HomePage_Banner_
HomePage_Banner_

ಫೆ.24-ಮಾ.2: ಗೆಜ್ಜೆಗಿರಿ ನಂದನ ಬಿತ್ತ್‌ಲ್ ಕ್ಷೇತ್ರದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಮೂಲಸ್ಥಾನ ಗರಡಿ ನೇಮೋತ್ಸವ

ಬ್ರಹ್ಮಕಲಶೋತ್ಸವ ವಿವರ

  • ಫೆ. 25: ಹೊರೆಕಾಣಿಕೆ ಮೆರವಣಿಗೆ
  • ಫೆ. 26: ನೂತನ ಕೊಡಿಮರ ಪ್ರತಿಷ್ಠೆ ಮತ್ತು ಧೂಮಾವತಿ ಸಪರಿವಾರ ದೈವಗಳ ಪ್ರತಿಷ್ಠೆ
  • ಫೆ. 27ರಂದು ನಾಗಸಾನಿಧ್ಯದಲ್ಲಿ ಆಶ್ಲೇಷ ಪೂಜೆ.
  • ಫೆ.28: ಸತ್ಯಧರ್ಮ ಚಾವಡಿ ಮತ್ತು ಮೂಲಸ್ಥಾನ ಗರಡಿಗಳಲ್ಲಿ ಗುರು ಸಾಯನ ಬೈದ್ಯರು, ಮಾತೆ ದೇಯಿ ಬೈದ್ಯೆತಿ ಮತ್ತು ಕೋಟಿ ಚೆನ್ನಯರ ದಾರು ವಿಗ್ರಹಗಳು ಮತ್ತು ಪಂಚಲೋಹ ವಿಗ್ರಹಗಳ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ
  • ಫೆ. 29: ಪೂರ್ವಾಹ್ನ ಧೂಮಾವತಿ ನೇಮೋತ್ಸವ, ರಾತ್ರಿ ಕುಪ್ಪೆಪಂಜುರ್ಲಿ ಸಹಿತ ಪರಿವಾರ ದೈವಗಳ ನೇಮೋತ್ಸವ
  • ಮಾರ್ಚ್ 1: ರಾತ್ರಿ ಕೋಟಿ ಚೆನ್ನಯರ ಮೂಲಸ್ಥಾನ ಗರಡಿ ನೇಮೋತ್ಸವ. ಮಾತೆ- ಮಕ್ಕಳ ಪುನೀತ ಸಮಾಗಮ
  • ಮಾರ್ಚ್ 2: ಬೆಳಿಗ್ಗೆ ದೇಯಿ ಬೈದ್ಯೆತಿ ನೇಮೋತ್ಸವ

ಬೆಳ್ತಂಗಡಿ: ಫೆ.24ರಿಂದ ಮಾ. 2ರವರೆಗೆ ಪುತ್ತೂರು ತಾಲೂಕಿನ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಕ್ಷೇತ್ರದಲ್ಲಿ ನಡೆಯಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮೂಲಸ್ಥಾನ ಗರಡಿ ನೇಮೋತ್ಸವಕ್ಕೆ ಭರದಿಂದ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ಕರಾವಳಿ ಮತ್ತು ಹೊರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು 8 ದಿನಗಳ ಮಹೋತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

22 ಉಪ ಸಮಿತಿಗಳ ಮೂಲಕ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕರಾವಳಿ, ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ಜಗತ್ತಿನ ನಾನಾ ಮೂಲೆಗಳಲ್ಲಿರುವ ಭಕ್ತರನ್ನು ಸಂಪರ್ಕಿಸುವ ಕಾರ್ಯ ನಡೆದಿದ್ದು, 500 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನದಲ್ಲಿ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವವನ್ನು ಚಾರಿತ್ರಿಕಗೊಳಿಸಲು ಎಲ್ಲ ಸಿದ್ಧತೆ ನಡೆಸಲಾಗುತ್ತಿದೆ ಎಂದು ಕ್ಷೇತ್ರಾಡಳಿತ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ತಿಳಿಸಿದೆ.

ಗೆಜ್ಜೆಗಿರಿಯಲ್ಲಿ ಎಲ್ಲ ಸಾನಿಧ್ಯಗಳ ನಿರ್ಮಾಣ ಪೂರ್ಣಗೊಂಡಿದ್ದು, ಅಂತಿಮ ಸ್ಪರ್ಷ ನೀಡುವ ಕಾರ್ಯ ನಡೆಯುತ್ತಿದೆ. ಗುರು ಸಾಯನ ಬೈದ್ಯರು, ಮಾತೆ ದೇಯಿ ಬೈದ್ಯೆತಿ ಮತ್ತು ಕೋಟಿ ಚೆನ್ನಯರು ಬಾಳಿ ಬದುಕಿದ್ದ ಪ್ರಾಚೀನ ಮನೆಯನ್ನೇ ಸತ್ಯಧರ್ಮ ಚಾವಡಿ ಹೆಸರಿನಲ್ಲಿ ಪಾರಂಪರಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ. ಶಿಖರಾಗ್ರದಲ್ಲಿ ಕೋಟಿ ಚೆನ್ನಯ ಮೂಲಸ್ಥಾನ ಗರಡಿ ಮತ್ತು ಬೆರ್ಮೆರ್ ಗುಂಡ ತಲೆ ಎತ್ತಿದ್ದು, ತಪ್ಪಲಲ್ಲಿ ಸತ್ಯಧರ್ಮ ಚಾವಡಿ, ಧೂಮಾವತಿ ದೈವಸ್ಥಾನ, ಕುಪ್ಪೆ ಪಂಜುರ್ಲಿ ದೈವಸ್ಥಾನ, ಕಲ್ಲಾಲ್ದಾಯ ಮತ್ತು ಕೊರತಿ ಸಾನಿಧ್ಯ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಹಾಗೂ ಮಾತೆ ದೇಯಿ ಬೈದ್ಯೆತಿ ಸಮಾಧಿ ಪುನರುತ್ಥಾನ ಪೂರ್ಣಗೊಂಡಿದೆ.

ಫೆ. 24ರಂದು ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಾನಗಳು ಆರಂಭಗೊಳ್ಳಲಿದ್ದು, 28ರಂದು ಬ್ರಹ್ಮಕಲಶೋತ್ಸವ ನಡೆಯಲಿದೆ. 29ರಿಂದ ಮಾರ್ಚ್ 2ರವರೆಗೆ ಮೂಲಸ್ಥಾನ ಗರಡಿ ನೇಮೋತ್ಸವ ನಡೆಯಲಿದೆ.

ಫೆ. 25ರಂದು ಕ್ಷೇತ್ರಕ್ಕೆ ಹೊರೆಕಾಣಿಕೆ ಕರಾವಳಿಯ ಮೂಲೆಮೂಲೆಗಳಿಂದ ಬರಲಿದ್ದು, ಮಧ್ಯಾಹ್ನ 12 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಸಮಾವೇಶಗೊಂಡು ಅಲ್ಲಿಂದ ಕ್ಷೇತ್ರಕ್ಕೆ ಮೆರವಣಿಗೆ ನಡೆಯಲಿದೆ. 15ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಮಾರ್ಚ್ 1ರವರೆಗೆ ನಿರಂತರ 6 ದಿನಗಳ ಕಾಲ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ. 5 ದಿನ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸ್ವಾಮೀಜಿಗಳು, ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ. ಕ್ಷೇತ್ರದ ಸುತ್ತಮುತ್ತ 6 ಕಡೆ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಕ್ಷೇತ್ರವನ್ನು ಸಂಪರ್ಕಿಸುವ ಪಟ್ಟೆ- ಗೆಜ್ಜೆಗಿರಿ ರಸ್ತೆ ರಾಜ್ಯ ಸರಕಾರದ 1.5 ಕೋಟಿ ರೂ. ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡಿದ್ದು, ಫೆ.20ರ ವೇಳೆಗೆ ನೂತನ ರಸ್ತೆ ಸಂಪರ್ಕಕ್ಕೆ ಮುಕ್ತಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.