ಮಾರ್ಚ್ 22: ಬೆಂಗಳೂರಿನಲ್ಲಿ ಸುದ್ದಿ-ದಕ್ಷಿಣ ಕನ್ನಡಿಗರ ಹಬ್ಬ

* ಶಾಸಕರೊಂದಿಗೆ ಸಂವಾದ-ಸಾಧಕರಿಗೆ ಸನ್ಮಾನ-ಸಾಂಸ್ಕೃತಿಕ ಸಂಭ್ರಮ, ಆಹಾರ ಮೇಳ

* ಸುದ್ದಿಬಿಡುಗಡೆ’ಯಿಂದ ಆಯೋಜನೆ

ಬೆಳ್ತಂಗಡಿ: ಬೆಂಗಳೂರಿನಲ್ಲಿರುವ ಮೈಸೂರು ಬ್ಯಾಂಕ್ ವೃತ್ತ ಬಳಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಾರ್ಚ್ 22ರ ಆದಿತ್ಯವಾರದಂದು ಸುದ್ದಿ ಬಿಡುಗಡೆ ಪತ್ರಿಕೆಯ ನೇತೃತ್ವದಲ್ಲಿ ಸುದ್ದಿ-ದಕ್ಷಿಣ ಕನ್ನಡಿಗರ ಹಬ್ಬ ನಡೆಸಲು ನಿರ್ಧರಿಸಲಾಗಿದೆ.

ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ಮತ್ತು ಬಂಟ್ವಾಳ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ವಾಸ ಇರುವವರನ್ನು ಈ ಹಬ್ಬಕ್ಕೆ ಆಹ್ವಾನಿಸಲು ತೀರ್ಮಾನಿಸಲಾಗಿದೆ. ಇಡೀ ದಿನ ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿರುವ ಕರಾವಳಿಗರ ಸಮ್ಮಿಲನ, ಈ ಭಾಗದವರಾಗಿದ್ದು ಬೆಂಗಳೂರಿನಲ್ಲಿ ಸಾಧನೆಗೈದಿರುವ ವಿವಿಧ ಕ್ಷೇತ್ರದ ಹಲವು ಸಾಧಕರಿಗೆ ಸನ್ಮಾನ ಮತ್ತು ಶಾಸಕರೊಂದಿಗೆ ಸಂವಾದ ಹಾಗೂ ಆಹಾರ ಮೇಳ, ಸಾಂಸ್ಕೃತಿಕ ಸಂಭ್ರಮ ಏರ್ಪಡಿಸಲು ರೂಪುರೇಷೆ ಸಿದ್ಧ ಪಡಿಸಲಾಗಿದೆ. ಬೆಂಗಳೂರಿನಲ್ಲಿರುವ ಸುದ್ದಿ-ದಕ್ಷಿಣ ಕನ್ನಡಿಗರ ಹಬ್ಬ-2020’ರ ಮೊದಲ ಪೂರ್ವಭಾವಿ ಸಭೆ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಸುದ್ದಿ ಬಿಡುಗಡೆ ಕಛೇರಿಯಲ್ಲಿ ನಡೆದಿದ್ದು ಸಮ್ಮಿಲನ ಸಂಭ್ರಮದ ಕುರಿತು ಸಮಾಲೋಚನೆ ನಡೆಸಲಾಯಿತು. ಉದ್ಯೋಗ ಅರಸಿ ಊರು ಬಿಟ್ಟು ಬೆಂಗಳೂರಿಗೆ ಆಗಮಿಸಿದ ಹಲವು ಮಂದಿ ಇದೀಗ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಅವರನ್ನೆಲ್ಲಾ ಒಟ್ಟುಗೂಡಿಸಿ ಬೆಂಗಳೂರಿನಲ್ಲಿರುವ ದಕ್ಷಿಣ ಕನ್ನಡಿಗರ ಹಬ್ಬ-2020 ಆಯೋಜಿಸುವುದು ಎಂದು ನಿರ್ಧರಿಸಲಾಯಿತು.

ಜಿಲ್ಲೆಯ ಸಂಸದರು, ಎಲ್ಲಾ ಶಾಸಕರುಗಳು, ಗ್ರಾ.ಪಂ.ಗಳ ಅಧ್ಯಕ್ಷರುಗಳು ಮತ್ತು ಬೆಂಗಳೂರಿನಲ್ಲಿರುವ ಈ ಭಾಗದವರನ್ನು ಒಟ್ಟು ಸೇರಿಸಿ ಸಂವಾದ ಕಾರ್ಯಕ್ರಮ, ಪರಸ್ಪರ ಗುರುತಿಸುವಿಕೆ ನಡೆಸಲು ಯೋಜನೆ ರೂಪಿಸಲಾಯಿತು. ಕಾರ್ಯಕ್ರಮದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಹಿರಿಯ ಪತ್ರಕರ್ತ ಲಕ್ಷ್ಮೀಶ ಕಾಟುಕುಕ್ಕೆರವರನ್ನು ಆಯ್ಕೆ ಮಾಡಲಾಯಿತು. ಮುಂದೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಕಡಬ ಮತ್ತು ಬಂಟ್ವಾಳ, ಮಂಗಳೂರು ತಾಲೂಕಿನ ಪ್ರಮುಖರನ್ನು ಸೇರಿಸಿಕೊಂಡು ಕೋರ್ ಕಮಿಟಿ ರಚಿಸಿ ಪ್ರತಿ ಶನಿವಾರ ಸಭೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಸಿಂಚನಾ ಊರುಬೈಲು, ಲಕ್ಷ್ಮೀಶ ಕಾಟುಕುಕ್ಕೆ, ರವಿಶಂಕರ್ ಬೆಟ್ಟಂಪಾಡಿ, ಶಿವಶಂಕರ್ ಭಟ್, ಗಣೇಶ್ ಎನ್. ಕಲ್ಲರ್ಪೆರವರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಾಯೋಜಕತ್ವಕ್ಕೆ ಅವಕಾಶ: ಒಟ್ಟು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಳ್ಳುವವರಿಗೆ ಅವಕಾಶ ನೀಡುವುದು ಮತ್ತು ಕಾರ್ಯಕ್ರಮದ ಕುರಿತು ವಿಶೇಷ ಸ್ಮರಣ ಸಂಚಿಕೆಯೊಂದನ್ನು ಹೊರತರುವುದು ಎಂದೂ ತೀರ್ಮಾನಿಸಲಾಯಿತು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.