HomePage_Banner_
HomePage_Banner_

ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಮೇಲಂತಬೆಟ್ಟು ಶ್ರೀ ಕೊಡಮಣಿತ್ತಾಯ, ಶ್ರೀ ವನದುರ್ಗಾ ದೇವಸ್ಥಾನ, ನಲ್ಕೆತ್ಯಾರು ಶ್ರೀ ಬ್ರಹ್ಮ ಬೈದರ್ಕಳ ಊರ ಗರೋಡಿ

ಮೇಲಂತಬೆಟ್ಟು ಗ್ರಾಮದ ಪ್ರಕೃತಿ ರಮಣೀಯ ರಮ್ಯತಾಣದಲ್ಲಿ ನೆಲೆನಿಂತ, ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕೊಡಮಣಿತ್ತಾಯ(ಯಿ) ದೈವಸ್ಥಾನ, ಶ್ರೀ ವನದುರ್ಗಾ ದೇವಿ ದೇವಸ್ಥಾನ ಹಾಗೂ ನಲ್ಕೆತ್ಯಾರು ಶ್ರೀ ಬ್ರಹ್ಮ ಬೈದರ್ಕಳ ಊರ ಗರೋಡಿಯ ಜೀಣೋದ್ಧಾರ ಪೂರ್ಣಗೊಳ್ಳುತ್ತಿದ್ದು, ಫೆ.೨೪ರಿಂದ ಆರಂಭಗೊಳ್ಳಲಿರುವ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

ಒಂದು ತಿಂಗಳ ಕಾಲ ಜಾತ್ರೆ:
ಒಂದೂವರೆ ಶತಮಾನಕ್ಕೂ ಹಿಂದೆ ಇಲ್ಲಿ ಗ್ರಾಮೀಣ ಸಂಸ್ಕೃತಿಯಲ್ಲಿ ವೈಭವ ಪೂರ್ಣವಾಗಿ ಒಂದು ತಿಂಗಳುಗಳ ಕಾಲ ಜಾತ್ರಾ ಮಹೋತ್ಸವಗಳು ನಡೆಯುತ್ತಿತ್ತು ಎಂಬುದಕ್ಕೆ ಇತಿಹಾಸವಿದೆ. ಧ್ವಜರೋಹಣದ ಬಳಿಕ ತೆಂಗಿನ ಕಾಯಿ ಕುಟ್ಟುವುದರ ಮೂಲಕ ಚಾರಿತ್ರಿಕ ಜಾತ್ರೆಗೆ ಚಾಲನೆ ನೀಡುತ್ತಿದ್ದುದು ಈ ಕ್ಷೇತ್ರದ ವಿಶೇಷತೆಯಾಗಿದೆ. ಗ್ರಾಮದ ದೇವಸ್ಥಾನ, ದೈವಸ್ಥಾನ, ಗರೋಡಿ, ದೊಂಪಬಲಿ, ಮಾರಿ ಪೂಜೆ ಮೊದಲಾದ ಉತ್ಸವಗಳು ನಡೆದ ಬಳಿಕವೇ ಇಲ್ಲಿ ಧ್ವಜಾವರೋಹಣದೊಂದಿಗೆ ಜಾತ್ರೆಯು ಸಂಪನ್ನಗೊಳ್ಳುತ್ತಿತ್ತು.

ವರ್ಷಕ್ಕೆ ಬೇಕಾದ ಸಾಮಾನು ಖರೀದಿ:
ಈ ಊರಿನ ಜಾತ್ರೆ ಸುತ್ತ-ಮುತ್ತಲಿನ ಗ್ರಾಮಗಳ ಜನರ ವ್ಯಾಪಾರ ಕೇಂದ್ರವಾಗಿತ್ತು. ಎಲ್ಲರೂ ಒಂದು ವರ್ಷಕ್ಕೆ ಮನೆಗೆ ಬೇಕಾದ ಸಾಮಾನುಗಳನ್ನು ಇಲ್ಲಿ ಖರೀದಿ ಮಾಡುತ್ತಿದ್ದರು. ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಸಕಲೇಶಪುರ, ಕೇರಳದಿಂದಲೂ ಎತ್ತಿನ ಗಾಡಿಯ ಮೂಲಕ ವ್ಯಾಪಾರಸ್ಥರು ಇಲ್ಲಿಗೆ ಬಂದು ಬೆಳ್ಳಿ, ಬಂಗಾರ, ಪಾತ್ರೆ ಪಗಡೆ, ಜಾನುವಾರುಗಳು, ಮನೆಗೆ ಬೇಕಾದ ವಸ್ತುಗಳು, ದಿನಸಿ ಸಾಮಾನುಗಳು ತಂದು ಮಾರಾಟ ಮಾಡುತ್ತಿದ್ದರು. ವರ್ಷಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಜನರು ಇಲ್ಲಿ ಬಂದು ಸಂಗ್ರಹಿಸುತ್ತಿದ್ದರು.
ಈ ಕ್ಷೇತ್ರವನ್ನು ಜೀಣೋದ್ಧಾರ ಮಾಡಬೇಕೆಂಬ ಭಕ್ತರ ಸಂಕಲ್ಪದಂತೆ ೨೦೦೦ ಎ.೯ರಂದು `ಮಾರಿ ಪೂಜಾ ಸೇವಾ ಸಮಿತಿ’ ರಚಿಸಿ ಈ ಪೂಜೆಯನ್ನು ನಿರಂತವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ೨೦೧೬ ಎ.೮ರಂದು ಶ್ರೀ ಕೊಡಮಣಿತ್ತಾಯ ದೈವದ ಗುಡಿಗೆ ಶಿಲಾನ್ಯಾಸವನ್ನು ಮಾಡಲಾಯಿತು. ೨೦೧೭ ಆ.೧೬ರಂದು ಪಾದುಕಾನ್ಯಾಸ ಕಾರ್ಯಕ್ರಮ ನಡೆದಿದೆ. ಪ್ರಾಚೀನ ವನದುರ್ಗಾ ದೇವಿಯನ್ನು ಗ್ರಾಮದೇವತೆಯಾಗಿ ಹಿಂದೆ ಪೂಜಿಸಲಾಗುತ್ತಿತ್ತು ಎಂದು ದೈವಜ್ಞರಿಂದ ತಿಳಿದು ಬಂದ ಪ್ರಕಾರ ೨೦೧೭ ಸೆ.೨೯ ಮಹಾನವಮಿಯಂದು ಸುಮಂಗಲಿಯರಿಂದಲೇ ದೇವಿಯ ಸಾನಿಧ್ಯದ ಶಿಲಾನ್ಯಾಸವನ್ನು ನೆರವೇರಿಸಲಾಗಿದೆ.

ಸುಮಾರು ರೂ.೬೦ ಲಕ್ಷ ವೆಚ್ಚದಲ್ಲಿ ದೈವಸ್ಥಾನ, ವನದುರ್ಗೆಯ ಸನ್ನಿಧಿ, ಕಲ್ಲುರ್ಟಿ-ಕಲ್ಕುಡ ಮಾಡ, ಪಿಲಿಚಾಮುಂಡಿ ಕಟ್ಟೆ, ಮಹಮ್ಮಾಯಿ ಕಟ್ಟೆ, ಧ್ವಜ ಸ್ತಂಭ, ಗೋಪುರ, ಆವರಣಗೋಡೆ, ಮೊದಲಾದ ಅಭಿವೃದ್ಧಿ ಕೆಲಸಗಳು ಕೆ. ಶೈಲೇಶ್ ಕುಮಾರ್ ಕುರ್ತೋಡಿ ಇವರ ಅಧ್ಯಕ್ಷತೆಯ ಸಮಿತಿಯ ನೇತೃತ್ವದಲ್ಲಿ ಊರ-ಪರವೂರ ಭಕ್ತರ ಸಹಕಾರದಲ್ಲಿ ನಡೆಯುತ್ತಿದೆ. ಸಮಾಜ ಸೇವಕ ಯೋಗೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚಿಸಲಾಗಿದ್ದು, ಎಲ್ಲಾ ಪೂರ್ವ ತಯಾರಿ ಸಿದ್ದತೆಗಳು ಭರದಿಂದ ಸಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.