“ಕೊಲ್ಲಿ ದುರ್ಗಾ ಕ್ಷೇತ್ರ” ದಲ್ಲಿ ಮದುವೆ….”ಕಾಜೂರು ದರ್ಗಾ ಕ್ಷೇತ್ರ” ದಲ್ಲಿ ಔತಣ!

ವಿಶೇಷ ಬರಹ: ಅಚ್ಚು ಮುಂಡಾಜೆ.

“ಕೊಲ್ಲಿ ದುರ್ಗಾ ಕ್ಷೇತ್ರ” ದಲ್ಲಿ ಮದುವೆ….”ಕಾಜೂರು ದರ್ಗಾ ಕ್ಷೇತ್ರ” ದಲ್ಲಿ ಔತಣ!
ತುಂಗಪ್ಪ ಕಾಜೂರು ಅವರ ಪುತ್ರ ಅವಿನಾಶ್ ಕೆ ಮದುವೆಯಲ್ಲಿ ಮೇಳೈಸಿದ ಸೌಹಾರ್ದತೆ

ಮಿತ್ತಬಾಗಿಲು; ನಾಡಿನ ಸೌಹಾರ್ದ ಪರಂಪರೆಗೆ ಉಜ್ವಲ ಕೊಡುಗೆ ನೀಡಿದ, ಪರಸ್ಪರ ಧರ್ಮೀಯರೂ ಸೌಹಾರ್ದತೆಯಿಂದ ಬಾಳುತ್ತಾ ನಾಡಿನ ಸಂದೇಶ ರವಾನಿಸುತ್ತಿರುವ ಕ್ಷೇತ್ರಗಳಾದ ಮಿತ್ತಬಾಗಿಲು ಗ್ರಾಮದ ಕೊಲ್ಲಿ ಶ್ರೀ ದುರ್ಗಾ ದೇವಿಯ ಕ್ಷೇತ್ರ ಮತ್ತು ಕಾಜೂರು ದರ್ಗಾ ಶರೀಫ್ ಡಿ. 1 ರಂದು ಮತ್ತೊಂದು ಸೌಹಾರ್ದತೆಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ಅಷ್ಟಕ್ಕೂ ಅಲ್ಲಿ ನಡೆದದ್ದು ಧಾರ್ಮಿಕ ಆಚರಣೆಯಲ್ಲ. ಆದರೆ ಪರಸ್ಪರ ಧರ್ಮೀಯರ ನಡುವೆ ಕೋಮು ವಿಷ ಬೀಜ ಬಿತ್ತಿ, ಜಾತೀಯತೆಯ ಅಡ್ಡಗೋಡೆ ನಿರ್ಮಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಜನರಿಗೆ ಅಲ್ಲಿ ಇಂದು ಸ್ಪಷ್ಟ ಸಂದೇಶ ರವಾನಿಸಿದವರು ತುಂಗಪ್ಪ ಕಾಜೂರು ಮತ್ತು ದೇವಕಿ ದಂಪತಿ. ಕೊಲ್ಲಿ ದುರ್ಗೆಯ ಕ್ಷೇತ್ರದಲ್ಲಿ ಮಗನಿಗೆ ಮದುವೆ ಮಾಡಿಸಿ ಕಾಜೂರು ದರ್ಗಾ ಕ್ಷೇತ್ರದಲ್ಲಿ ಆಗಮಿಸಿದ ಬಂಧುಮಿತ್ರರಿಗೆ ಔತಣ ಕೂಟ ಏರ್ಪಡಿಸಿದ್ದರು.

ತುಂಗಪ್ಪ ಮತ್ತು ದೇವಕಿ ದಂಪತಿ ತಮ್ಮ ಪ್ರಥಮ ಪುತ್ರ ಅವಿನಾಶ್ ಕೆ ಅವರ ವಿವಾಹವನ್ನು ಮಂಗಳೂರು ತಾಲೂಕು ಜಪ್ಪು ವಿಶ್ವನಾಥ ಅವರ ಪುತ್ರಿ ಕೌಶಿಕಾ ಅವರ ಜೊತೆ ಕೊಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನದ ಸನ್ನಿಧಿಯಲ್ಲಿ ಮಧ್ಯಾಹ್ನ ವಿಜಯಾಭ್ಯುದಯ ವಿಕಾರಿ ನಾಮ ಸಂವತ್ಸರ ವೃಶ್ಚಿಕ ಮಾಸ ಶುಭಲಗ್ನ ಸಮಯ 12.20 ರ ಅಭಿಜಿತ್ ಲಗ್ನ ಮುಹೂರ್ತದಲ್ಲಿ ಸಾಂಪ್ರದಾಯಿಕವಾಗಿ ಧಾರೆಯೆರೆಯುವ ಮೂಲಕ ನಡೆಸಿಕೊಟ್ಟರೆ, ಆಗಮಿಸಿದ ಬಂಧು ಮಿತ್ರರಿಗೆ, ಇಷ್ಟಪ್ರಿಯರಿಗೆ ಔತಣಕೂಟ ಆಯೋಜಿಸಿದ್ದು ಇತಿಹಾಸ ಪ್ರಸಿದ್ಧ ಕಾಜೂರು ದರ್ಗಾ ಶರೀಫ್ ಸನ್ನಿಧಿಯಲ್ಲಿ.


ವಿಶಾಲ ಚಪ್ಪರ, ಮಾಂಸಾಹಾರ ಮತ್ತು ಸಸ್ಯಾಹಾರ ಖಾದ್ಯಗಳಿಗೆ ಪ್ರತ್ಯೇಕ ಪೆಂಡಾಲ್, ವಧೂವರರಿಗೆ ಆಶೀರ್ವದಿಸಲು ಆಗಮಿಸುವವರಿಗಾಗಿ ವೈಭವದ ವೇದಿಕೆ ಇವುಗಳನ್ನು ನಿರ್ಮಿಸಿ ವೈಪವೋಪೇತವಾಗಿ ಮತ್ತು ಅಷ್ಟೇ ಸಂಪ್ರದಾಯಭದ್ದವಾಗಿ ಕಾರ್ಯಕ್ರಮ ಆಯೋಜಿಸಿದ್ದರು.
ಅಲ್ಲಿ ಆತ್ಮೀಯತೆಯ ವಾತಾವರಣ ಇತ್ತು. ಹಿಂದೂ ಮುಸ್ಲಿಂ ಧರ್ಮೀಯರೆಲ್ಲರೂ ಎಳ್ಳಷ್ಟೂ ಭೇದವಿಲ್ಲದೆ ಒಟ್ಟಾಗಿ ಬೆರೆತು ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಿದರು. ಗಣ್ಯಾತಿಗಣ್ಯರೂ ಮದುವೆಗೆ ಸಾಕ್ಷಿಯಾದರು.
ಮದುಮಗನ ತಂದೆ, ಸಾಮಾಜಿಕ ಮುಂದಾಳು, ಕಂಬಳ ಸಂಘಟಕರೂ ಆಗಿರುವ ತುಂಗಪ್ಪ ಕಾಜೂರು ಅವರು ಆಗಮಿಸಿದವರ ಪೈಕಿ ಮುಸಲ್ಮಾನರ ಜೊತೆ ಅಪ್ಪಟ ಬ್ಯಾರಿ ಭಾಷೆಯಲ್ಲೇ ಮಾತನಾಡಿ ಅವರನ್ನು ಆದರದಿಂದ ಬರಮಾಡಿಕೊಂಡರೆ, ಹಿಂದೂಗಳನ್ನು ಸನಾತನ ಹಿಂದೂ ಧರ್ಮದ, ತುಳುನಾಡಿನ ಕಟ್ಟುಕಟ್ಟಳೆಯಂತೆ ಅಷ್ಟೇ ಪ್ರೀತಿ ಗೌರವದಿಂದ ಬರಮಾಡಿಕೊಂಡು ಪುತ್ರನ ವಿವಾಹ ಸಮಾರಂಭದಲ್ಲಿ ನಾಡಿಗೆ ಮಾದರಿಯಾಗುವಂತೆ ಸಂಭ್ರಮಪಟ್ಟರು.

ಅತ್ತ ಕೊಲ್ಲಿ ದುರ್ಗೆಯ ಕ್ಷೇತ್ರದಲ್ಲಿ ಮಂಗಳವಾದ್ಯದಲ್ಲಿ ಅರ್ಚಕರು ವಿವಾಹ ವಿಧಿ ಪೂರೈಸಿ ನವ ದಂಪತಿಯನ್ನು ಹರಿಸಿದರೆ, ಇತ್ತ ಕಾಜೂರು ದರ್ಗಾದಲ್ಲಿ ಅಧ್ಯಕ್ಷ ಇಬ್ರಾಹಿಂ ಕೆ.ಯು ಮತ್ತು ಎಲ್ಲ ಪದಾಧಿಕಾರಿಗಳು ವಿವಾಹ ಮಂಟಪಕ್ಕೆ ಆಗಮಿಸಿ ನವ ದಂಪತಿಗೆ ಶಾಲು ಹೊದಿಸಿ ವಿಶೇಷ ಗೌರವ ಸಲ್ಲಿಸುವ ಮೂಲಕ ಆಶೀರ್ವಾದ ಮಾಡಿದರು. ತುಂಗಪ್ಪ ಅವರ ಪುತ್ರನ ಈ ವಿವಾಹ ಸಮಾರಂಭ ಕಾಜೂರು ದರ್ಗಾ ಶರೀಫ್ ಸನ್ನಿಧಿಯ ಪಕ್ಕದಲ್ಲೇ ಆಯೋಜನೆಗೊಂಡಿದ್ದರಿಂದ ಮುಸ್ಲಿಂ ಧರ್ಮ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಅವರು ಮ್ಯೂಸಿಕಲ್ ಡಿಜೆ ಗಳನ್ನು ಬಳಸದೆ ಕ್ಷೇತ್ರಕ್ಕೆ ಗೌರವನ್ನೂ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.