ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಚಾಲನೆ; ಪ್ರಕೃತಿ ಆರಾಧನೆ ತುಳುನಾಡಿನ ವಿಶೇಷತೆ: ಶಶಿಧರ ಶೆಟ್ಟಿ

Advt_NewsUnder_1
Advt_NewsUnder_1
Advt_NewsUnder_1

ಕೊಯ್ಯೂರು: ಇತಿಹಾಸ ಪ್ರಸಿದ್ಧ ಕೊಯ್ಯೂರು ಗ್ರಾಮದ ಮಲೆಬೆಟ್ಟು ಶ್ರೀ ವನದುರ್ಗಾ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಸಭಾಭವನ, ತೀರ್ಥಕೆರೆ, ಉಗ್ರಾಣ ಹಾಗೂ ಬ್ರಹ್ಮಕಲಶೋತ್ಸವದ ಕಚೇರಿಯ ಉದ್ಘಾಟನೆ ಫೆ.೫ರಂದು ವಿದ್ಯುಕ್ತವಾಗಿ ಜರಗುವುದರೊಂದಿಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.


ತೀರ್ಥಕೆರೆಯನ್ನು ಉದ್ಯಮಿ ಬರೋಡದ ಶಶಿಧರ ಶೆಟ್ಟಿ `ನವಶಕ್ತಿ’ ಇವರು ಉದ್ಘಾಟಿಸಿ ಮಾತನಾಡಿ, ತುಳುನಾಡಿನಲ್ಲಿ ಪ್ರಕೃತಿ ಆರಾಧನೆಗೆ ಹೆಚ್ಚಿನ ಮಹತ್ವವಿದೆ. ಪಂಚಭೂತಗಳಲ್ಲಿ ನೀರು ಒಂದಾಗಿದ್ದು, ದೇವಸ್ಥಾನದ ತೀರ್ಥಕೆರೆಯ ಉದ್ಘಾಟನೆ ದೊರೆತ್ತಿರುವುದು ನನ್ನ ಜೀವನದ ಭಾಗ್ಯ, ನಮ್ಮ ಅಂತರಂಗ, ಬಹಿರಂಗ ಶುದ್ಧಿಗೆ ಇದು ಅವಶ್ಯ. ಬಲಿಚಕ್ರವರ್ತಿ ವರ್ಷದಲ್ಲಿ ಒಂದು ಬಾರಿ ದೀಪಾವಳಿಯಲ್ಲಿ ತುಳುನಾಡನ್ನು ನೋಡಲು ಬರುತ್ತಾರೆ ಎಂಬ ನಂಬಿಕೆಯಿದ್ದು, ಈ ನಾಡಿನಲ್ಲಿ ಹುಟ್ಟಿದ ನಾವೆಲ್ಲ ಪುಣ್ಯವಂತರು ಎಂದು ತಿಳಿಸಿದರು.
ಸಭಾಭವನವನ್ನು ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಈ ಸಭಾ ಭವನದ ಮೂಲಕ ಭಾರತೀಯ ಸಂಸ್ಕೃತಿ, ಧರ್ಮದ ಸಂದೇಶಗಳು ಸಾರುವ ಕೆಲಸಗಳು ನಡೆಯಲಿ ಎಂದು ಹಾರೈಸಿದರು. ಉಗ್ರಾಣವನ್ನು ಉದ್ಯಮಿ ರಮಾನಂದ ಸಾಲ್ಯಾನ್ ಉದ್ಘಾಟಿಸಿ ಮಾತನಾಡಿ, ೧೨ ವರ್ಷಗಳ ಬಳಿಕ ದೇವಿಯ ಬ್ರಹ್ಮಕಲಶೋತ್ಸವ ನಡೆಸುವ ಭಾಗ್ಯ ಈ ಊರಿನವರಿಗೆ ದೊರೆತಿದೆ. ಊರಿನವರು ಶ್ರಮಪಟ್ಟು ಉತ್ತಮ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ರಹ್ಮಕಲಶೋತ್ಸವ ಕಚೇರಿಯನ್ನು ಲಕ್ಷ್ಮೀ ಗ್ರೂಪ್ ಉಜಿರೆಯ ಮೋಹನ್‌ಕುಮಾರ್ ಉದ್ಘಾಟಿಸಿ, ನಿರಂತರ ದೇವಿಯ ಆರಾಧನೆ ಮತ್ತು ಪೂಜೆಯಿಂದ ಜೀವನದಲ್ಲಿ ಉನ್ನತಿಯನ್ನು ಪಡೆಯಬಹುದು. ಈ ಗ್ರಾಮದವರಿಗೆ ಬ್ರಹ್ಮಕಲಶೋತ್ಸವನ್ನುನೋಡುವ ಪುಣ್ಯ ಭಾಗ್ಯ ದೊರೆತಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕೊಯ್ಯೂರು ಗ್ರಾ.ಪಂ ಅಧ್ಯಕ್ಷೆ ಶಶಿಕಲಾ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಅಗ್ರಸಾಲೆ, ಕಾರ್ಯಾಧ್ಯಕ್ಷ ಸೀತಾರಾಮ ಶೆಟ್ಟಿ ಕೆಂಬರ್ಜೆ, ಕೋಶಾಧಿಕಾರಿ ಗಣೇಶ್ ಕಾಂತಾಜೆ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಭೂಮಿಕ, ಪ್ರಣೀತ, ವಂಶಿಕ ಇವರ ಪ್ರಾರ್ಥನೆ ಬಳಿಕ ಪ್ರಧಾನ ಸಂಚಾಲಕ ಬಾಲಕೃಷ್ಣ ಪೂಜಾರಿ ಬಜಗುತ್ತು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಕುಲೆಂಜಿರೋಡಿ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ರವೀಂದ್ರನಾಥ ಗೌಡ ಪೆರ್ಮುದೆ ಧನ್ಯವಾದವಿತ್ತರು.

ಅಗ್ನಿಜನನ: ದೇವಸ್ಥಾನದಲ್ಲಿ ಗಣಹೋಮಕ್ಕಾಗಿ ಅರಣಿ ಮಾಧ್ಯಮದ ಮೂಲಕ ಅಗ್ನಿ ಜನನವನ್ನು ಮಾಡಲಾಯಿತು. ಭಕ್ತರ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಗಳ ನೇತೃತ್ವದಲ್ಲಿ ಅನಂತ ಭಟ್ ಶಗ್ರಿತ್ತಾಯ ಹಾಗೂ ಇತರ ವೈದಿಕರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.