ಕಟೀಲು ಮೇಳದಿಂದ ಪಟ್ಲ ಸತೀಶ ಶೆಟ್ಟಿ ಕಿಕ್ ಔಟ್

Advt_NewsUnder_1
Advt_NewsUnder_1
Advt_NewsUnder_1

ಕಟೀಲು ಯಕ್ಷಗಾನ ಮೇಳದ ಖ್ಯಾತ ಭಾಗವತ ಪಟ್ಲ ಸತೀಶ ಶೆಟ್ಟಿ ಅವರನ್ನು ಮೇಳದಿಂದಲೇ ಕಿತ್ತು ಹಾಕಲಾಗಿದೆ. ನಿನ್ನೆ ರಾತ್ರಿ ಮೇಳದ ಈ ಸಾಲಿನ ತಿರುಗಾಟದ ಹಿನ್ನೆಲೆ ಕಟೀಲು ದೇವಸ್ಥಾನದ ಆವರಣದಲ್ಲಿ ಯಕ್ಷಗಾನ ನಡೆಯುತ್ತಿದ್ದಾಗಲೇ ಭಾಗವತಿಕೆ ನಡೆಸುತ್ತಿದ್ದ ಪಟ್ಲ ಸತೀಶ ಶೆಟ್ಟಿಯನ್ನು ವೇದಿಕೆಯಿಂದ ಎಬ್ಬಿಸಿ ಹೊರಕ್ಕೆ ಕಳಿಸಲಾಗಿದೆ‌. ಮೇಳದ ವ್ಯವಸ್ಥಾಪಕರು ಮತ್ತು ದೇವಸ್ಥಾನದ ಆಡಳಿತದ ಈ ನಿರ್ಧಾರ ಪಟ್ಲ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಟೀಲು ಮೇಳದಲ್ಲಿ ಕಲಾವಿದರ ಶೋಷಣೆಯಾಗುತ್ತಿದೆ, ಸಂಬಳ ನೀಡದೆ ಸತಾಯಿಸುತ್ತಿದ್ದಾರೆಂದು ಮೇಳದಿಂದ ಹೊರಹಾಕಲ್ಪಟ್ಟ ಕಲಾವಿದರು ಸೇರಿ ಎರಡು ವರ್ಷಗಳ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ಬಳಿಕ, ಯಕ್ಷಗಾನ ಮೇಳವನ್ನು ಸಾರ್ವಜನಿಕ ಹರಾಜು ನಡೆಸುವಂತೆ ಆರು ತಿಂಗಳ ಹಿಂದೆ ಕೋರ್ಟ್ ಆದೇಶ ನೀಡಿತ್ತು.

ದೇವಸ್ಥಾನದ ಆಸ್ರಣ್ಣ ಕುಟುಂಬಸ್ಥರು ಮತ್ತು ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದರಿಂದ ಎರಡು ವರ್ಷಗಳಿಂದ ನಡೆದಿದ್ದ ಕೋರ್ಟ್ ವ್ಯಾಜ್ಯ ಕಲಾವಿದರಲ್ಲಿ ಆಶಾಕಿರಣ ಮೂಡಿಸಿತ್ತು. ಕೋರ್ಟ್ ನಿರ್ದೇಶನದಂತೆ ದ.ಕ. ಜಿಲ್ಲಾಧಿಕಾರಿಗಳು ಹರಾಜು ಪ್ರಕ್ರಿಯೆ ನಡೆಸಲು ಮುಜರಾಯಿ ಆಯುಕ್ತರಿಗೆ ಶಿಫಾರಸು ಮಾಡಿದ್ದರು.

ಕೊನೆಗೆ ಮುಜರಾಯಿ ಆಯುಕ್ತರು ಕೂಡ ಇತ್ತೀಚೆಗೆ ಮೇಳದ ಹರಾಜು ನಡೆಸುವಂತೆ ಆದೇಶ ಮಾಡಿದ್ದರು. ಇದಾಗುತ್ತಿದ್ದಂತೆ ಎಚ್ಚತ್ತುಕೊಂಡ ಕಟೀಲು ದೇವಸ್ಥಾನದ ಆಡಳಿತ ಮತ್ತು ಆಸ್ರಣ್ಣ ಕುಟುಂಬಸ್ಥರು ರಾಜಕೀಯ ಒತ್ತಡದ ಮೂಲಕ ಹರಾಜು ಪ್ರಕ್ರಿಯೆ ನಡೆಯದಂತೆ ನೋಡಿಕೊಂಡಿದ್ದರು. ಇದೇ ವೇಳೆ ಹೈಕೋರ್ಟ್ ಮೆಟ್ಟಿಲೇರಿ, ಜಿಲ್ಲಾಧಿಕಾರಿ ಮತ್ತು ಮುಜರಾಯಿ ಆಯುಕ್ತರ ಆದೇಶಕ್ಕೆ ತಡೆ ತಂದಿದ್ದಾರೆ. ದ.ಕ. ಜಿಲ್ಲಾಧಿಕಾರಿಗಳು ದೇವಸ್ಥಾನದ ಆಡಳಿತದ ಕಡೆಯ ಅಹವಾಲನ್ನು ಪರಿಗಣಿಸದೆ ನಿರ್ಧಾರ ತಗೊಂಡಿದ್ದಾರೆಂದು ಮೇಳದ ವ್ಯವಸ್ಥಾಪಕರು ಹೈಕೋರ್ಟಿನಲ್ಲಿ ಆಕ್ಷೇಪಿಸಿದ್ದರು‌.

ಇದಲ್ಲದೆ ನ.22ರ ಬಳಿಕ ಮೇಳದ ಈ ಸಾಲಿನ ತಿರುಗಾಟ ನಡೆಯಬೇಕಿದ್ದರಿಂದ ತಾತ್ಕಾಲಿಕವಾಗಿ ಈಗ ಇರುವಂತೆಯೇ ಮೇಳ ಮುಂದುವರಿಸಲು ಅನುಮತಿ ನೀಡಬೇಕೆಂದು ಕೇಳಿಕೊಂಡ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿತ್ತು. ಎರಡು ದಿನಗಳ ಹಿಂದಷ್ಟೇ ಬಂದಿದ್ದ ಹೈಕೋರ್ಟ್ ತೀರ್ಪು, ಕಟೀಲು ದೇವಸ್ಥಾನದ ಆಡಳಿತಕ್ಕೆ ಸಿಕ್ಕ ನೈತಿಕ ಜಯವಾಗಿದ್ದರೆ, ಶೋಷಣೆಗೊಳಗಾದ ಕಲಾವಿದರ ಪಾಲಿಗೆ ಮಸಿ ಬಳಿದಂತಾಗಿತ್ತು.

ಇದೀಗ ಮೇಳದ ತಿರುಗಾಟದ ಮೊದಲ ದಿನವೇ ಕಲಾವಿದರಿಗೆ ಬೆನ್ನೆಲುಬಾಗಿ ನಿಂತಿದ್ದ ಭಾಗವತ ಪಟ್ಲ ಸತೀಶ ಶೆಟ್ಟಿಯನ್ನು ಮೇಳದಿಂದ ಕಿತ್ತು ಹಾಕಲಾಗಿದೆ. ದೇವಸ್ಥಾನದ ಅಂಗಣದಲ್ಲಿ ಯಕ್ಷಗಾನ ಭಾಗವತಿಕೆ ನಡೆಸುತ್ತಿದ್ದಾಗಲೇ ಅರ್ಧದಿಂದ ಎಬ್ಬಿಸಿ ಅವಮಾನಿಸಿದ್ದು ಕಲಾವಿದರ ಮತ್ತು ಯಕ್ಷ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಟೀಲಿನಲ್ಲಿ ಸದ್ಯಕ್ಕೆ ಆರು ಮೇಳಗಳಿದ್ದು ಪಟ್ಲ ಸತೀಶ ಶೆಟ್ಟಿ ಸುಮಾರು 15 ವರ್ಷಗಳಿಂದ ಭಾಗವತರಾಗಿದ್ದಾರೆ. ಅರ್ಧ ರಾತ್ರಿಯ ಬಳಿಕ ವೇದಿಕೆ ಏರುತ್ತಿದ್ದ ಪಟ್ಲರ ಶೃಂಗಾರ ರಸದ ಆಲಾಪನೆ ಯಕ್ಷಾಭಿಮಾನಿಗಳನ್ನು ಆಕರ್ಷಿಸಿತ್ತು. ಸರಿ ರಾತ್ರಿಯ ಬಳಿಕ ಪ್ರೇಕ್ಷಕರು ಎದ್ದು ಹೋಗುತ್ತಿದ್ದ ಸನ್ನಿವೇಶಕ್ಕೆ ಬ್ರೇಕ್ ಹಾಕಿದ್ದು ಪಟ್ಲ ಭಾಗವತಿಕೆ. ಈಗ ವೈಯಕ್ತಿಕ ಹಗೆತನದಿಂದಾಗಿ ಪಟ್ಲರನ್ನು ಮೇಳದಿಂದ ಅವಮಾನಕಾರಿಯಾಗಿ ಹೊರಕಳಿಸಿದ್ದಲ್ಲದೆ, ಮೇಳದ ವ್ಯವಸ್ಥಾಪಕರ ದರ್ಪವನ್ನು ಸಾರ್ವಜನಿಕವಾಗಿ ತೋರಿಸಿಕೊಟ್ಟಂತಾಗಿದೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.