5 ತಿಂಗಳ ಬಳಿಕ ಚಾರ್ಮಾಡಿ ಘಾಟ್ ಮಿನಿ ಬಸ್ಸು ಸಂಚಾರಕ್ಕೆ ಮುಕ್ತ

ಬೆಳ್ತಂಗಡಿ: ಕಳೆದ ಆಗಸ್ಟ್ ತಿಂಗಳ ಭಾರೀ ಮಳೆಗೆ ಚಿಕ್ಕಮಗಳೂರು-ದ.ಕ ಜಿಲ್ಲೆಯನ್ನು ಅತ್ಯಂತ ಸಮೀಪದಿಂದ ಸಂಪರ್ಕ ಸಾಧಿಸಬಹುದಾದ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಕೇವಲ 20 ಕಿ.ಮೀ. ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಜಾಗದಲ್ಲಿ ಗುಡ್ಡ ಮತ್ತು ರಸ್ತೆ ಕುಸಿದು ಉಂಟಾಗಿದ್ದ ತೊಂದರೆಯಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದ ಪ್ರದೇಶದಲ್ಲಿ ಇದೀಗ ಮಿನಿ ಬಸ್ಸು ಸಂಚಾರಕ್ಕೆ ಮುಕ್ತಗೊಳಿಸಿ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ತೀರ್ಮಾನಿಸಿ ಆದೇಶ ಹೊರಡಿಸಿದ್ದು, ಆ ನಿಟ್ಟಿನಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಪ್ರಾರಂಭದ ಹಂತದಲ್ಲಿ ಎಲ್ಲಾ ವಾಹನಗಳ ಸಂಚಾರ ಬಂದ್‌ಗೊಳಿಸಲಾಗಿದ್ದ ಈ ಪ್ರದೇಶದಲ್ಲಿ ಬಳಿಕ ಹಗಲು ವೇಳೆ ಲಘುವಾಹನಗಳು ಮತ್ತು ತುರ್ತು ಆಂಬುಲೆನ್ಸ್ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇದೀಗ ಘನವಾಹನ ಹೊರತುಪಡಿಸಿ ಮಿನಿ ಬಸ್ಸು ಸಹಿತ ಇತರ ವಾಹನಗಳು ಸಂಚಾರ ಮಾಡಹುದಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಸಿಂದೂ ಬಿ ರೂಪೇಶ್, ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಹುಕಂ ಆದೇಶ ನೀಡಿದ್ದಾರೆ.
60-70 ಕಿ. ಮೀ ಸುತ್ತಿ ಬಳಸಿ ಮಂಗಳೂರಿಗೆ ಬರಬೇಕಾಗಿತ್ತು:
ಚಾರ್ಮಾಡಿ ಘಾಟ್ ಮೂಲಕ ರಸ್ತೆ ಸಂಚಾರ ನಿಷೇಧವಿದ್ದುದರಿಂದ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗಬೇಕಾದವರು ಸಕಲೇಶಪುರ ಮಾರ್ಗವಾಗಿ 60-70 ಕಿ.ಮೀ. ಸುತ್ತಿಬಳಸಿ ಬರಬೇಕಾದ ಸನ್ನಿವೇಶ ನಿರ್ಮಾಣವಾಗಿತ್ತು. ಇದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗಿದ್ದರು. ಇದೀಗ ಪ್ರಯಾಣಿಕರ ಸಮಸ್ಯೆಯನ್ನರಿತ ಜಿಲ್ಲಾಡಳಿತ ಮಳೆ ಸಂಪೂರ್ಣ ಕ್ಷೀಣಿಸಿರೊದರಿಂದ ಚಾರ್ಮಾಡಿಯಲ್ಲಿ ಕೆ.ಎಸ್.ಆರ್.ಟಿ.ಸಿಯ ಮಿನಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಆದರೆ ಬುಲೆಟ್ ಟಾಂಕರ್ಸ್, ಷಿಪ್ ಕಾರ್ಗೋ ಕಾಂಟೈನರ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಸಾರ್ವಜನಿಕರು ಸಂಚರಿಸುವ ಎಲ್ಲ ಸರ್ಕಾರಿ, ಖಾಸಗಿ ಬಸ್ಸುಗಳ ಸಂಚಾರದ ನಿಷೇಧ ಇನ್ನೂ ಮುಂದುವರಿದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.