ಬೆಳಾಲಿನ ಮಂಞನೊಟ್ಟು ದರ್ಗಾ ಸಮಿತಿ ಅಧ್ಯಕ್ಷರಾಗಿದ್ದ ಅಬ್ದುಲ್ ರಹಿಮಾನ್ ಅಂಗರಕಂಡ ನಿಧನ

ಬೆಳಾಲು: ಇಲ್ಲಿನ ಮಂಞನೊಟ್ಟು ದರ್ಗಾ ಶರೀಫ್ ಆಡಳಿತ ಸಮಿತಿ ಮತ್ತು ಬೆಳಾಲು ಮಸ್ಜಿದ್ ಸಮಿತಿ ಅಧ್ಯಕ್ಷರಾಗಿದ್ದ ಅಬ್ದುಲ್ ರಹಿಮಾನ್ ಅಂಗರಕಂಡ (ಅದ್ದುವಾಕ) (52ವ.)ಅವರು ಹೃದಯಾಘಾತದಿಂದ ಡಿ. 4 ರಂದು ನಿಧನರಾಗಿದ್ದಾರೆ.
ಬೆಳಾಲು ಮಸ್ಜಿದ್ ಬಳಿಯ ನಿವಾಸಿಯಾಗಿರುವ ಅವರಿಗೆ ನ. 30 ರಂದು ಹೃದಯಬೇನೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಉಜಿರೆ ಅಶ್ವಿನ್ ಕ್ಲಿನಿಕ್‌ನ ವೈದ್ಯಾಧಿಕಾರಿಗೆ ತೋರಿಸಿ ಬಳಿಕ ತುರ್ತು ಚಿಕಿತ್ಸೆಗೆ ಮಂಗಳೂರಿಗೆ ಹೋಗಿ ಅಲ್ಲಿ ಎಂಜಿಯೋಗ್ರಾಂ ಮಾಡಲಾಗಿತ್ತು. ಇದಾಗಿ ಡಿ. 4 ರಂದು ಸಂಪೂರ್ಣ ಚೇತರಿಸಿಕೊಂಡು ಡಿಸ್ಚಾರ್ಜ್‌ಗೊಂಡವರೇ ಊರಿಗೆ ಮರಳುವ ವೇಳೆ ಮತ್ತೆ ಅಶ್ವಿನ್ ಕ್ಲಿನಿಕ್‌ಗೆ ಬಂದು ವೈದ್ಯರ ಜೊತೆ ಮಾತನಾಡಿ ಹೊರಬಂದಾಗ ಮತ್ತೊಮ್ಮೆ ಹೃದಯಾಘಾತಕ್ಕೊಳಗಾದರು. ಈ ವೇಳೆ ಅವರನ್ನು ತಕ್ಷಣ ಬೆನಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದರು.
ಅಬ್ದುಲ್ ರಹಿಮಾನ್ ಅವರು ಬೀಡಿಗುತ್ತಿಗೆದಾರರಾಗಿ ಊರಿನಲ್ಲಿ ಪರಿಚಿತರಾಗಿದ್ದರು. ಇತರ ವೇಳೆಗಳಲ್ಲಿ ಸಣ್ಣ ವ್ಯಾಪಾರಗಳ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು. ಸರಳ ಸಜ್ಜನಿಯ ವ್ಯಕ್ತಿಯಾಗಿದ್ದ ಅವರು ಊರಿನಲ್ಲಿ ಎಲ್ಲ ಧರ್ಮೀಯರ ಜೊತೆ ಸಮಾನವಾಗಿ ಬೆರೆಯುತ್ತಾ ಸೌಹಾರ್ದ ಪ್ರಿಯರಾಗಿದ್ದರು. ಅತ್ಯುತ್ತಮ ಸಂಘಟಕರೂ ಆಗಿದ್ದ ಅವರು ಬೆಳಾಲು ನೂತನ ಮಸ್ಜಿದ್ ನಿರ್ಮಾಣ, ಮಂಞನೊಟ್ಟು ದರ್ಗಾದ ಉರೂಸ್ ಮತ್ತು ಇತರ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದರು.
ಇಲ್ಲಿನ ಆಡಳಿತ ಮಂಡಳಿಗಳಲ್ಲಿ ಅಧ್ಯಕ್ಷರೂ ಸಹಿತ ಎಲ್ಲ ಹುದ್ದೆಗಳಲ್ಲೂ ಕೆಲಸಮಾಡಿದ್ದರು. ಪ್ರಸ್ತುತ ಅವರು ಎಸ್‌ವೈಎಸ್ ಬೆಳಾಲು ಬ್ರಾಂಚ್ ಸಮಿತಿ ಅಧ್ಯಕ್ಷರಾಗಿದ್ದರು.
ಕೊನೆಗೆ ಅವರು ಭಾಗವಹಿಸಿದ್ದು ಎಸ್‌ವೈಎಸ್ ಮೀಟಿಂಗ್‌ಗೆ:
ನ. 3೦ ರಂದು ಉಜಿರೆಯಲ್ಲಿ ನಡೆದಿದ್ದ ಎಸ್‌ವೈಎಸ್‌ನ ವಿಶೇಷ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಸಂಘಟನೆಗೆ ಆಸ್ತಾನ ನಿರ್ಮಿಸುವ ಬಗ್ಗೆ ನಡೆದಿದ್ದ ಸಭೆಯಲ್ಲಿ ಭಾಗಿಯಾಗಿದ್ದ ಅವರು ಅನಾರೋಗ್ಯ ನಿಮಿತ್ತ ಅಲ್ಲಿಂದಲೇ ಸಭೆಯ ಅನುಮತಿ ಪಡೆದು ನೇರವಾಗಿ ಮಂಗಳೂರಿನ ಆಸ್ಪತ್ರೆಗೆ ಸೇರಿದ್ದರು. ಇದು ಅವರ ಜೀವಿತಾವಧಿಯಲ್ಲಿ ಅವರು ಭಾಗವಹಿಸಿದ ಕೊಇನೆಯ ಸಂಘಟನಾ ಸಭೆ ಆಗಿತ್ತು.
ಡಿ. 5 ರಂದು ಅಂತ್ಯಸಂಸ್ಕಾರ:
ಡಿ. 4 ರಂದು ಸಂಜೆ ವೇಳೆ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು ಅವರ ಮೃತದೇಹವನ್ನು ಮನೆಯಲ್ಲಿ ಸಾರ್ವಜನಿಕ ಸಂದರ್ಶನಕ್ಕೆ ಇಡಲಾಗಿತ್ತು. ಡಿ. 5 ರಂದು ಬೆಳಿಗ್ಗೆ ಎಲ್ಲ ವಿಧಿವಿಧಾನಗಳನ್ನು ಪೂರೈಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸರ್ವಧರ್ಮೀಯ ಸಾವಿರಾರು ಮಂದಿ ಅವರ ಅಂತಿಮದರ್ಶನ ಪಡೆದು ಕಂಬನಿ ಮಿಡಿದರು.

ಮೃತರು ಪತ್ನಿ, ಎಳೆಯ ಇಬ್ಬರು ಮಕ್ಕಳು, ಸಹೋದರರು ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.