ನಿಡ್ಲೆ ಗ್ರಾಮದ ಪನ್ನಾಜೆ ಎಂಬಲ್ಲಿ ಡಿ. 11 ರಂದು ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಮನೆಯೊಳಗೆ ಕಪಾಟಿನಲ್ಲಿಟ್ಟಿದ್ದ ಕರಿಮಣಿ ಸರ ಮತ್ತು 5 ಸಾವಿರ ರೂ. ನಗದು ಕಳ್ಳತನಗೈದ ಘಟನೆ ನಡೆದಿದೆ.
ಇಲ್ಲಿನ ನಿವಾಸಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉದ್ಯೋಗಿಯಾಗಿರುವ ಡೀಕಯ್ಯ ಗೌಡ ಅವರ ಮನೆಯಲ್ಲಿ ಈ ಕಳ್ಳತನವಾಗಿದೆ. ಡೀಕಯ್ಯ ಅವರು ಎಂದಿನಂತೆ ಕರ್ತವ್ಯಕ್ಕೆ ತೆರಳಿದ್ದರು. ಪತ್ನಿ ಸ್ಥಳೀಯ ಮಿಲ್ಕ್ಸೊಸೈಟಿಗೆ ಗುಂಪು ಚಟುವಟಿಕೆಗೆ ಹೋಗಿದ್ದರು. ಮಕ್ಕಳಿಬ್ಬರು ಶಾಲೆ ಮತ್ತು ಸಂಬಂಧಿಕರ ಮನೆಯಲ್ಲಿದ್ದು, ಈ ವೇಳೆ ಹಗಲು ವೇಳೆಯೇ ಮನೆಗೆ ನುಗ್ಗಿದ ಕಳ್ಳರು ಬಾಗಿಲನ್ನು ಮೀಟಿ ಒಳನುಗ್ಗಿ ಕೃತ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.
ಮಿಲ್ಕ್ ಸೊಸೈಟಿಗೆ ಹೋಗಿದ್ದ ಮನೆಯೊಡತಿ ಯಶೋಧಾ ಮರಳಿ ಬಂದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಲಾಗಿದ್ದು ಸ್ಥಳ ಮಹಜರು ನಡೆಯಬೇಕಾಗಿದೆ. ಇದೇ ಪರಿಸರದಲ್ಲಿ ಬೈಕಿನಲ್ಲಿ ಅಪರಿಚತ ವ್ಯಕ್ತಿಯನ್ನು ಜನ ಕಂಡಿದ್ದಾರೆ ಎಂದೂ ಮಾಹಿತಿ ಲಭಿಸಿದೆ.