ದೇಶವನ್ನೇ ಬೆಚ್ಚಿಬೀಳಿಸಿದ್ದ ಹೈದರಾಬಾದ್ ನಲ್ಲಿ ನಡೆದಿದ್ದ ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿಗಳಾದ ಮಹಮ್ಮದ್ ಆರೀಫ್, ಜೊಲ್ಲು ಶಿವ, ಚನ್ನಕೇಶವಲು ಹಾಗೂ ನವೀನ್ ಎಂಬವರನ್ನು ಷಾದ್ ನಗರದಲ್ಲಿ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆಂದು ಹೇಳಲಾಗಿದೆ.ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್ ತಂಡದಿಂದ ಎನ್ಕೌಂಟರ್ ಮಾಡಲಾಗಿದ್ದು, ಸ್ಥಳ ಪರಿಶೀಲನೆಗೆಂದು ಕೃತ್ಯ ನಡೆದ ಸ್ಥಳಕ್ಕೆ ಇವರುಗಳನ್ನು ಕರೆದುಕೊಂಡು ಹೋಗಿದ್ದ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆಗ ಪೊಲೀಸರು ಗುಂಡು ಹಾರಿಸಿದ್ದಾರೆ. ಇದರ ಪರಿಣಾಮ ನಾಲ್ವರು ಆರೋಪಿಗಳೂ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿ ದೇಶದಾದ್ಯಂತ ಭಾರೀ ಪ್ರತಿಭಟನೆ ನಡೆದಿತ್ತು. ಅಲ್ಲದೇ ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ತ್ವರಿತವಾಗಿ ನಡೆಸಿ ಗಲ್ಲಿಗೇರಿಸಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಇದೀಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.