದ್ದಾರೆ.
ಉಮರ್ ಫಾರೂಕ್ ಅವರು ತನ್ನ ಪತ್ನಿ, ಇಳಂತಿಲ ಗ್ರಾಮದ ತಸ್ಲೀಮಾ (25 ವ.) ಎಂಬವರನ್ನು ಕೊಲೆಗೈದು ಪರಾರಿಯಾಗಿದ್ದರು.

ಶೌಚಾಲಯದಲ್ಲಿದ್ದ ಮೃತದೇಹ:
ತಸ್ಲೀಮಾ ಅವರ ಮೃತದೇಹ ಮನೆಯ ಶೌಚಾಲಯದಲ್ಲಿ ಗೋಚರಿಸಿತ್ತು. ಆಕೆಯ ತಲೆಯ ಹಿಂಭಾಗ ಮತ್ತು ದೇಹದಲ್ಲಿ ಅಲ್ಲಲ್ಲಿ ಗಾಯದ ಗುರುತುಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪತಿಯೇ ಕೃತ್ಯವೆಸಗಿರಬಹುದೆಂದು ಬಹುತೇಕ ಖಚಿತವಾಗಿತ್ತು. ಆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದರು.
ಹಲವು ಪ್ರಕರಣದ ಆರೋಪಿಯಾಗಿದ್ದ ಫಾರೂಕ್:
ಆರೋಪಿ ಉಮರ್ ಫಾರೂಕ್ ವಿರುದ್ಧ ಗಾಂಜಾ ಸಾಗಾಟ ಮತ್ತು ಮಾರಾಟ, ಕೊಲೆಯತ್ನ ಸೇರಿದಂತೆ 7 ಕೇಸುಗಳು ಬೆಳ್ತಂಗಡಿ, ಪುಂಜಾಲಕಟ್ಟೆ, ಮಂಗಳೂರಿನ ಕಂಕನಾಡಿ ಠಾಣೆಗಳಲ್ಲಿ ವಿಚಾರಣೆ ಹಂತದಲ್ಲಿದೆ.

ಘಟನೆ ನಡೆದಂದಿನಿಂದ ಆರೋಪಿ ಪತ್ತೆಗೆ ಬಲೆಬೀಸಿದ್ದ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ. ಜಿ ಅವರ ನೇತೃತ್ವದ ತಂಡ ಎಸ್.ಐ ನಂದಕುಮಾರ್ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸಂಬಂಧಿಗಳೊಂದಿಗಿನ ಆರೋಪಿಯ ಸಂಪರ್ಕದ ಗುಪ್ತ ಮಾಹಿತಿ ಸಂಗ್ರಹ ಮತ್ತು ಮೊಬೈಲ್ ಟವರ್ ಲೊಕೇಶನ್ ಮೇಲಿನ ಹದ್ದಿನಕಣ್ಣಿನಿಂದಾಗಿ ಮೈಸೂರಿನಲ್ಲಿರುವುದನ್ನು ಖಚಿತಪಡಿಸಿಕೊಂಡು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ದೇವಪ್ಪ, ಪ್ರಮೋದ್, ಹರೀಶ್, ಇಬ್ರಾಹಿಂ, ಅಶೋಕ್, ವೆಂಕಪ್ಪ, ವೆಂಕಟೇಶ್ ನಾಯ್ಕ, ಮಾಲತೇಶ್, ಶಶಿಕುಮಾರ್, ಅಸಿಫ್, ಲಾರೆನ್ಸ್ ಹಾಗೂ ಗಣಕ ಯಂತ್ರ ಸಿಬ್ಬಂದಿಗಳಾದ ದಿವಾಕರ್, ಸಂಪತ್ ಕುಮಾರ್, ಸವಿತಾ ಮತ್ತು ಗೀತಾ ಇವರು ಭಾಗಿಯಾಗಿದ್ದಾರೆ. ಬಂಧಿತ ಫಾರೂಕ್ ಮತ್ತು ಮೃತ ತಸ್ಲೀಮಾ ದಂಪತಿಗೆ ೪ ವರ್ಷ ಪ್ರಾಯದ ಒಂದು ಹೆಣ್ಣು, ಒಂದೂವರೆ ವರ್ಷದ ಒಂದು ಗಂಡು ಮಕ್ಕಳು ಇದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.