ಜೈನ ಸ್ವಸಹಾಯ ಸಂಘಗಳ ಸಮಾವೇಶ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಸ್ವಸಹಾಯ ಗುಂಪುಗಳು ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಹಾಗೂ ಮಿತದರದ ಸಾಲವನ್ನು ಪಡೆದುಕೊಂಡು ಸ್ವಾವಲಂಭಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದರು.
ಅವರು ಡಿ.22ರಂದು ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಕರ್ನಾಟಕ ಜೈನ್ ಸ್ವಯಂಸೇವಾ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ನಡೆದ ಅವಿಭಜಿತ ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲಾ ಸ್ವಸಹಾಯ ಸಂಘದ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಮಹಿಳೆಯರಿಗೆ ಸ್ವಾಭಿಮಾನದ ಬದುಕು ಸಮಾಜದ ಪರಿವರ್ತನೆಗೆ ಕಾರಣವಾಗಿದೆ ಎಂದು ಹೇಳಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ಜೈನ ಸ್ವಯಂ ಸೇವಾ ಸಂಸ್ಥೆ ರಾಜ್ಯದ ನೂರು ವಿಧಾನ ಕ್ಷೇತ್ರದಲ್ಲಿ ಸಂಘಟನೆ ಮಾಡುವ ಗುರಿ ಹೊಂದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಜೈನ ಸಮಾಜ ಎಲ್ಲಾ ಸಮುದಾಯದ ಜೊತೆ ಪ್ರೀತಿ-ವಿಶ್ವಾಸದಿರುವ ಸಮಾಜವಾಗಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಅಧ್ಯಕ್ಷ ನೇಮಿರಾಜ ಆರಿಗ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಹಿಂದಿ, ಇಂಗ್ಲೀಷ್, ಹಾಗೂ ಮಲೆಯಾಳಿ ಭಾಷೆ ಮಾತನಾಡುವ ಸಿಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಬ್ಯಾಂಕಿನಲ್ಲಿ ವ್ಯವಹಾರಕ್ಕೆ ತೊಡಕಾಗಿದ್ದು, ಹೆಚ್ಚು ಸಂಖ್ಯೆಯಲ್ಲಿ ಕನ್ನಡ ಮಾತನಾಡುವವರನ್ನು ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಸಂಸದರಲ್ಲಿ ಮನವಿ ಮಾಡಿದರು.
ವೇದಿಕೆಯಲ್ಲಿ ಜಿನರಾಜ ಆರಿಗ ಪಟ್ಟಾಜೆಗುತ್ತು, ಸ್ಪರ್ಶ ಕಲಾಮಂದಿರದ ಮಾಲಕ ಸುಭಾಶ್ಚಂದ್ರ ಜೈನ್, ಬಂಟ್ವಾಳ ಕ್ಷೇತ್ರ ಸಂಚಾಲಕ ವೃಷಭ ಕುಮಾರ ಇಂದ್ರ, ಸಲಹಾ ಸಮಿತಿ ಅಧ್ಯಕ್ಷೆ ಧನ್ಯಾಕುಮಾರಿ, ಸ್ವಸಹಾಯ ಸಂಘದ ಮೇಲ್ವಿಚಾರಕ ಶಿವರಾಜ ಜೈನ್ ಟ್ರಸ್ಟಿಗಳಾದ ಶಮಂತ್‌ಕುಮಾರ್ ಜೈನ್, ಸುಜಾತ ಎನ್ ಆರಿಗ, ಶಶಿಕುಮಾರ್ ಜೈನ್ ಉಪಸ್ಥಿತರಿದ್ದರು.
ಬಂಟ್ವಾಳ ಕ್ಷೇತ್ರದ ಕಾರ್ಯದರ್ಶಿ ಸುಚಿಯಾ ಜೈನ್ ಸ್ವಾಗತಿಸಿದರು. ಭಾರತಿ ಆಶಾಧರ ವಂದಿಸಿದರು. ರಿತಿಕಾ ಜೈನ್ ಕೊಯಕ್ಕುಡೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.