ಚಾರ್ಮಾಡಿ ಘಾಟ್: ದಿನದ ಇಪ್ಪತ್ತನಾಲ್ಕು ಗಂಟೆಯಲ್ಲೂ ಲಘುವಾಹನ ಸಂಚಾರಕ್ಕೆ ಮುಕ್ತ

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ದಿನದ 24 ಗಂಟೆಯೂ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಿ, ಭಾರೀ ವಾಹನಗಳ ಸಂಚಾರ ನಿಷೇಧ ವಿಸ್ತರಿಸಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ.ಈ ರಸ್ತೆಯಲ್ಲಿ ಲಘು ವಾಹನಗಳಿಗೆ ನ.28ರಿಂದ ದಿನದ 24 ಗಂಟೆಯೂ ಮುಕ್ತ ಪ್ರವೇಶವಿದೆ. ಆದರೆ ಎಲ್ಲ ರೀತಿಯ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ಆದೇಶವು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ. ಚಾರ್ಮಾಡಿ ಘಾಟ್‌ನಲ್ಲಿ ನಿರಂತರವಾಗಿ ಸುರಿದ ಭಾರೀ ಮಳೆಗೆ ರಸ್ತೆಗಳು ಸಂಪೂರ್ಣ ಹಾಳಾಗಿದ್ದವು. ರಾಷ್ಟ್ರೀಯ ಹೆದ್ದಾರಿ 73ರ ಮಂಗಳೂರು-ವಿಲ್ಲಪುರಂ ರಸ್ತೆಯ 76 ಕಿ.ಮೀ.ನಿಂದ 86 ಕಿ.ಮೀ.ವರೆಗಿನ ರಸ್ತೆಯ ಮಾರ್ಗದಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಸೆ.15ರಿಂದ ಲಘು ವಾಹನಗಳಿಗೆ ಮಾತ್ರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಲಾಗಿತ್ತು. ಸದ್ಯ ಈ ಆದೇಶವನ್ನು ಮಾರ್ಪಾಡಿಸಿರುವ ಜಿಲ್ಲಾಧಿಕಾರಿ, ಲಘು ವಾಹನಗಳಿಗೆ 24 ಗಂಟೆಯೂ ಸಂಚಾರಕ್ಕೆ ಮುಕ್ತಗೊಳಿಸಿದ್ದರೆ, ಭಾರೀ ವಾಹನಗಳ ಸಂಚಾರದ ನಿಷೇಧವನ್ನು ಮುಂದುವರಿಸಿದ್ದಾರೆ.

ಚಾರ್ಮಾಡಿ ಘಾಟ್‌ನ ಪ್ರಸ್ತಾಪಿತ ಮಾರ್ಗದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ರಾ.ಹೆ. ವಿಭಾಗದಿಂದ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಅಪಘಾತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಘಾಟ್‌ನಲ್ಲಿ ಅವಕಾಶ ಕಲ್ಪಿಸಿರುವ ಲಘು ವಾಹನಗಳು ವೇಗದ ಮಿತಿಯನ್ನು ಪ್ರತಿ ಗಂಟೆಗೆ 20 ಕಿ.ಮೀ.ಗೆ ಮೀರದಂತೆ ಸಂಚರಿಸಬೇಕು. ಅತ್ಯಂತ ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು. ಫೋಟೊಗ್ರಫಿ ಮತ್ತು ಸೆಲ್ಫಿ ತೆಗೆಯುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶದಲ್ಲಿ ತಿಳಿಸಿದ್ದಾರೆ.

ವಾಹನಗಳ ವರ್ಗೀಕರಣ

ಸಂಚರಿಸಬಹುದಾದ ಲಘು ವಾಹನಗಳು: ಕಾರು, ಜೀಪು, ಟೆಂಪೊ, ವ್ಯಾನ್, ಎಲ್‌ಸಿವಿ (ಮಿನಿವ್ಯಾನ್), ದ್ವಿಚಕ್ರ ವಾಹನಗಳು ಮತ್ತು ಆ್ಯಂಬುಲೆನ್ಸ್‌ಗಳು ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ನಿರ್ಬಂಧಿಸಲಾದ ಭಾರೀ ವಾಹನ: ಟ್ಯಾಂಕರ್ಸ್, ಶಿಪ್ ಕಾರ್ಗೊ ಕಂಟೈನರ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮಿರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್, ಟ್ರಕ್ ಟ್ರೈಲರ್, ಸಾರ್ವಜನಿಕರು ಸಂಚರಿಸುವ ಬಸ್‌ಗಳು, ರಾಜಹಂಸ ಮತ್ತು ಎಲ್ಲ ಬಗೆಯ ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿರ್ಬಂಧಿಸಲಾಗಿದೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.