ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ನಕಲಿ ಅಂಕಪಟ್ಟಿ ಆರೋಪ ಪ್ರಕರಣ

ಬೆಳ್ತಂಗಡಿ: ನಗರದಲ್ಲಿ ಕಾರ್ಯಾಚರಿಸುತ್ತಿರುವ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಎಂಬಿಎ ಶಿಕ್ಷಣ ನೀಡುವ ನೆಪದಲ್ಲಿ ಅಧಿಕ ಹಣ ಪಡೆದು ನಕಲಿ ಸರ್ಟಿಫಿಕೆಟ್ ನೀಡಿ ವಂಚಿಸಲಾಗಿದೆ ಎಂಬುದಾಗಿ ಅದೇ ಸಂಸ್ಥೆಯ ಉದ್ಯೋಗಿಯಾಗಿದ್ದ ಸವಣಾಲು ಗ್ರಾಮದ ಕಪ್ರೊಟ್ಟು ನಿವಾಸಿ ಸುಮಲತಾ ಅವರು 2018 ಮಾ. 29 ರಂದು ನೀಡಿದ್ದ ದೂರು ಅರ್ಜಿಯ ಮೇಲೆ ಕೇಸು ದಾಖಲಿಸಿಕೊಂಡಿದ್ದ ಬೆಳ್ತಂಗಡಿ ಪೊಲೀಸರು ಇದೀಗ ಸಮಗ್ರ ತನಿಖೆಯ ವೇಳೆ ತಮ್ಮ ದೂರಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳನ್ನು ನೀಡಲು ದೂರುದಾರರು ವಿಫಲವಾದ ಹಿನ್ನೆಲೆಯಲ್ಲಿ ಸದ್ರಿ ಪ್ರಕರಣ “ಸಾಕ್ಷ್ಯಾಧಾರ ರಹಿತ” ಎಂದು ಪರಿಗಣಿಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಆ ಮೂಲಕ ಸುಮಲತಾ ಅವರು ನೀಡಿದ ದೂರನ್ನು ಮುಕ್ತಾಯಗೊಳಿಸಿ ಸಂಸ್ಥೆಯಿಂದ ವಶಪಡಿಸಿಕೊಂಡಿದ್ದ ಎಲ್ಲಾ ದಾಖಲೆಗಳನ್ನು ಸಂಬಂಧಿಸಿದವರಿಗೆ ಬಿಟ್ಟುಕೊಡಲು ನ್ಯಾಯಾಲಯ ಅನುಮತಿ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಅಂದು ಕೇಸಿಗೊಳಗಾಗಿ ವಂಚನೆ ಆರೋಪ ಎದುರಿಸುತ್ತಿದ್ದ ಸಂಸ್ಥೆಯ ಮುಖ್ಯಸ್ಥ ಮತ್ತು ಪ್ರಾಂಶುಪಾಲ ತಲ್‌ಹತ್, ಕೋಆರ್ಡಿನೇಟರ್ ಮುನೀರಾ ಕೆ, ಸಲಹೆಗಾರ ಅಶ್ರಫ್ ಅಲಿ ಅವರು ಆರೋಪದಿಂದ ಮುಕ್ತರಾಗಿದ್ದಾರೆ.
ಸುಮಲತಾ ಅವರು ದೂರು ನೀಡಿದಂತೆ, ತಾನು 2014 ಜು. 16 ರಿಂದ ಇದೇ ಸಂಸ್ಥೆಯಲ್ಲಿ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮುಗಿಸಿ ಅದಕ್ಕೆ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ಪಡೆದಿದ್ದೆ. ಈ ನಡುವೆ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದು ಕಾಲೇಜು ಮುಖ್ಯಸ್ಥರು ಎಂಬಿಎ ಕೋರ್ಸ್ ಮಾಡುವಂತೆ ಸೂಚಿಸಿದ ಮೇರೆಗೆ ನನ್ನಿಂದ 60 ಸಾವಿರ ರೂ. ಶುಲ್ಕ ಪಡೆದು 2016 ರಲ್ಲಿ ನಕಲಿ ಅಂಕ ಪಟ್ಟಿ ನೀಡಿರುತ್ತಾರೆ. ನಾನು ಖಾಸಗಿ ಉದ್ಯೋಗಕ್ಕಾಗಿ ಉಜಿರೆಯ ಸಂಸ್ಥೆಯೊಂದಕ್ಕೆ ಇದೇ ಸರ್ಟಿಫಿಕೆಟ್ ನೀಡಿದಾಗ ಪರಿಶೀಲಿಸಿದ ಅವರು, ಇದು ನಕಲಿ ಅಂಕಪಟ್ಟಿ ಎಂದು ತಿಳಿಸಿದ್ದಾರೆ ಎಂದು ಆರೋಪಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಈ ಬಗ್ಗೆ ಸಮಗ್ರ ವಿಚಾರಣೆ ನಡೆಸುವ ವೇಳೆ ನ್ಯಾಯಾಲಯದ ಅನುಮತಿ ಮೇರೆಗೆ ಕಾಲೇಜಿನ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದರು. ಇವುಗಳ ಪರಿಶೀಲನೆ ವೇಳೆ, ಸದ್ರಿ ಸಂಸ್ಥೆಯ ನೋಂದಾವಣೆ ಕ್ರಮಬದ್ಧವಾಗಿರುವುದನ್ನು ಖಚಿತಪಡಿಸಿಕೊಂಡಿದೆ. ದೂರುದಾರರು ತನಗೆ 2012 ರಲ್ಲಿ ವಂಚನೆ ಆಗಿದೆ ಎಂದು ತಿಳಿದಿದ್ದರೂ ದೂರು ನೀಡುವಾಗ 14 ತಿಂಗಳು ತಡವಾದುದಕ್ಕೆ ಕಾರಣ ನೀಡಿರುವುದಿಲ್ಲ. ಕಾಲೇಜಿನ 62 ದಾಖಲೆಗಳ ಪರಿಶೀಲನೆಯ ವೇಳೆ ಸುಮಲತಾ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿರುವ ದಾಖಲೆಗಳು ಸಿಕ್ಕಿದ್ದರೂ ಆಕೆ ಎಂ.ಬಿ.ಎ ಕೋರ್ಸ್ ಮಾಡಿದ ಬಗ್ಗೆಯಾಗಲೀ, ಎಡ್ಮಿಷನ್ ಪತ್ರವಾಗಲೀ, ತರಗತಿ ಹಾಜರಾತಿ ದಾಖಲೆಯಾಗಲೀ, ಪರೀಕ್ಷೆ ಬರೆದ ಪ್ರಶ್ನೆಪತ್ರಿಕೆಯಾಗಲೀ, ಹಾಲ್‌ಟಿಕೇಟ್ ಆಗಲೀ, ಶುಲ್ಕ ಸ್ವೀಕೃತಿ ರಶೀದಿಯಾಗಲೀ ತನಿಖೆಗೆ ಹಾಜರುಪಡಿಸದೇ ಇರುವುದರಿಂದ ಇಲ್ಲಿ ಎಂಬಿಎ ಕೋರ್ಸ್ ಮಾಡಿರುವ ಆರೋಪ ಪುಷ್ಟೀಕರಿಸಲು ಅಸಾಧ್ಯವಾಗಿದೆ. ದೂರುದಾರರಿಗೆ ಠಾಣೆಯಿಂದ ೪ ಬಾರಿ ನೋಟೀಸು ಜಾರಿ ಗೊಳಿಸಿದ್ದರೂ ದೂರಿನ ಬಗ್ಗೆ ದಾಖಲೆ ಹಾಜರುಪಡಿಸಿರುವುದಿಲ್ಲ ಎಂದು ಬಿ ರಿಪೋರ್ಟ್‌ನಲ್ಲಿ ಉಲ್ಲೇಖವಿದೆ.

ಸಂಸ್ಥೆಯ ದಾಖಲೆ ಪರಿಶೀಲನೆ ವೇಳೆ ಸಂಸ್ಥೆ ಮುಂಬೈಯ ಸ್ವಾಯತ್ತ ಸಂಸ್ಥೆ ಇಂಡಿಯನ್ ಟೆಕ್ನಿಕಲ್ ಎಜ್ಯುಕೇಶನ್ ಸೊಸೈಟಿ (ಐಟಿಇಎಸ್) ನೊಂದಿಗೆ ಸಂಯೋಜನೆಗೊಂಡಿರುತ್ತದೆ. ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಡಿಪ್ಲೋಮಾ ಮತ್ತು ಐಟಿಐ ವೃತ್ತಿಪರ ಕೋರ್ಸುಗಳನ್ನು ನಡೆಸಲು ಮಾನ್ಯತಾ ಪತ್ರ ಪಡೆದಿರುವುದು ದೃಢಪಟ್ಟಿರುವುದರಿಂದ ಇದೊಂದು ನಕಲಿ ಸಂಸ್ಥೆಯಾಗಿರುವುದು ದೃಢಪಡುವುದಿಲ್ಲ. 2014 ರಿಂದ ಕಾರ್ಯನಿರ್ವಹಿಸುವ ಸಂಸ್ಥೆಯಲ್ಲಿ ಹಲವು ಮಂದಿ ತರಬೇತಿ ಪೂರ್ತಿಗೊಳಿಸಿದ್ದು, ಎಂಬಿಎ ಕೋರ್ಸ್ ವಂಚನೆಯಾಗಿರುವ ಬಗ್ಗೆ ದೂರುದಾರರು ಬಿಟ್ಟು ಬೇರೆ ದೂರುಗಳು ಬಂದಿರುವುದಿಲ್ಲ. ದೂರುದಾರರು ಆರೋಪಿಸಿರುವ ಅಶ್ರಫ್ ಆಲಿ ಅವರು ದಾಖಲೆಗಳಲ್ಲಿ ಸಂಸ್ಥೆಯ ಯಾವುದೇ ಅಂಗಅಲ್ಲ, ಸಂಸ್ಥೆಯ ಪ್ರಕಟಣೆಗಳನ್ನು ಸುದ್ದಿ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದುದು ಮಾತ್ರ ಎಂಬುದೂ ತನಿಖೆಯಿಂದ ಪೊಲೀಸ್ ಇಲಾಖೆ ಮನವರಿಕೆ ಮಾಡಿಕೊಂಡಿದೆ. ಪಿರ್‍ಯಾದಿದಾರರು ನಕಲಿ ಎಂದು ಆಪಾದಿಸಿರುವ ಪ್ರಮಾಣಪತ್ರದಲ್ಲಿ ಸಂಸ್ಥೆಯ ಮೊಹರು, ಮುಖ್ಯಸ್ಥರ ಸಹಿ ಇರುವುದು ಕಂಡು ಬರುವುದಿಲ್ಲ, ಆದುದರಿಂದ ಸುಮಲತಾ ಅವರು ನೀಡಿರುವ ತಕ್ಷೀರಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ನೀಡುವಲ್ಲಿ ಅವರು ವಿಫಲವಾಗಿರುವುದರಿಂದ ಸದ್ರಿ ಪ್ರಕರಣವನ್ನು “ಸಾಕ್ಷ್ಯಾಧಾರವಿಲ್ಲದ ಪ್ರಕರಣ” ಎಂದು ಪರಿಗಣಿಸಿ ತನಿಖಾ ಇಲಾಖೆ ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಕೆ ಮಾಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.