ಉಡುಪಿ : ಪ್ರಸಿದ್ಧ ಮಠಗಳಲ್ಲಿ ಒಂದಾದ ಉಡುಪಿ ಪೇಜಾವರ ಮಠದ ಮಠದೀಶರಾದ ಶ್ರೀ ವಿಶ್ವೇಶರ ಪೇಜಾವರ ಶ್ರೀಗಳು(88ವ) ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇಂದು (ಡಿ.29) ರಂದು ಬೆಳಗ್ಗೆ ಪೇಜಾವರ ಮಠದಲ್ಲಿ ಅಸ್ತಂಗತರಾದರು.
ಪೇಜಾವರ ಶ್ರೀಗಳು ಕೀರ್ತಿಶೇಷರಾದ ಘೋಷಣೆಯನ್ನು ಗೋವಿಂದಾ ಹಾಗೂ ಶ್ರೀವಿಶ್ವೇಶತೀರ್ಥರ ಪಾದಾರವಿಂದಕ್ಕೆ ಗೋವಿಂದಾ ಎಂದು ಮೂರು ಬಾರಿ ಹೇಳಿ 9.30ಕ್ಕೆ ಘೋಷಿಸಲಾಯಿತು. ನ್ಯುಮೋನಿಯಾ (ಶ್ವಾಸಕೋಶ ಉಸಿರಾಟ ಸಮಸ್ಯೆ)ಯಿಂದಾಗಿ ಡಿ.20 ಶುಕ್ರವಾರ ಮುಂಜಾನೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ಶ್ರೀಗಳಿಗೆ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತಿದ್ದರು. ಕಳೆದ ಎಂಟು ದಿನಗಳ ನಡುವೆ ಆರೋಗ್ಯ ತುಸು ಚೇತರಿಕೆ ಕಂಡಿದ್ದರೂ ಕೃತಕ ಉಸಿರಾಟ ಮೂಲಕ ಗಂಭೀರ ಸ್ಥಿತಿಯಲ್ಲೆ ಚಿಕಿತ್ಸೆ ಮುಂದುವರೆಸಲಾಗಿತ್ತು. ನಂತರ ಡಿ.27, 28ರಂದು ಶ್ರೀಗಳ ದೇಹ ಸ್ಥಿತಿ ಚಿಂತಾಜನಕವಾಗಿತ್ತು. ಶನಿವಾರ ಸಾಯಂಕಾಲ ಮೆದುಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ವೈದ್ಯರು ತಿಳಿಸಿದ್ದರು. ನಂತರ ಶ್ರೀಗಳ ಇಚ್ಛೆಯಂತೆ ಮಣಿಪಾಲದಿಂದ ಪೇಜಾವರ ಮಠಕ್ಕೆ ಕರೆತರಲಾಗಿದ್ದು, ಮಠದಲ್ಲಿ ಕೊನೆಯುಸಿರೆಳೆದರು. ಮಠಕ್ಕೆ ಹಲವು ಗಣ್ಯಾತಿಗಣ್ಯರು ಭೇಟಿ ನೀಡಲಿದ್ದಾರೆ.
ಉಡುಪಿಯ ಅಜ್ಜರಕಾಡು ಮೈದಾನದಲ್ಲಿ 2 ಗಂಟೆಗಳ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನ ನೀಡಲಾಗಿದೆ. ಉಡುಪಿಯಲ್ಲಿ ದರ್ಶನದ ಬಳಿಕ ಬೆಂಗಳೂರಿಗೆ ಶ್ರೀಗಳ ಪಾರ್ಥಿವ ಶರೀರವನ್ನು ಶಿಫ್ಟ್ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.